ಪುತ್ತೂರು: ಇಲ್ಲಿಯ ವಿಟ್ಲ ನಿವಾಸಿಯೊಬ್ಬರು ಉಪ್ಪಿನಂಗಡಿಯ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.
ಮೂಲತಃ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಅರಿಮೂಲೆ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಮಹಮ್ಮದ್ ಶರೀಫ್ (37) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಇವರು ಇಳಂತಿಲ ಗ್ರಾಮದ ಮುರ ನಿವಾಸಿ ಮಹಿಳೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಪ್ರಸ್ತುತ ಪತ್ನಿ ಜತೆ ಉಪ್ಪಿನಂಗಡಿಯ ನೆಕ್ಕಿಲಾಡಿಯ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದರು.
ಜ. 25 ರಂದು ಬೆಳಗ್ಗೆ ಶರೀಫ್ ಉಪ್ಪಿನಂಗಡಿ ಲಾಡ್ಜ್‌ನಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಜ. 26ರಂದು ರೂಂ ಖಾಲಿ ಮಾಡುವುದಾಗಿ ತಿಳಿಸಿದ ಅವರು ರೂಮ್‌ನಿಂದ ಹೊರ ಬಾರದಿದ್ದಾಗ ಅನುಮಾನಗೊಂಡ ಲಾಡ್ಜ್ ಮ್ಯಾನೇಜರ್ ರೂಂ ಬಾಗಿಲು ತಟ್ಟಿದ್ದಾರೆ.
ರೂಮ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮ್ಯಾನೇಜರ್ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ತೆರೆದ ವೇಳೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶರೀಫ್ ಶವ ಪತ್ತೆಯಾಗಿದೆ.
ಪೈಟಿಂಗ್ ಕೆಲಸ ಮಾಡುತ್ತಿದ್ದ ಪತಿ ಆರ್ಥಿಕವಾಗಿ ಬಹಳ ತೊಂದರೆಯಲ್ಲಿದ್ದು, ಕಷ್ಟದ ಸಮಯದಲ್ಲಿ ಹಲವು ಮಂದಿಯಿಂದ ಕೈ ಸಾಲ ಸಹ ಪಡೆದುಕೊಂಡಿದ್ದರು. ಈ ಬಗ್ಗೆ ಪತ್ನಿ ಉಪ್ಪಿನಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Post a Comment