ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಧ್ವಾಚಾರ್ಯರ ಮೂಲ ಸಂಸ್ಥಾನದ ಶ್ರೀ ಕೇಶವನಿಧಿ ತೀರ್ಥರು ವಿಧಿವಶ

ಮಧ್ವಾಚಾರ್ಯರ ಮೂಲ ಸಂಸ್ಥಾನದ ಶ್ರೀ ಕೇಶವನಿಧಿ ತೀರ್ಥರು ವಿಧಿವಶ


ಉಡುಪಿ: ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ಪದ್ಮನಾಭ ತೀರ್ಥರ ಪರಂಪರೆಯ ಶ್ರೀ ಶ್ರೀಪಾದರಾಜ ಮಠಾಧೀಶರಾದ ಶ್ರೀ ಕೇಶವನಿಧಿ ತೀರ್ಥರು ಇಂದು ಬೆಳಗಿನ ಜಾವ 4:30ಕ್ಕೆ (28-01-2022 ಪುಷ್ಯ ಬಹುಳ ಏಕಾದಶೀ ಶುಭ ಪರ್ವಕಾಲದಲ್ಲಿ) ಶ್ರೀಹರಿಯ ಪಾದ ಸೇರಿದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.


ಶ್ರೀ ಕೇಶವನಿಧಿ ತೀರ್ಥರ ನಿರ್ಯಾಣದ ಸುದ್ದಿ ತಿಳಿದು ಪರ್ಯಾಯ ಕೃಷ್ಣಾಪುರ ಶ್ರೀ, ಪಲಿಮಾರು, ಪೇಜಾವರ ಶ್ರೀಗಳೂ ಸೇರಿದಂತೆ ಎಲ್ಲ ಅಷ್ಟಮಠಾಧೀಶರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಜಗದ್ಗುರು ಮಧ್ವಾಚಾರ್ಯರು ಸಂಸ್ಥಾಪಿದ ಮಾಧ್ವಮಠಗಳಲ್ಲಿ ಪ್ರಮುಖವಾಗಿರುವ ಕೋಲಾರ ಮುಳುಬಾಗಿಲಿನ  ಶ್ರೀ ಪದ್ಮನಾಭತೀರ್ಥ ಸಂಸ್ಥಾನದ ಶ್ರೀಪಾದರಾಜ ಮಠದ ಯತಿಗಳಾಗಿದ್ದರು. ಶ್ರೀ ಸಂಸ್ಥಾನವು ವಿಜಯನಗರ  ಮೈಸೂರು ಸೇರಿದಂತೆ ದಕ್ಷಿಣ ಭಾರತದ ಅನೇಕ ಅರಸೊತ್ತಿಗೆಗಳಿಂದ ಅಪಾರ ಗೌರವಾದರಗಳಿಗೆ ಪಾತ್ರವಾಗಿದೆ. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ಶ್ರೀಮಠದ ಹಿಂದಿನ‌ಗುರುಗಳಾಗಿದ್ದ ಶ್ರೀ ವಿಜ್ಞಾನ ನಿಧಿ ತೀರ್ಥ ಶ್ರೀಪಾದರಿಂದ ತುರೀಯಾಶ್ರಮ ಸ್ವೀಕರಿಸಿ ಅನೇಕ ವರ್ಷಗಳಿಂದ ಶ್ರೀ ಮಠದ ಮೂಲಕ ದ್ವೈತ ವೇದಾಂತ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದರು.  ವೇದಾಂತಾದಿ ಶಾಸ್ತ್ರಗಳಲ್ಲಿ ಅಪಾರ ವಿದ್ವತ್ತನ್ನು ಸಂಪಾದಿಸಿದ್ದರು. ಶ್ರೀ ಸಂಸ್ಥಾನದ ಸತ್ಸಂಪ್ರದಾಯಗಳನ್ನು ಯಥಾವತ್ ಅನುಷ್ಠಾನಿಸಿಕೊಂಡು ಬರುವುದರ ಜೊತೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿರುವ ಶ್ರೀ ಮಠದ ಶಾಖೆಗಳ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಡೆಸಿದ್ದಾರೆ. ಉಡುಪಿ ರಥಬೀದಿಯಲ್ಲಿರುವ ಶಾಖೆಯ ನವೀಕರಣ ಕಾರ್ಯವನ್ನೂ ಕೈಗೊಂಡಿದ್ದು ಅದು ಈಗ ಮುಕ್ತಾಯ ಹಂತದಲ್ಲಿದೆ. ಸಂಸ್ಥಾನದ ವತಿಯಿಂದ ರಂಗವಿಠಲ ಎಂಬ ಹೆಸರಿನ ಅಧ್ಯಾತ್ಮ ಮಾಸಪತ್ರಿಕೆಯನ್ನು ಅನೇಕ ವರ್ಷಗಳಿಂದ ಪ್ರಕಟಿಸುವ ಮೂಲಕ ಸಮಾಜಕ್ಕೆ ಶ್ರೀ ಮಧ್ವಗುರುಗಳ ತತ್ತ್ವವಾದ, ಭಕ್ತಿ ಸಿದ್ಧಾಂತ ಹಾಗೂ ಶ್ರಿಪಾದರಾಜರೇ ಮೊದಲಾದವರು  ಸಮರ್ಥವಾಗಿ ಮುನ್ನಡೆಸಿದ ಹರಿದಾಸ ಸಾಹಿತ್ಯದ ಸಂದೇಶಗಳನ್ನು ಅತ್ಯಂತ ಯೋಗ್ಯರೀತಿಯಲ್ಲಿ ಪ್ರಸಾರಮಾಡುತ್ತಿದ್ದರು.


ಇತ್ತೀಚೆಗಷ್ಟೇ ತಮ್ಮ ಉತ್ತರಾಧಿಕಾರಿಯನ್ನು ನೇಮಿಸಿ ಶ್ರೀ ಸುಜಯನಿಧಿತೀರ್ಥರೆಂದು ನಾಮಕರಣ ಮಾಡಿ ಸನ್ಯಾಸ ದೀಕ್ಷೆ ನೀಡಿದ್ದರು.


ಅಖಿಲ ಭಾರತ ಮಾಧ್ಚಮಹಾಮಂಡಲದ ಪೋಷಕರೂ ಆಗಿ ವಿಶೇಷ ಮಾರ್ಗದರ್ಶನ ಮಾಡಿದ್ದರು. ಉಡುಪಿಯ ಅಷ್ಟಮಠಗಳೂ ಸೇರಿದಂತೆ ಎಲ್ಲ ಮಾಧ್ವಮಠಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅಪಾರ ಶಿಷ್ಯ ಸಂಪತ್ತನ್ನು ಹೊಂದಿದ್ದ ಶ್ರೀಪಾದರು ಇಂದು ನಮ್ಮನ್ನಗಲಿದ್ದಾರೆ. ಅವರ ದಿವ್ಯಾತ್ಮಕ್ಕೆ ದೇವರು ಪರಮಪದವನ್ನು ಕರುಣಿಸಲಿ. ಅವರ ಅನುಗ್ರಹ ನಮ್ಮೆಲ್ಲರ ಮೇಲಿರಲಿ.

-ಜಿ ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post