ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ ವಿಧಿವಶ

ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ ವಿಧಿವಶ



ಉಡುಪಿ: ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ, ಹಿರಿಯ ಕಲಾವಿದ ಮುಳಿಯಾಲ ಭೀಮ ಭಟ್ ಅವರು ಮಂಗಳವಾರ ಬೆಳಗಿನ ಜಾವ ಕಾಂತಾವರದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕೆಲವು ಸಮಯದಿಂದ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.


ಕಾಂತಾವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರ ಅಂತ್ಯ ಕ್ರಿಯೆ ಬೆಳುವಾಯಿ ಸ್ಮಶಾನದಲ್ಲಿ ನಡೆಸಲಾಗುತ್ತಿದೆ.


ಕಳೆದ ಇಪ್ಪತ್ತು ವರ್ಷಗಳಿಂದ ಕಾಂತಾವರ ದೇವಸ್ಥಾನದಲ್ಲಿ ಸೇವೆ ಮಾಡಿದ ಭೀಮ ಭಟ್ಟರ ಆರೋಗ್ಯ ಕಳೆದ ನಾಲ್ಕು ತಿಂಗಳಿಂದ ಹದಗೆಟ್ಟಿತ್ತು.


ಭೀಮ ಭಟ್ಟರ ತಂದೆ ಕೇಶವ ಭಟ್ಟರೂ ಯಕ್ಷಗಾನ ವೇಷಧಾರಿಯಾಗಿದ್ದರು. ಕುರಿಯ ಶಾಸ್ತ್ರಿಗಳ ನೆಚ್ಚಿನ ಶಿಷ್ಯರಲ್ಲೊಬ್ಬರಾದ ಇವರು 1951ರಲ್ಲಿ ಕುರಿಯ ಶಾಸ್ತ್ರಿಗಳ ಸಂಚಾಲಕತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಜೇವನ ಆರಂಭಿಸಿದ್ದರು.


ಕೋಡಂಗಿ, ಬಾಲಗೋಪಾಲ, ಮುಖ್ಯಸ್ತ್ರೀವೇಷ, ಪೀಠಿಕೆ ವೇಷ- ಹೀಗೆ ಹಂತ ಹಂತವಾಗಿ ಮೇಲೇರಿದ ಅವರು ಪ್ರಸಿದ್ಧ ಕಲಾವಿದರಾಗಿದ್ದರು.


ಏಳು ವರುಷ ಧರ್ಮಸ್ಥಳ ಮೇಳದ ತಿರುಗಾಟ ಮಾಡಿ 1958ರಿಂದ ಕಟೀಲು ಮೇಳಕ್ಕೆ ಸೇರಿದರು. ಶ್ರೀ ದೇವಿ ಮಹಾತ್ಮೆ ಪ್ರಸಂಗದ ‘ಶ್ರೀದೇವಿ’ಯ ಪಾತ್ರವನ್ನು ‘ಒಲಿಸಿಕೊಂಡ’ ಮುಳಿಯಾಲರು ಕಲಾಭಿಮಾನಿಗಳಿಗೆ ‘ದೇವಿ ಭಟ್ರು’ ಎಂದೇ ಪರಿಚಿತರಾಗಿದ್ದರು.


ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂತಹ ಗಂಡುಗತ್ತಿನ ಪಾತ್ರಗಳ ಮೂಲಕ ಜನರ ಮೆಚ್ಚುಗೆಗೆ ಭಾಜನರಾಗಿದ್ದರು.


ಸ್ತ್ರೀ ಪಾತ್ರವಲ್ಲದೆ ಪುರುಷ ಪಾತ್ರಗಳಾದ ‘ಅತಿಕಾಯ, ತಾಮ್ರಧ್ವಜ, ಕರ್ಣ, ದ್ರುಪದ, ಕೃಷ್ಣ, ಹನುಮಂತ’ ಹೀಗೆ ರಂಗದ ಬಹುತೇಕ ಪಾತ್ರಗಳಿಗೆ ತನ್ನದೇ ಆದ ಮೆರುಗು ನೀಡಿದ್ದರು. ಸೀತೆ, ದಮಯಂತಿ, ಚಂದ್ರಮತಿ, ದ್ರೌಪದಿಯಂತಹ ಗರತಿ ಪಾತ್ರಗಳಲ್ಲಿಯೂ ಕಲಾ ಪ್ರೌಢಿಮೆ ಮೆರೆದಿದ್ದರು.

ಭೀಮ ಭಟ್ ಅವರ ನಿಧನಕ್ಕೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post