ಪುತ್ತೂರು: ಆಧುನಿಕ ಸೌಲಭ್ಯಗಳು ಹಳ್ಳಿಗಳಿಗೆ ತಲುಪಿದರೂ ಈ ಪುಟ್ಟ ಕಾಲೊನಿ ನಿವಾಸಿಗಳು ಮಾತ್ರ ಇಂದಿಗೂ ಮೂಲಭೂತ ಸಮಸ್ಯೆ ಎದುರಿಸುತ್ತಲೇ ಇದ್ದಾರೆ.
ಇದು ತಾಲೂಕು ಪುತ್ತೂರು ತಾಲೂಕು ಕೇಂದ್ರದಿಂದ 20 ಕಿ. ಮೀ. ದೂರದ ಸಿದ್ದಮೂಲೆ ಕೆಮ್ಮಾರದ ದಲಿತ ಕಾಲೋನಿ ನಿವಾಸಿಗಳ ವ್ಯಥೆ.
ಕಳೆದ ಹಲವು ವರುಷಗಳಿಂದ ಇವರು ಎದುರಿಸುತ್ತಿರುವುದು ನಾನಾ ಸಮಸ್ಯೆಗಳನ್ನು. ಆದರೂ ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಗಮನ ಹರಿಸಿಲ್ಲ. ಗ್ರಾಮ ಪಂಚಾಯತ್ ಕೂಡಾ ಈ ಬಗ್ಗೆ ಕಣ್ಣುಚ್ಚಿ ಕುಳಿತಿದೆ.
ಸಿದ್ಧಮೂಲೆಯ ದಲಿತ ಕಾಲೊನಿಯ ನಿವಾಸಿಗಳು ಸುಮಾರು 30-40 ವರ್ಷಗಳಿಂದ ಇಲ್ಲಿ ವಾಸ್ತವ್ಯವಿದ್ದಾರೆ. ಇಲ್ಲಿ ಸುಮಾರು ಆರು ಮನೆಗಳಿದ್ದು, 30 ಮಂದಿ ವಾಸಿಸುತ್ತಿದ್ದಾರೆ. ಕೂಲಿ ಕೆಲಸ, ಬೀಡಿ ಕಟ್ಟುವುದು, ಭೂತ ನರ್ತನ ಮುಂತಾದ ಕಸುಬುಗಳ ಮೂಲಕ ಜೀವನ ಜೀವನ ಸಾಗಿಸುತ್ತಿದ್ದಾರೆ.
ಈ ಕಾಲೋನಿ ಕೊಳ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಇಷ್ಟು ವರ್ಷಗಳಾದರೂ ಇಲ್ಲಿನ ನಿವಾಸಿಗಳು ಕುಡಿಯುವ ನೀರಿಗೆ ಸಮೀಪದ ಖಾಸಗಿ ವ್ಯಕ್ತಿಯೋರ್ವರ ಕೆರೆಯನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ, ಕುಡಿಯಲು, ಸ್ನಾನ ಮಾಡಲು ಇಲ್ಲಿನ ನೀರೇ ಗತಿ.
ಮನವಿಗೆ ಸ್ಪಂದನವಿಲ್ಲ:
ನಾವು ಇಲ್ಲಿ ಮನೆ ಕಟ್ಟಿ 30 ವರ್ಷಗಳಾಯಿತು. ಇಲ್ಲಿ ಸುಮಾರು 6 ಮನೆಗಳಿವೆ. ಆದರೆ, ಪಂಚಾಯತ್ ಇಲ್ಲಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಇದುವರೆಗೂ ಮಾಡಿಲ್ಲ. ಬದುಕಲು ಕೆರೆಯ ನೀರನ್ನೇ ಅವಲಂಬಿಸಿದ್ದೇವೆ. ಕಳೆದ ಐದಾರು ವರ್ಷಗಳಿಂದ ಪಂಚಾಯತ್, ಗ್ರಾಮ ಸಭೆಗಳಿಗೆ ತೆರಳಿ ಈ ಕುರಿತು ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
-ಬಬಿತಾ ಸಿದ್ಧಮೂಲೆ, ಸ್ಥಳೀಯ ನಿವಾಸಿ
ಶೌಚಕ್ಕೆ ಬಯಲು; ಮಹಿಳೆಯರಿಗೆ ಮುಜುಗರ:
ಇಲ್ಲಿನ ನಿವಾಸಿಗಳು ಇನ್ನೂ ಬಯಲು ಶೌಚಾಲಯವನ್ನೇ ಅನಿವಾರ್ಯವಾಗಿ ಅವಲಂಬಿಸಿದ್ದಾರೆ. ನಾನು ಕಾಲೇಜ್ ಗೆ ಹೋಗುವ ಯುವತಿ. ನನಗೆ ಬಯಲು ಶೌಚಾಲಯಕ್ಕೆ ಹೋಗಬೇಕಾದುದು ಅನಿವಾರ್ಯ.
ನಾವು ಕೆಮ್ಮಾರಕ್ಕೆ ಬಂದು ಬಹಳಷ್ಟು ವರ್ಷಗಳಾಯಿತು. ಆದರೆ, ಗ್ರಾಮ ಪಂಚಾಯತ್ ನಮಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ, ಬಯಲು ಶೌಚಾಲಯವನ್ನೇ ಅವಲಂಭಿಸಿದ್ದೇವೆ. ಇದು ಇಲ್ಲಿನ ಮಹಿಳೆಯರಿಗೆ ಬಹಳಷ್ಟು ಮುಜುಗರ ಉಂಟು ಮಾಡುತ್ತದೆ. ನಾನು ಪ್ರಸ್ತುತ ಪಿಯುಸಿ ಶಿಕ್ಷಣ ಪಡೆಯುತ್ತಿದ್ದು, ಸಿದ್ಧಮೂಲೆ ಕಾಲೊನಿಯಲ್ಲಿ 6 ಪರಿಶಿಷ್ಟರ ಮನೆಗಳಿಗೆ ಕುಡಿಯಲು ನೀರಿಲ್ಲ. ಶೌಚಾಲಯವಿಲ್ಲ, ಕೊಳ್ತಿಗೆ ಗ್ರಾಮ ಪಂಚಾಯತ್ ಕುರಿತು ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದೆ. ನೀರಿನ ಆಸರೆಯಾಗಿರುವ ಕೆರೆ ಇದುವರೆಗೆ ಮೂರು ಜೀವ ಬಲಿ ಪಡೆದಿದೆ. ಆದರೂ ಈ ಕರೆಯ ನೀರನ್ನೇ ಕುಡಿಯಬೇಕಿದೆ. ಈ ಕಾಲೊನಿಯ ನಿವಾಸಿಗಳ ಮನವಿಗೆ ಆಡಳಿತ ಸ್ಪಂದಿಸಬೇಕು.
- ಉಮಾವತಿ, ಕೆಮಾರು ನಿವಾಸಿ
ಜೀವಬಲಿ ಪಡೆದ ಕೆರೆ ನೀರು ಕುಡಿಯುತ್ತಿದ್ದರೂ ಕ್ಯಾರೇ ಅನ್ನದ ಪಂಚಾಯತ್:
ಕಾಲೋನಿಯ ಸಮಸ್ಯೆಗಳು ನಿನ್ನೆ ಮೊನ್ನೆಯದಲ್ಲ, ಕುಡಿಯಲು ನೀರು, ಶೌಚಾಲಯ ಇವೇ ಮುಂತಾದ ಮೂಲಭೂತ ಸೌಲ್ಯಗಳನ್ನು ಇಲ್ಲಿನ ನಿವಾಸಿಗಳು ಎದುರು ನೋಡುತ್ತಿದ್ದಾರೆ. ದುರಂತದ ವಿಚಾರವೆಂದರೆ ಈ ಕೆರೆಯಲ್ಲಿ ಇದುವರೆಗೆ ಮೂರು ಮಂದಿ ಬಿದ್ದು ತಮ್ಮ ಪ್ರಾಣ ಕಳೆದು ಕೊಂಡಿದ್ದಾರೆ ಎನ್ನುತ್ತಾರೆ, ಸ್ಥಳೀಯರು ಈ ಕೆರೆಗೆ ಬಿದ್ದು ಮೃತಪಟ್ಟಿದ್ದರೂ ದಲಿತ ಕಾಲೋನಿಯ ನಿವಾಸಿಗಳು ಮಾತ್ರ ಮೃತದೇಹವಿದ್ದ ಇದೇ ಕೆರೆಯ ನೀರನ್ನು ಕುಡಿಯಲು ಉಪಯೋಗಿಸಬೇಕಾದಂತಹ ಅನಿವಾರ್ಯ ಪರಿಸ್ಥಿತಿ.
-ಸೇಸಪ್ಪ ಬೆದ್ರಕಾಡು
ಸ್ಥಾಪಕಾಧ್ಯಕ್ಷ, ದ.ಕ. ಜಿಲ್ಲಾ ದಲಿತ ಸೇವಾ ಸಮಿತಿ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment