ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಹೊರಟಿದ್ದ ಯಾತ್ರಾರ್ಥಿಗಳ ಬಸ್ಸೊಂದು ಉರುಳಿ ಬಿದ್ದ ಪರಿಣಾಮ 21 ಮಂದಿ ಗಾಯಗೊಂಡಿರುವ ಘಟನೆಯೊಂದು ಮಂಗಳವಾರ ಸಂಜೆ ವೇಳೆ ಕೊಲ್ಲೂರು ಸಮೀಪ ರಾಷ್ಟ್ರೀಯ ಹೆದ್ದಾರಿಯ ಒಣ್ಕಣ್ ಮೋರಿ ತಿರುವಿನಲ್ಲಿ ನಡೆದಿದೆ.
ಗಾಯಾಳುಗಳ ಪೈಕಿ ಆರು ಮಂದಿಗೆ ಗಂಭೀರ ಗಾಯಗಳಾಗಿವೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಭಂಡಾರ ಹಳ್ಳಿಯಿಂದ ಜ.10ರಂದು 42 ಮಂದಿಯೊಂದಿಗೆ ಹೊರಟ ಬಸ್, ಜ.11ರಂದು ಸಿಗಂದೂರು ತಲುಪಿತು.
ಮಧ್ಯಾಹ್ನ ಅಲ್ಲಿಂದ ಕೊಲ್ಲೂರು ಕಡೆಗೆ ಹೊರಟ ಬಸ್ ಒಣ್ಕಣ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ಮಗ್ಗುಲಾಗಿ ಮಗುಚಿ ಬಿದ್ದಿದೆ.
ಈ ಕಾರಣದಿಂದ ಬಸ್‌ನಲ್ಲಿದ್ದ ಶ್ಯಾಮಲಮ್ಮ ಹಾಗೂ ರೂಪಮ್ಮ ಎಂಬವರ ಕೈಗಳು ತುಂಡಾಗಿದ್ದು, ಕಲಾವತಿ ಹಾಗೂ ರತ್ನಾ ಎಂಬವರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಗಾಯಗೊಂಡ ಜನರನ್ನು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ರಕ್ತಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment