ಪುತ್ತೂರು: ಜನಸಂಘದ ಹಿರಿಯ ನಾಯಕ, ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ಟರು ಇಂದು ಕೊಂಬೆಟ್ಟಿನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.
ಪುತ್ತೂರು-ವಿಟ್ಲ ರಸ್ತೆಯ ಮಧ್ಯದಲ್ಲಿ ಉರಿಮಜಲು ಎಂಬಲ್ಲಿ ನೆಲೆಸಿದ್ದ ಅವರು ತಮ್ಮ ಪ್ರೌಢ ಶಿಕ್ಷಣದ ವೇಳೆಯಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದರು. ಪುತ್ತೂರಿನಲ್ಲಿ ಹಿಂದುತ್ವದ ಭದ್ರ ಅಡಿಪಾಯ ಹಾಕಿದವರು ಅವರು. ಜನಸಂಘದ ಮೂಲಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ ಜೋಷಿ ಅವರಂತಹ ಅಗ್ರಗಣ್ಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದರು.
ವೃತ್ತಿಯಲ್ಲಿ ವಕೀಲರಾಗಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾಗಿ, ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾಗಿ, ಹಲವು ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು ಉರಿಮಜಲು ರಾಮ ಭಟ್ಟರು. ಸಂಘದ ಮತ್ತು ಪಕ್ಷದ ಅಗ್ರಗಣ್ಯ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರೂ ಸೇರಿದಂತೆ ಹಲವಾರು ರಾಜಕೀಯ ಮುಖಂಡರನ್ನು ಬೆಳೆಸಿದ ಕೀರ್ತಿ ಅವರದು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿ ಕ್ರಾಂತಿಕಾರಿ ಹೋರಾಟ ನಡೆಸಿ ಜೈಲುಪಾಲಾಗಿದ್ದ ಅವರು ಜೈಲಿನಲ್ಲೇ ತಮ್ಮ ಜತೆಗಿದ್ದ ಹಿರಿಯ ನೇತಾರ ಎಲ್.ಕೆ ಆಡ್ವಾಣಿ ಅವರಿಗೆ ಕನ್ನಡ ಭಾಷೆಯನ್ನು ಕಲಿಸಿದ್ದರು. ಅಯೋಧ್ಯೆ ಚಳುವಳಿಯಲ್ಲೂ ಅವರು ಮುಂಚೂಣಿಯಲ್ಲಿದ್ದರು.
1985ರ ನಂತರ ಸಕ್ರಿಯ ರಾಜಕಾರಣದಿಂದ ದೂರವಾದರೂ ಸಂಘಪರಿವಾರ ಮತ್ತು ಬಿಜೆಪಿಯ ಚಿಂತಕರ ಚಾವಡಿಯ ಪ್ರಮುಖರಾಗಿ ಮಾರ್ಗದರ್ಶ ಮಾಡುತ್ತಿದ್ದರು. ಪಕ್ಷದ ವಿಚಾರದಲ್ಲಿ ಅವರ ತೀರ್ಮಾನಗಳೇ ಪ್ರಮುಖವಾಗಿರುತ್ತಿದ್ದವು.
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭೆ ಮತ್ತು ವಿಧಾನಸಭೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವಾಗಲೂ ರಾಮ ಭಟ್ಟರ ಸಮ್ಮತಿಯಿಲ್ಲದೆ ಬಿಡುಗಡೆಯಾಗುತ್ತಿರಲಿಲ್ಲ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment