ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳುನಾಡಿನಲ್ಲಿ ಷಷ್ಠಿ ಆಚರಣೆ; ನಾಗ- ಸುಬ್ರಹ್ಮಣ್ಯನ ಆರಾಧನೆ

ತುಳುನಾಡಿನಲ್ಲಿ ಷಷ್ಠಿ ಆಚರಣೆ; ನಾಗ- ಸುಬ್ರಹ್ಮಣ್ಯನ ಆರಾಧನೆ



ಕರಾವಳಿಯ ಆರಾಧನಾ ಮಾರ್ಗದಲ್ಲಿ ಕಂಡು ಬರುವ ರೋಚಕ ಅಷ್ಟೇ ಸಹಜ ಅನುಸಂಧಾನವೇ ನಾಗ-ಸುಬ್ರಹ್ಮಣ್ಯ ಅಭೇದ ಕಲ್ಪನೆ. ಮೂಲದ ನಾಗ ಶ್ರದ್ಧೆಯು ಹರಿದು ಬಂದ (ಕರೆನಾಡಿಗೆ) ಶಿಷ್ಟದ ಸುಬ್ರಹ್ಮಣ್ಯ ಚಿಂತನೆಯೊಂದಿಗೆ ಸಂಲಗ್ನಗೊಂಡ ವಿಧಾನ ಆಶ್ಚರ್ಯವನ್ನು ಉಂಟು ಮಾಡಿ ಯೋಚಿಸುವಂತೆ ಪ್ರೇರಿಸುತ್ತದೆ.


’ಸುಬ್ರಾಯ ದೇವೆರ್ ಅಜಿಪಕಾರ ಗದ್ದಿಗೆಡ್, ಮೂಜಿಕಾರ ಮುಂಡು ಮುಕ್ಕಾಳಿಗೆಡ್, ಮೊರಂಪಾಯಿ ಮಲ್ಲಿಗೆಡ್, ಕೇದಾಯಿ ಸಂಪಿಗೆಡ್, ಸರ್ಪಲಿಂಗೊಡು, ಮೈರ ಬಾಣೊಡು, ಒಡ್ಡುಪಾಡಿ ಒಲೆಗ ಆವೊಂದೆರ್


’ಬಲೀಂದ್ರ ಸಂದಿ’ಯಲ್ಲಿ ಬಲೀಂದ್ರನನ್ನು ವಂಚಿಸಲು ಹೊರಟ ಬಾಲ ಬ್ರಹ್ಮಚಾರಿ ಮಾಣಿಗಳು ಸುಬ್ರಹ್ಮಣ್ಯ ದೇವರನ್ನು ಹೀಗೆಂದು ಸ್ತುತಿಸುತ್ತಾರೆ. ಅರುವತ್ತು ಕಾಲಗದ್ದುಗೆ, ಮೂರುಕಾಲಿನ ಸಣ್ಣಪೀಠ, ಮಲ್ಲಿಗೆ-ಸಂಪಿಗೆ ಹೂವುಗಳ ಪರಿಮಳಕ್ಕೆ ಹರಿದು ಬರುವ ಹಾವುಗಳ ಬಯಕೆ, ಸರ್ಪಲಿಂಗ ಲಾಂಛನ ಹಾಗೂ ನವಿಲುಗರಿಯ ಅಲಂಕಾರದಲ್ಲಿ ಒಡ್ಡೋಲಗಸ್ಥನಾದ ಸುಬ್ರಾಯ ದೇವರ ವರ್ಣನೆ ನಮ್ಮ ಪಾಡ್ದನಗಳ ಕವಿ ಚಮತ್ಕಾರದೊಂದಿಗೆ ಜನಪದವು ಸುಬ್ರಹ್ಮಣ್ಯ ದೇವರನ್ನು ಸ್ವೀಕರಿಸಿದ ವಿಧಾನವನ್ನೂ ಸೂಚಿಸುತ್ತದೆ.


ಸಮಾನ ಅನುಗ್ರಹ ವಿಶೇಷಗಳಿಂದ ಈ ನಾಗ-ಸುಬ್ರಹ್ಮಣ್ಯ ಸಮೀಕರಣ ನಡೆದು ಹೋಯಿತು ಎನ್ನಲು ಪುರಾವೆಗಳಿವೆ. ಏನಿದ್ದರೂ ಸುಬ್ರಹ್ಮಣ್ಯ ನಮ್ಮ ಬಾಯಿಯಲ್ಲಿ ಸುಬ್ಬರಾಯನಾದ; ಸುಬ್ರಾಯನೆಂದು ಪ್ರಸಿದ್ಧನಾದ.


ವಿದ್ವಾಂಸರು ಸಂಪಾದಿಸಿ ಪ್ರಕಟಿಸಿದ (೧೮೮೬-ರೆವರೆಂಡ್ ಮ್ಯಾನರ್; ಬಾಸೆಲ್ ಮಿಶನ್ ಪ್ರಕಟನೆ) ಪ್ರಾಚೀನ ಪಾಡ್ದನಗಳಲ್ಲಿ ಸುಬ್ರಹ್ಮಣ್ಯ ದೇವರ ಉಲ್ಲೇಖ ಅಲ್ಲಲ್ಲಿ ಕೇಳು ಬರುತ್ತದೆ. ವಿಶೇಷವಾಗಿ ’ಕುಕ್ಕೆ ಸುಬ್ರಾಯ ದೇವೆರ್ ಎಂಬ ನುಡಿ ಇದೆ. ಪಂಜುರ್ಲಿ ದೈವದ ಪಾಡ್ದನದಲ್ಲಿ ’ನನ ಸುಬ್ರಾಯ ದೇವೆರೆ ಗಟ್ಟಿ ಜಪ್ಪೊಡು; ಆರ್ ಬುಡುವೆರ್, ಆರೆ ಗಂಡ ಗಣಕುಳು ಬುಡಾಯೋ’ ಎಂಬ ವಿವರವೂ ಪಶ್ಚಿಮ ಘಟ್ಟ ಮತ್ತು ಕೆಳಗಿನ ವ್ಯಾಪ್ತಿ ಸುಬ್ರಾಯ ದೇವರಿಗೆ ಸಂದದ್ದು ಮತ್ತು ಅವರಿಗೆ ಪ್ರಬಲ ಶಕ್ತಿಗಳ ಪರಿವಾರ (ಗಂಡ ಗಣಕುಳು)ವಿತ್ತು ಎಂಬುದು ಹಾಗೂ ಸುಬ್ರಹ್ಮಣ್ಯ ಆರಾಧನೆ ನಮ್ಮ ತುಳು ಸೀಮೆಯಲ್ಲಿ - ಕರಾವಳಿಯಲ್ಲಿ ಎಷ್ಟು ಗಾಢವಾಗಿತ್ತೆಂಬುದನ್ನು ಅನಾವರಣಗೊಳಿಸುತ್ತದೆ. ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರಗಳೆಲ್ಲ ನಾಗ-ಸುಬ್ರಹ್ಮಣ್ಯ ಸನ್ನಿಧಾನಗಳೇ ಆಗಿರುವುದು ಈ ಎರಡು ಶಕ್ತಿ ವಿಶೇಷಗಳ ಪುರಾತನ ಸುಗಮ ಬೆಸುಗೆಯನ್ನು ದೃಢೀಕರಿಸುತ್ತವೆ.


’ಧರ್ಮರಸು’ ಸಂದಿಯಲ್ಲಿ ಮತ್ತು ’ಅತ್ತಾವರ ದೈಯ್ಯೊಂಗುಳು’ ಪಾಡ್ದನಗಳಲ್ಲೂ ’ಸುಬ್ರಾಯ ದೇವೆರ್ ಬರುತ್ತಾರೆ. ಪಾಣರಾಟದ ಸ್ವಾಮಿಯ ಹೊಗಳಿಕೆಯಲ್ಲಿ ’ಮುದ್ದು ಸ್ವಾಮಿ’ ಎಂಬ ಪ್ರಯೋಗ ಸುಬ್ರಹ್ಮಣ್ಯ ಸ್ವರೂಪದ ನಾಗನನ್ನೇ ಸೂಚಿಸುತ್ತದೆ ಎನ್ನುತ್ತಾರೆ ಸಂಶೋಧಕರು. ವೈದ್ಯರ (ನಾಗ ಮಂಡಲ, ಢಕ್ಕೆ ಬಲಿ ನಡೆಸುವ) ಹಾಡುಗಳಲ್ಲಿ (ನಾಂದಿಹಾಡು) ’ವಾಸುಕಿ ಸುಬ್ರಹ್ಮಣ್ಯ ತೆರಳಿ ಬಾ’ ಎಂಬ ಆಹ್ವಾನವಿದೆ. ಇಲ್ಲೂ ನಾಗ-ಸುಬ್ರಹ್ಮಣ್ಯ ಸಮಾಗಮದ ಸ್ಪಷ್ಟ ನಿರ್ದೇಶನವಿದೆ.

[ಪಾಣರಾಟ: ಕುಂದಾಪುರದ ಕಡೆ ಮೂರು ನಾಲ್ಕು ದಿನಗಳ ಕಾಲ ನಡೆಯುವ ನಾಗ ಸಹಿತ ದೈವಗಳ ಆರಾಧನಾ ವಿಧಾನ.] 


ಯಕ್ಷಗಾನ ಸಭಾಲಕ್ಷಣ ಗ್ರಂಥವೂ ಪೂರ್ವ ರಂಗವನ್ನು ವಿವರಿಸುತ್ತಾ ’ಚಿನ್ಮಯ ಕಾಯ, ಭಕ್ತ ಸಹಾಯ, ಶಕ್ತಿ ಸಖಾಯ ಶ್ರೀ ಸುಬ್ಬರಾಯ’, ’ಕುಂಡಲ ಮಣಿ ಭೂಷಣ ಹೇ ಸುಬ್ಬರಾಯ’ ಮುಂತಾದ ಹಾಡುಗಳನ್ನು ದಾಖಲಿಸಿದೆ. ಸುಬ್ರಹ್ಮಣ್ಯ ವೇಷವನ್ನು ರಂಗಕ್ಕೆ ತಂದು ಕುಣಿಸುವ (ಈಹಾಡುಗಳನ್ನು ಹಾಡಿ) ಸಂಪ್ರದಾಯವಿದೆ. ಇದು ಸ್ಕಂದ ಆರಾಧನೆಯ ಪ್ರಭಾವವನ್ನು ಪ್ರತಿಪಾದಿಸುತ್ತದೆ.


’ಸಂತಾನ ಸಂತೇಸಿ, ಸುಖ ಸಂತೇಸಿ; ಕೊರ‍್ದು ಸೀಕ್ ಸಂಕಡ ಗುಣ ಮಲ್ತ್‌ದ್; ಕಣ್ಣ್, ಕೈಕಾರ್ ಸುಕ ಕೊರ‍್ಲೆ ಎಂಬ ಜನಸಾಮಾನ್ಯರ ಸುಬ್ರಹ್ಮಣ್ಯ ಪ್ರಾರ್ಥನೆಯು ಸಂತಾನ, ಮಾಂಗಲ್ಯ ಭಾಗ್ಯ, ಸಾಮರಸ್ಯದ ದಾಂಪತ್ಯ ಜೀವನ, ಸರ್ವ ವ್ಯಾದಿ ನಿವಾರಣೆ (ಚರ್ಮ-ನರ ಸಂಬಂಧಿ ವ್ಯಾಧಿಗಳು), ದೃಷ್ಟಿಯೋಗವನ್ನು ಕರುಣಿಸುವ ಕಾರ್ತಿಕೇಯನಿಗೆ ಸಂಬಂಧಪಟ್ಟ ವಿಸ್ತೃತ ಕಥೆಗಳು ದೇಶದಾದ್ಯಂತ ಪ್ರಚಲಿತವಿವೆ; ಇದನ್ನು ವಿವಿಧ ಪುರಾಣಗಳು ವಿಸ್ತೃತವಾಗಿ ವಿವರಿಸುತ್ತವೆ.


ಷಷ್ಠಿ ತಿಥಿಯ ಅಧಿದೇವತೆಯೂ ಸ್ಕಂದನೇ. ಪಂಚಮಿಯು ನಾಗಗಳ ತಿಥಿ, ಪಂಚಮಿ-ಷಷ್ಠಿಗಳು ಪೂರ್ಣ-ಆನಂದವನ್ನು ಕೊಡುವಂತಹವು. ಉತ್ತರ ಭಾರತದಲ್ಲಿ ಸ್ಕಂದನಾಗಿ, ತಮಿಳುನಾಡಿನಲ್ಲಿ ಮುರುಗ, ಶೇಯೋನ್, ಆರ‍್ಮುಗ ಮುಂತಾದ ಹೆಸರುಳ್ಳ ಸುಬ್ರಹ್ಮಣ್ಯ ಸದಾ ಕೌಮಾರ‍್ಯ-ಪರಾಕ್ರಮದ ಸಂಕೇತ. ಇಂದ್ರ ಪುತ್ರಿಯನ್ನು ಮದುವೆಯಾಗುವ ದೇವ ಸೇನಾನಿಗೆ ವಡ್ಡರ ಜನಾಂಗದ ಶಿವಮುನಿಯ ಮಗಳಾದ ’ವಲ್ಲಿ' ಎಂಬವಳೊಂದಿಗೂ ವಿವಾಹವಾಗಿದೆ ಎನ್ನುತ್ತವೆ ತಮಿಳು ಕಥೆಗಳು. ಇದು ಸ್ಪಷ್ಟವಾಗಿ ಜನಪದ-ಶಿಷ್ಟ ಸಂಸ್ಕೃತಿಗಳ ಸಮಾಗಮವನ್ನು ಸಾಂಕೇತಿಸುತ್ತವೆ.


ಕರಾವಳಿಯಲ್ಲಿ ಸುಬ್ರಹ್ಮಣ್ಯನ ಆರಾಧನೆ ನಾಗನೊಂದಿಗೆ, ಸಟ್ಟಿ (ಷಷ್ಠಿ) ಎಂಬುದು ನಮ್ಮವರ ಶ್ರದ್ಧೆಯ ಪರ್ವದಿನ. ಷಷ್ಠಿ ವ್ರತವಾಗಿ ಆಚರಿಸಲ್ಪಡುವಾಗ ’ಚಪ್ಪೆ ತಿನ್ನುವುದು ರೂಢಿ. ಮಳೆಗಾಲದ ವೇಳೆ ಎರವಲಾಗಿ ಪಡೆಯುವ ಅಕ್ಕಿಯನ್ನು ಹಿಂದಿರುಗಿಸಲು ಷಷ್ಠಿ ವಾಯಿದೆ.


ಆರು ಅಥವಾ ಷಷ್ಠಿ-ಷಡಾನನ ಸುಬ್ರಹ್ಮಣ್ಯ ಸಂಬಂಧವೂ ವಿಸ್ತಾರವಾದುದು. ಭಿನ್ನ ಹಾಗೂ ಬಹು ವ್ಯಾಖ್ಯಾನಗಳನ್ನು ಹೊಂದಿರುವಂತಹುದು. ’ಕುಂಕುಮ ರಕ್ತವರ್ಣದವನಾಗಿ ಮಹಾಮತಿ ಎನಿಸಿ ಮಯೂರ ವಾಹನನಾದ ರುದ್ರಸೂನುವೇ ನೀನು ಸುರ ಸೈನ್ಯನಾಥನಾದ ಗುಹನು, ನಿನಗೆ ಶರಣು.’

ಸುಂದರ ದ್ವಿಬಾಹು ಅಥವಾ ಚತುರ್ಬಾಹು ಪ್ರತಿಮಾ ರೂಪದಲ್ಲಿ, ನಾಗಶಿಲಾ ಪ್ರತೀಕ ಸ್ವರೂಪದಲ್ಲಿ ಅಥವಾ ಹುತ್ತವೇ ಸಾನ್ನಿಧ್ಯವೆಂದು ಪೂಜಿಸಲಾಗುತ್ತದೆ ನಮ್ಮ ದೇವಳಗಳಲ್ಲಿ. 


ಷಷ್ಠಿ ಪರ್ವಕಾಲದಲ್ಲಿ ಸುಬ್ರಹ್ಮಣ್ಯ ದೇವಳಗಳಿಗೆ ತೆರಳಿ ಹರಕೆ ಸಲ್ಲಿಸುವುದು, ಉರುಳು ಸೇವೆ-ಮಡೆಸ್ನಾನ ಸೇವೆ ಅರ್ಪಿಸುವುದು ನಮ್ಮ ಸಂಪ್ರದಾಯ. ಇದನ್ನು ತಪ್ಪುವಂತಿಲ್ಲ ಇದು ನಮ್ಮ ಶ್ರದ್ಧೆ.

ಅಡಿಪೋಯಿ ನಾಗೆ-ಕೊಡಿಪೋಯಿ ಬೆರ್ಮೆರ‍್ನ ಅನುಗೆತೊಂದು ’ಸುಬ್ರಾಯ’ ದೇವೆರೆನ್ ಸುಗಿಪುಗ.

-ಕೆ.ಎಲ್.ಕುಂಡಂತಾಯ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post