ಧರ್ಮಪುರಿ - ತಮಿಳುನಾಡಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಇಂದು ಬೆಳಗ್ಗೆ ಧರ್ಮಪುರಿ ಸಮೀಪ ಹಳಿ ತಪ್ಪಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ಸಂಚರಿಸುತ್ತಿದ್ದ ವೇಳೆಯಲ್ಲಿ ಹಳಿ ಮೇಲೆ ಬಂಡೆ ಬಿದ್ದ ಪರಿಣಾಮ ರೈಲಿನ ಐದು ಬೋಗಿಗಳು ಹಳಿ ತಪ್ಪಿದೆ ಎಂದು ಸದರನ್ ರೈಲ್ವೆ ಇಲಾಖೆ ತಿಳಿಸಿದೆ.
ರೈಲಿನಲ್ಲಿದ್ದ 2000ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತರಾಗಿದ್ದು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಇಂದು ಮುಂಜಾನೆ ಧರ್ಮಪುರಿ ಸಮೀಪದ ತೊಪ್ಪೂರು-ಸಿವಾಡಿ ಬಳಿ ಸಂಚರಿಸುತ್ತಿದ್ದಾಗ ಏಕಾಏಕಿ ಬಂಡೆ ಹಳಿಗಳ ಮೇಲೆ ಉರುಳಿ ಬಿದ್ದು ಈ ಘಟನೆ ಜರುಗಿದೆ.
ಬೆಂಗಳೂರಿನಲ್ಲಿರುವ ವಿಭಾಗೀಯ ರೈಲ್ವೆ ಇಲಾಖೆಯ ವ್ಯವಸ್ಥಾಪಕ ಶ್ಯಾಂ ಸಿಂಗ್ ಅವರು ತಕ್ಷಣ ವೈದ್ಯರ ತಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೇಲಂ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉರುಳಿ ಬಿದ್ದಿದ್ದ ಬೋಗಿಗಳನ್ನು ತೆರವುಗೊಳಿಸಿ ಸುಗಮ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.
Post a Comment