ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗುರುತಿಸಲ್ಪಡುವವರು- ವೇದಿಕೆಯ ಮೇಲೆ ಒಂದಿಷ್ಟು ಹೊತ್ತು...

ಗುರುತಿಸಲ್ಪಡುವವರು- ವೇದಿಕೆಯ ಮೇಲೆ ಒಂದಿಷ್ಟು ಹೊತ್ತು...


ಒಂದು ಸಭಾ ಕಾರ್ಯಕ್ರಮ. ಒಂದಷ್ಟು ಗಣ್ಯರೆನಿಸಿಕೊಂಡವರು ವೇದಿಕೆ ಮೇಲೆ ಕೂತಿದ್ದರೆ, ಇನ್ನೊಂದಿಷ್ಟು ಜನರು ಸಭಿಕರಾಗಿ ವೇದಿಕೆಯ ಮುಂದೆ ಉಪಸ್ಥಿತರಾಗಿದ್ದರು. ಎಲ್ಲ ಕಾರ್ಯಕ್ರಮಗಳು ಪ್ರಾರಂಭವಾಗುವಂತೆ ಅಂದು ಕೂಡ ದೀಪ ಬೆಳಗಿಸಿ, ಬಂದವರನ್ನೆಲ್ಲ ಸ್ವಾಗತಿಸಿ, ಸಂಘಟಕರು ಪ್ರಸ್ಥಾವನೆಯನ್ನು ಮಾಡಿದ ಬಳಿಕ ಮುಖ್ಯ ಭಾಷಣಕಾರರ ಭಾಷಣಗಳು ನಡೆಯುತ್ತಿತ್ತು. ಎಲ್ಲವೂ ಒಂದು ಹಂತದಲ್ಲಿ ಸಹಜವೇ ಆಗಿತ್ತು. ಕೊನೆಯಾಗಿ ಅಧ್ಯಕ್ಷರ ಭಾಷಣ. ನಾವೆಲ್ಲರೂ ಕುತೂಹಲದಿಂದ ಅಣಿಯಾದೆವು


ಅಧ್ಯಕ್ಷರು ಎದ್ದು ನಿಂತು ಒಬ್ಬೊಬ್ಬರನ್ನೇ ಹೆಸರು ಹಿಡಿದು ಗುರುತಿಸಿ, ಗುರುತಿಸಿದ ಗಣ್ಯರನ್ನು ಪುನಃ ಇವರೇ ಇವರೇ ಎಂದು ಸಂಬೋಧಿಸಿ, ವೇದಿಕೆಯಲ್ಲಿರುವ ಅಷ್ಟೂ ಗಣ್ಯರನ್ನು ಇವರೇ ಇವರೇ ಎನ್ನವಾಗ ಸಾಧಾರಣ ಹತ್ತು ನಿಮಿಷಗಳೇ ಆದವು. ಇರಲಿ ಅಧ್ಯಕ್ಷರಲ್ಲವೇ ಮುಂದೆ ಒಳ್ಳೆಯ ವಿಚಾರಗಳು ಬರಬಹುದು ಎಂದುಕೊಂಡರೆ, ಈ ಪುಣ್ಯಾತ್ಮ ವೇದಿಕೆಯ ಇವರುಗಳು ಮುಗಿದ ಮೇಲೆ ವೇದಿಕೆಯ ಎದುರಲ್ಲಿ ಕೂತಿರುವಂಥ ಗಣ್ಯರನ್ನು ಹುಡುಕಲು ಪ್ರಾರಂಭಿಸಿದರು. ಅಲ್ಲಿ ಕೂಡ ಶ್ರೀಮಂತರೆನಿಸಿಕೊಂಡವರು, ಪ್ರತಿಷ್ಠಿತರು, ಸತತ ಸಂಪರ್ಕದಲ್ಲಿರುವವರು ಮುಂತಾದವರನ್ನೆಲ್ಲ ಹುಡುಕಿ ಹುಡುಕಿ ಸಾಧಾರಣ ಹತ್ತಕ್ಕೂ ಹೆಚ್ಚು ಜನರ ಹೆಸರನ್ನು ಹೇಳಿ ಅದಕ್ಕೆ ಇವರೇ ಸೇರಿಸಿ ಮುಗಿಸಿದಾಗ ಮತ್ತೆ ಹತ್ತು ನಿಮಿಷಗಳೇ ಆಗಿ ಹೋದವು. ಮತ್ತೆ ಭಾಷಣ ಪ್ರಾರಂಭ ಮಾಡಿ ಹತ್ತೇ ನಿಮಿಷದಲ್ಲಿ ಮುಗಿಸಿದರು. ವಿಷಯಕ್ಕಿಂತಲೂ ಇವರೇ ಎನ್ನುವ ವಿಚಾರವೇ ಹೆಚ್ಚು ಮಹತ್ವ ಪಡೆದಿತ್ತು ಎನ್ನುವುದೇ ಬೇಸರದ ವಿಷಯ. 


ಏನೇ ಇರಲಿ ನನಗೆ ಅರ್ಥವಾಗದ ವಿಷಯವೆಂದರೆ ಇದುವೇ. ಸಾಮಾನ್ಯವಾಗಿ ಒಂದು ಸಭೆ ಎಂದರೆ ವೇದಿಕೆಯಲ್ಲಿರುವವರು ಮತ್ತು ಸಭಿಕರು ಎಂದು ವಿಂಗಡಿಸಬಹುದು. 'ಇಲ್ಲಿ ಸೇರಿದಂಥ ಎಲ್ಲ ಗಣ್ಯರೇ' ಎಂದು ಹೇಳಿ ನೇರ ವಿಷಯಕ್ಕೆ ಬಂದು ಭಾಷಣ ಪ್ರಾರಂಭಿಸಬಹುದು. ಅದಿಲ್ಲ ವೇದಿಕೆಯ ಮೇಲಿರುವ ಎಲ್ಲ ಇವರೆಗಳನ್ನೂ ಸಂಬೋಧಿಸಬಹುದು. ಆದರೆ ಸಭಿಕರನ್ನು ಗುರುತಿಸುವಾಗ ಕೆಲವರನ್ನಷ್ಟೇ ಗುರುತಿಸಿ ಇವರೇ ಎಂದಾಗ ಉಳಿದವರನ್ನು ಕಡೆಗಣಿಸಿದಂತೆಯೇ ತಾನೆ. ಭಾಷಣ ಮಾಡುವವನ ದೃಷ್ಟಿಯಲ್ಲಿ ಎಲ್ಲ ಸಭಿಕರೂ ಮುಖ್ಯವೇ. ಆವಾಗ ಆತ ಕೆಲವರನ್ಪಷ್ಟೇ ಗುರುತಿಸುವುದು ಅದೆಷ್ಟು ಸರಿ? ಗುರುತಿಸಲ್ಪಟ್ಟವನಿಗೆ ಹೆಮ್ಮೆ ಎನಿಸಬಹುದು. ಆದರೆ ಗುರುತಿಸಲ್ಪಡದವನಿಗೆ ತನ್ನನ್ನು ಉಪೇಕ್ಷಿಸಿದನೆಂಬ ಭಾವ ಬಂದಲ್ಲಿ ತಪ್ಪಿಲ್ಲ.

ಇನ್ನೊಂದು ದೃಷ್ಟಿಯಿಂದ ಇತರರನ್ನು ಅವಮಾನಿಸಿದಂತೆಯೇ. ಹಾಗಾದರೆ ಎಲ್ಲ ಸಭಿಕರನ್ನೂ ಇವರೇ ಇವರೇ ಎನ್ನಲಾಗದು. ಅಥವಾ ಯಾವುದೇ ಸಭಿಕರು ತಮ್ಮ ಹೆಸರು ಹೇಳಿ ಭಾಷಣಕಾರ ಗುರುತಿಸಲ್ಪಡಬೇಕೆಂದು ಬಯಸುವುದೂ ಇಲ್ಲ. ಕೇವಲ ಭಾಷಣಕಾರನಲ್ಲ ಪ್ರಸ್ಥಾವನೆ ಮಾಡುವವರು, ಸ್ವಾಗತ ಮಾಡುವವರು, ಧನ್ಯವಾದ ಹೇಳುವವರೂ ಇಂತಹ ಗುರುತಿಸಲ್ಪಡುವ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಇದು ಸಣ್ಣ ವಿಷಯವಾದರೂ ಬಹಳ ಕಿರಿಕಿರಿಯಾಗುವುದಂತೂ ಖಂಡಿತ. ಒಂದು ವೇಳೆ ಆ ದಿವಸದ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟವನಾದರೆ ಆತನಿಗೆ ಧನ್ಯವಾದಗಳನ್ನು ಹೇಳಬಹುದು ಅಥವಾ ಹೇಳಲೇಬೇಕು. ಅದಕ್ಕೆ 

ಎರಡು ಮಾತಿಲ್ಲ. ಅದು ಬಿಟ್ಟು ಬರಿದೆ ಪ್ರತಿಷ್ಠೆ ಎಂಬುದನ್ನೇ ಮುಂದಿಟ್ಟು ಇವರೇಗಳಾದಾಗ ಒಂದು ಒಳ್ಳೆಯ ಕಾರ್ಯಕ್ರಮವೂ ಕಳೆಗುಂದುವುದು ಖಂಡಿತ...

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post