ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಲಿತ ಸಮುದಾಯದ ಕುರಿತು ಹಗುರವಾಗಿ ಮಾತನಾಡಬೇಡಿ: ಬಿ.ಹರ್ಷವರ್ಧನ್

ದಲಿತ ಸಮುದಾಯದ ಕುರಿತು ಹಗುರವಾಗಿ ಮಾತನಾಡಬೇಡಿ: ಬಿ.ಹರ್ಷವರ್ಧನ್


ನಂಜನಗೂಡು (ಮೈಸೂರು): ಸಂವಿಧಾನ ಶಿಲ್ಪಿ, ಶೋಷಿತರ ಮಹಾನಾಯಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ದಲಿತರ ಕುರಿತಂತೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಮಾಜಿ ಸಂಸದರಾದ ಧೃವನಾರಾಯಣ ಅವರು ಹಾಗೂ ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ನೀಡಿರುವ ಹೇಳಿಕೆಗೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಅಂಬೇಡ್ಕರ್ ಅವರಿಗೆ ನಿಜವಾಗಿ ಅನ್ಯಾಯ ಮಾಡಿದವರು ಕಾಂಗ್ರೆಸ್ ನವರು. ಅವರನ್ನು ಚುನಾವಣೆಯಲ್ಲಿ ಸೋಲಿಸಿ ಸಂವಿಧಾನಾತ್ಮಕ ಹುದ್ದೆಯೇ ಸಿಗದಂತೆ ಮಾಡಿದ್ದರು. ಅಂಬೇಡ್ಕರರ ಪ್ರತಿ ಹಾದಿಯಲ್ಲೂ ತೊಂದರೆ ನೀಡಿದವರು ಕಾಂಗ್ರೆಸ್ ನವರು. ಈ ಕುರಿತು ಸ್ವತಃ ಅಂಬೇಡ್ಕರ್ ಅವರೇ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ದಯವಿಟ್ಟು ಬಿಡುವು ಮಾಡಿಕೊಂಡು ಓದಲಿ ಎಂದು ಸಲಹೆ ನೀಡಿದ್ದಾರೆ.


ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ  ಪಟ್ಟುಬಿಡದ ಅವಿರತ ಶ್ರಮ, ಪಾಂಡಿತ್ಯದಿಂದ ಅವರಿಗೆ ಸಂಪುಟದಲ್ಲಿ ದೇಶದ ಪ್ರಥಮ  ಕಾನೂನು ಸಚಿವರಾಗಿ ಕೆಲಸ ಮಾಡುವ ಅವಕಾಶ ದೊರಕಿತು. ಆದರೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ಬಾಬಾ ಸಾಹೇಬರು ಹೇಳಿದಂತೆ 'ಇತಿಹಾಸವನ್ನು ಮರೆತವರು; ಇತಿಹಾಸವನ್ನು ಸೃಷ್ಠಿಸಲಾರರು'. ಬಾಬಾ ಸಾಹೇಬರಿಗೆ ಕಾಂಗ್ರೆಸ್ ಪ್ರತಿಕ್ಷಣ ನೀಡಿರುವ ನೋವನ್ನು ಶೋಷಿತ ಸಮುದಾಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಾಜಿ ಸಂಸದರು ಒಂದು ಕ್ಷಣ ಇದನ್ನೆಲ್ಲ ನೆನಪಿಸಿಕೊಳ್ಳಲಿ ಎಂದು ಹರ್ಷವರ್ಧನ್ ತಿರುಗೇಟು ನೀಡಿದ್ದಾರೆ.


ರೈಲ್ವೆ ಖಾಸಗೀಕರಣ ಪ್ರಸ್ತಾವನೆಗೂ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಸೇವೆಯ ಗುಣಮಟ್ಟ ಉನ್ನತೀಕರಣಕ್ಕಾಗಿ ಖಾಸಗೀಕರಣವೇ ವಿನಃ ಇದರಲ್ಲಿ ಮೀಸಲಾತಿಯ ಯಾವುದೇ ವ್ಯತ್ಯಾಸವಿರುವುದಿಲ್ಲ. ಇಂತಹ ಕ್ಷುಲ್ಲಕ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಧೃವನಾರಾಯಣರು ನಿಲ್ಲಿಸಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿಸ್ತೃತ ಚರ್ಚೆಗೆ ಬಿಜೆಪಿ ಸಿದ್ಧವಿದೆ ಎಂದೂ ಶಾಸಕ ಹರ್ಷವರ್ಧನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.


ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ್ದು ಬಿಜೆಪಿ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಶ್ರೇಷ್ಠ ಗ್ರಂಥ ಎಂದು ಸಾರಿದ್ದು ಬಿಜೆಪಿ. ಅಂಬೇಡ್ಕರ್ ಅವರ ಜನ್ಮ ಸ್ಥಳ ಸೇರಿದಂತೆ 5 ಸ್ಥಳಗಳನ್ನು ಪವಿತ್ರ ಯಾತ್ರಾಸ್ಥಳ ಎಂದು ಘೋಷಿಸಿದ್ದು ಬಿಜೆಪಿ. ಅಲ್ಲದೆ ನರೇಂದ್ರ ಮೋದಿಜೀ ಪ್ರಧಾನಿಯಾಗಿ ಎರಡನೆ ಅವಧಿಗೂ ಆಯ್ಕೆಯಾದಾಗ ಸಂವಿಧಾನಕ್ಕೆ ಶಿರಬಾಗಿ ನಮಿಸಿದ್ದಾರೆ. ಇದನ್ನು ಕಾಂಗ್ರೆಸ್ ನವರು ಅರಿಯಬೇಕು ಎಂದು ಶಾಸಕ ಹಷ೯ವಧ೯ನ್  ಹೇಳಿದ್ದಾರೆ.


ಪಕ್ಷದಲ್ಲೇ ಇದ್ದು ಧ್ವನಿ ಎತ್ತಬೇಕಿತ್ತು:

ಕೇಂದ್ರದ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆಯವರು ಸಂವಿಧಾನ ಕುರಿತು ನೀಡಿರುವ ಹೇಳಿಕೆ ವಿರೋಧಿಸಿ ಸ್ವಾಭಿಮಾನಕ್ಕಾಗಿ ಬಿಜೆಪಿಯಿಂದ ಹೊರಗೆ ಬಂದಿರುವುದಾಗಿ ಹೇಳಿಕೆ ನೀಡಿರುವ ಮಾಜಿ ಶಾಸಕ  ಎ.ಆರ್.ಕೃಷ್ಣಮೂರ್ತಿಯವರಿಗೆ ಧೈರ್ಯವಿದ್ದಿದ್ದರೆ ಅವರು ಪಕ್ಷದಲ್ಲೇ ಇದ್ದು ಧ್ವನಿ ಎತ್ತಬೇಕಿತ್ತು. ಆಗ ಜನ ಅವರನ್ನು ಮೆಚ್ಚುತ್ತಿದ್ದರು. ಅದನ್ನು ಬಿಟ್ಟು ಪಲಾಯನ ಮಾಡಿ ಮಾತನಾಡುವುದನ್ನು ಜನ ಮೆಚ್ಚುವುದಿಲ್ಲ ಎಂದು ಹರ್ಷವರ್ಧನ್ ಹೇಳಿದ್ದಾರೆ.


ಕೆಲವು ವರ್ಷಗಳ ಹಿಂದೆ ತಮ್ಮದೇ ಹೇಳಿಕೆಯಿಂದ ಎ.ಆರ್.ಕೃಷ್ಣಮೂರ್ತಿಯವರು ಅನುಭವಿಸಿದ ಪಾಡೇನು ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಅಷ್ಟಾದರೂ ಬಿಜೆಪಿ ಮತ್ತೊಮ್ಮೆ ಅವರಿಗೆ ಟಿಕೆಟ್ ನೀಡಿ ಆಯ್ಕೆಯಾಗುವಂತೆ ಮಾಡಿತ್ತು. ಅದನ್ನು ಮರೆತು ಈಗ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹರ್ಷವರ್ಧನ್ ಹೇಳಿದ್ದಾರೆ.


ಮೈಸೂರಿನಲ್ಲಿ ಆಯೋಜನೆಗೊಂಡಿದ್ದ ಕಾಯ೯ಕ್ರಮವೊಂದರಲ್ಲಿ ಅಂದು ಬಿಜೆಪಿಯ ರಾಷ್ಟ್ರ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರ ಎದುರುಗಡೆ ವೇದಿಕೆಯಲ್ಲಿಯೇ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಅನಂತಕುಮಾರ್ ಹೆಗಡೆ  ಹೇಳಿಕೆಯಿಂದ ಇಡೀ ದಲಿತ ಸಮುದಾಯಕ್ಕೆ ನೋವಾಗಿದೆ, ನಾವು ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದನ್ನು ಎ.ಆರ್. ಕೃಷ್ಣಮೂತಿ೯ ಹಾಗೂ ಕಾಂಗ್ರೆಸ್ ನಾಯಕರು ಮರೆತಂತಿದೆ. ಅಲ್ಲದೆ 'ನನಗೆ ರಾಜಕೀಯ ಪಕ್ಷಗಳಿಗಿಂತ ಅಂಬೇಡ್ಕರರೇ ಮುಖ್ಯ' ಎಂದು  ಸ್ವಾಭಿಮಾನದಿಂದ ಹೇಳುವ ಎದೆಗಾರಿಕೆ ಈ ನಾಡಿನಲ್ಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರನ್ನ ಬಿಟ್ಟರೆ ಮತ್ಯಾವ ದಲಿತ ನಾಯಕರಿಗಿದೆ ಎನ್ನುವುದನ್ನು ಮನಗಾಣಬೇಕು. ಆ ಕಾರಣದಿಂದಲೇ ಇಂದಿಗೂ ಇಡೀ ದಲಿತ ಸಮುದಾಯ ಪ್ರಸಾದ್ ಅವರ ಹೋರಾಟವನ್ನು ಅಪ್ಪಿ ಬೆನ್ನಿಗೆ ನಿಂತಿರುವುದು ಎಂದು ಹರ್ಷವರ್ಧನ ಸ್ಪಷ್ಟಪಡಿಸಿದ್ದಾರೆ.


ಮಾಜಿ ಮುಖ್ಯಮಂತ್ರಿಗಳು ಸ್ಪಷ್ಟೀಕರಣ ನೀಡಲಿ:

ದಲಿತರು ಬಿಜೆಪಿಗೆ ಹೋಗಿರುವುದು ಹೊಟ್ಟೆಪಾಡಿಗಾಗಿ ಎನ್ನುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸ್ಪಷ್ಟೀಕರಣ ನೀಡಬೇಕು. ಮತ್ತು ಇಂತಹ ಹೇಳಿಕೆ ನೀಡಿದ್ದರೆ ಕೂಡಲೇ ಕ್ಷಮೆ ಕೇಳಬೇಕು. ದಲಿತರ ಕುರಿತು ಇಷ್ಟು ಹಗುರವಾಗಿ ಅವರು ಮಾತನಾಡಬಾರದು. ಇದನ್ನು ಬಿಟ್ಟು ಸಕಾರಾತ್ಮಕ ವಿಚಾರಗಳ ಕಡೆಗೆ ಅವರು ಗಮನಹರಿಸಲಿ ಎಂದೂ ಹರ್ಷವರ್ಧನ್ ಸಲಹೆ ನೀಡಿದ್ದಾರೆ.


ಅಹಿಂದ ಆರಂಭವಾಗಬೇಕಾದರೆ ಬೀದರ್ ನಿಂದ ಚಾಮರಾಜ ನಗರದವರೆಗೂ ಇಡೀ ದಲಿತ ಸಮೂಹ ಸಿದ್ದರಾಮಯ್ಯನವರ ಜೊತೆಗೆ ಇತ್ತು. ಅಹಿಂದ ಸಮಾವೇಶಕ್ಕೆ ಚಾಲನೆ ನೀಡಿದ್ದೇ ದಲಿತ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ಅವರು. ಅಹಿಂದದಿಂದ ಬಂದೇ ನೀವು ಮುಖ್ಯಮಂತ್ರಿಯಾದಿರಿ. ಮುಖ್ಯಮಂತ್ರಿಯಾಗಿ ಅನೇಕ ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸಿದ್ದು ಕೂಡ ದಲಿತ ಸಮುದಾಯದವರ ಗಮನದಲ್ಲಿದೆ. ಆದರೆ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಯಾವ ರೀತಿ ಸೋಲಿಸಿದಿರಿ, ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಯಾವ ಕಾರಣಕ್ಕಾಗಿ ಸಚಿವ ಸಂಪುಟದಿಂದ ತೆಗೆದು ಅವಮಾನಿಸಿದಿರಿ, ನಂತರ ಏನಾಯಿತು ಎನ್ನುವುದು ಕೂಡ ದಲಿತ ಸಮುದಾಯಕ್ಕೆ ಗೊತ್ತಿರುವ ವಿಚಾರ. ಆದರೆ ಈಗ ದಲಿತ ಸಮೂಹವನ್ನು ಅವಮಾನ ಮಾಡುವಂತಹ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಈ ಬಗ್ಗೆ ಸಿದ್ದರಾಮಯ್ಯನವರು ಸ್ಪಷ್ಟೀಕರಣ ನೀಡಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم