ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಲಿತರ ಕಾಲನಿಯಲ್ಲಿ ಗೋಪೂಜೆಗೈದ ಸಚಿವ ಪೂಜಾರಿ

ದಲಿತರ ಕಾಲನಿಯಲ್ಲಿ ಗೋಪೂಜೆಗೈದ ಸಚಿವ ಪೂಜಾರಿ


ಉಡುಪಿ: ರಾಜ್ಯದಲ್ಲೇ ಮೊದಲ ಬಾರಿಗೆಂಬಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿಯವರು ಶುಕ್ರವಾರ ಉಡುಪಿಯ ಪರಿಶಿಷ್ಟ ಜಾತಿಯವರ ಕಾಲೊನಿಯಲ್ಲಿ ಗೋಪೂಜೆ ನೆರವೇರಿಸಿ ಗಮನಸೆಳೆದಿದ್ದಾರೆ.


ದೀಪಾವಳಿ ಪ್ರಯುಕ್ತ ಉಡುಪಿ ದೊಡ್ಡಣಗುಡ್ಡೆಯಲ್ಲಿರುವ ಅಂಬೇಡ್ಕರ್ ಕಾಲೊನಿಯಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಸುಮಾರು 60 ಶುದ್ಧ ದೇಶಿ ಹಸುಗಳನ್ನು ಯಾವುದೇ ಲಾಭದ ಉದ್ದೇಶವಿಲ್ಲದೇ ಪೋಷಿಸುತ್ತಿರುವ ದಲಿತ ವಿಧವೆ ಕಮಲಮ್ಮನ ಗೋಶಾಲೆಗೆ ಉಡುಪಿ ಶಾಸಕ‌ಕೆ ರಘುಪತಿ ಭಟ್ಟರೊಂದಿಗೆ ಆಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಗೋಪೂಜೆ ನೆರವೇರಿಸಿದರು. 


ಗೋಪೂಜಾ ಸಂಕಲ್ಪ ವಿಧಿ ನೆರವೇರಿಸಿದ ಬಳಿಕ ಗೋವಿನ ಪದಕ್ಕೆ ನೀರೆರೆದು, ಹಣೆಗೆ ಅರಶಿನ‌ ಕುಂಕುಮ ಹಚ್ಚಿ, ಮೈಮೇಲೆ ಸೀರೆ ರವಿಕೆ ಕಣ ಪುಷ್ಪ ಮಾಲೆ ಹಾಕಿ, ಅವಲಕ್ಕಿ, ಅರಳು ಮಿಶ್ರಿತ ಕಜ್ಜಾಯವನ್ನು ಅರ್ಪಿಸಿ ಮಂಗಳಾರತಿ ಬೆಳಗಿದರು, ಪುರೋಹಿತ ಪದ್ಮನಾಭ ಆಚಾರ್ಯರು ಪೂಜಾವಿಧಿ ನೆರವೇರಿಸಿದರು. ಉಳಿದ ಹಸುಗಳಿಗೂ ಗೋಗ್ರಾಸ ನೀಡಲಾಯಿತು.‌ ಸಾಮೂಹಿಕ ಪ್ರಾರ್ಥನೆ ನಡೆಯಿತು.




ಬಳಿಕ ಇಲಾಖೆಯ ವತಿಯಿಂದ ಕಮಲಮ್ಮ ಮತ್ತು ಅವರ ಮಗನಿಗೆ ಸಚಿವರು ಹೊಸ ಬಟ್ಟೆ ಮತ್ತು ಸಿಹಿತಿಂಡಿಯನ್ನು ಹಾಗೂ ಹಸುಗಳಿಗೆ ಒಂದು ಕ್ವಿಂಟಾಲ್ ಹಿಂಡಿಯನ್ನು ಉಡುಗೊರೆಯಾಗಿ ನೀಡಿದರು . 


ಸಚಿವರ ಅಚ್ಚರಿ:

ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಇಷ್ಟೊಂದು ಹಸುಗಳನ್ನು ಅದೂ ಯಾವುದೇ ಲಾಭವಿಲ್ಲದೇ ಸಾಕುತ್ತಿರುವ ಕಮಲಮ್ಮನ ಸಾಹಸಕ್ಕೆ ಸಚಿವ ಕೋಟ ಆನಂದ ಹಾಗೂ ಅಚ್ಚರಿ ವ್ಯಕ್ತಪಡಿಸಿದರು. ಈ ಗೋಶಾಲೆಯ ಸುರಕ್ಷತೆಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರು ಮಾಡಿದ ಮನವಿಯನ್ನು ಒಪ್ಪಿದ ಸಚಿವರು ಖಂಡಿತ ಮಾಡಿಕೊಡೋದಾಗಿ ಭರವಸೆ ನೀಡಿದರು.


ಜಿ ಪಂ ಮಾಜಿ‌ಅಧ್ಯಕ್ಷ ದಿನಕರ ಬಾಬು, ನಗರ ಸಭಾ ಸದಸ್ಯರಾದ ಗಿರಿಧರ ಆಚಾರ್ಯ, ಪ್ರಭಾಕರ ಪೂಜಾರಿ, ಪ್ರೊ ಸದಾಶಿವ ರಾವ್, ಎಸ್ ವಿ ಭಟ್ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಪೂಜಾರಿ ಪೇತ್ರಿ ಕಾರ್ಯಕ್ರಮ ಸಂಯೋಜಿದರು. ಕಾಲೊನಿಯ ನಿವಾಸಿಗಳಿಗೆ ಸಚಿವರ ಸೂಚನೆಯಂತೆ ಸಿಹಿ ವಿತರಿಸಲಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post