ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಜಕೀಯ ನೋಟ: ಸಿಂದಗಿ 'ಜಿಂದಗಿ' ಹಾನಗಲ್ 'ಹಾರ್‌ಗಯಿ'

ರಾಜಕೀಯ ನೋಟ: ಸಿಂದಗಿ 'ಜಿಂದಗಿ' ಹಾನಗಲ್ 'ಹಾರ್‌ಗಯಿ'



ರಾಜ್ಯದಲ್ಲಿ ನಡೆದು ಎರಡು ಉಪ ಚುನಾವಣೆ ಮತ್ತು ಅದರ ಫಲಿತಾಂಶ ಮೂರು ಪಕ್ಷಗಳಿಗೂ ತಕ್ಕ ಪಾಠ ಕಲಿಸಿದೆ ಅನ್ನುವುದು ನನ್ನ ಮಾತಲ್ಲ. ಸ್ವತ: ಬಿಜೆಪಿ ಹಿರಿಯ ನಾಯಕ ಸಚಿವರಾದ ವಿ. ಸೇೂಮಣ್ಣ ವರ ಮಾತು. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಮತದಾರ ಯಾವಾಗ ಯಾರ ಕಡೆಗೆ ಒಲವು ತೇೂರುತ್ತಾನೆ ಅಂದು ಹೇಳುವುದೇ ಕಷ್ಟ. ಇಂದು ಹಿಗ್ಗಿದವ ನಾಳೆ ಕುಗ್ಗಲೇ ಬೇಕು. ಇಂದು ಕುಗ್ಗಿದವ ನಾಳೆ ಹಿಗ್ಗಲೇಬೇಕು. ಅದಕ್ಕಾಗಿಯೇ ಇದನ್ನು ಚುನಾವಣೆ ಅನ್ನುವುದು. ಈ ಮರ್ಮವನ್ನು ತಿಳಿಯದವ ರಾಜಕೀಯಕ್ಕೆ ನಾಲಾಯಕ್.


ಸಿಂದಗಿಯಲ್ಲಿ ಬಿಜೆಪಿ ಜಿಂದಗಿ.ಇದು ಕೂಡಾ ಬಿಜೆಪಿಗೂ ಕಾಂಗ್ರೆಸ್‌ಗೂ ಜೆಡಿಎಸ್‌ಗೂ ತಕ್ಕ ಪಾಠ. ಇಲ್ಲಿ ಬಿಜೆಪಿ ತಾನು ಗೆದ್ದಿದ್ದೇನೆ ಅಂದುಕೊಂಡು ಬೀಗುವ ಹಾಗಿಲ್ಲ. ಸಿಂದಗಿಯಲ್ಲಿ ಪ್ರಬಲವಾಗಿರುವ ಪಕ್ಷ ಜೆಡಿಎಸ್ ತಾನು ಮಾಡಿಕೊಂಡ ತಪ್ಪಿನಿಂದಾಗಿ ಮಣ್ಣು ಮುಕ್ಕಿದೆ. ಇದು ಕಾಂಗ್ರೆಸ್ಗೆ ಹೆಚ್ಚು ಬಲ ನೀಡಿದೆ ಮಾತ್ರವಲ್ಲ ಬಿಜೆಪಿಯ ಗೆಲುವಿಗೂ ಕಾರಣವಾಗಿದೆ. ಹಾಗಾಗಿ ಜೆಡಿಎಸ್ ತೆಕ್ಕೆಯಲ್ಲಿದ್ದ ಸೀಟು ಬಿಜೆಪಿಗೆ ಸುಲಭವಾಗಿ ಬಂದಿದೆ. ಅಂತೂ ಮುಖ್ಯಮಂತ್ರಿ ಬೊಮ್ಮಾಯಿಯವರ ಮರ್ಯಾದೆ ಉಳಿಸಿದ ಕೀರ್ತಿ ಸಿಂದಗಿಗೆ ಸಂದಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ.


ಹಾನಗಲ್ ಫಲಿತಾಂಶ ಬಿಜೆಪಿ ಪಾಲಿಗೆ ನುಂಗಲಾರದ ತುತ್ತು ಅನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇದು ಸರಿ ಕೂಡಾ. ನೂತನ ಮುಖ್ಯಮಂತ್ರಿ ಬೊಮ್ಮಾಯಿವರ ತವರು ಜಿಲ್ಲೆ ಅನ್ನುವುದು ಮಾತ್ರವಲ್ಲ ಬಿಜೆಪಿಯ ಭದ್ರ ಕೇೂಟೆ ಅನ್ನಿಸಿಕೊಂಡಿದ್ದ ಹಾನಗಲ್ ಕೈತಪ್ಪಿ ಕೈ ಪಕ್ಷಕ್ಕೆ ಜಾರಿರುವುದು ಹತ್ತು ಹಲವು ಪ್ರಶ್ನೆಗಳಿಗೆ ಎಡೆಮಾಡಿ ಕೊಟ್ಟಿದೆ.


ಅಂತೂ ನಮ್ಮ ಯಡಿಯೂರಪ್ಪನವರು ಬಿಜೆಪಿ ವರಿಷ್ಠರಿಗೆ ಲಿಂಗಾಯತ ರಾಜಕೀಯ ಶಕ್ತಿ ಎಷ್ಟು ಏನು ಅನ್ನುವ ಪರೇೂಕ್ಷ ಸಂದೇಶ ಹಾನಗಲ್ ಫಲಿತಾಂಶದ ಮೂಲಕ ತೇೂರಿಸಿ ಕೊಟ್ಟಿದ್ದಾರೆ. ಎಲ್ಲೊ ಯಡಿಯೂರಪ್ಪ ಮತ್ತು ಅವರ ಕುಮಾರ ಕಂಠೀರವನನ್ನು ಬದಿಗಿಟ್ಟು ಚುನಾವಣೆ ಎದುರಿಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆ ಫಲಿತಾಂಶ ಏನಾಗಬಹುದು ಅನ್ನುವ ಭವಿಷ್ಯದ ಮಾತು ಪಕ್ಷದ ವರಿಷ್ಠರಿಗೆ ಪರೇೂಕ್ಷವಾಗಿ ಯಡಿಯೂರಪ್ಪ ರವಾನಿಸಿದಂತೂ ಸತ್ಯ.


ಕುಮಾರಸ್ವಾಮಿ ಅವರ ಜಾತ್ಯತೀತ ಒಲವಿನ ಮಾತುಗಳು ಬಹು ಸಂಖ್ಯಾತರಿಗೆ ನೇೂವು ಉಂಟು ಮಾಡಿರುವುದಂತೂ ಸಿಂದಗಿಯಲ್ಲಿ ಠೇವಣಿ ಕಳೆದುಕೊಂಡಾಲೇ ಗೊತ್ತಾಗಿರಬೇಕು. ಕಾಂಗ್ರೆಸ್ ಪಕ್ಷ ಇಲ್ಲಿ ಕಳೆದು ಕೊಂಡಿಲ್ಲ ಬದಲಾಗಿ ಬಿಜೆಪಿ ಪ್ರತಿಷ್ಠಿತ ಸ್ಥಾನಕ್ಕೆ ಲಗ್ಗೆ ಹಾಕಿರುವುದು ಕಾಂಗ್ರೆಸ್ ಪಕ್ಷಕ್ಕೆ ಮರು ಜೀವ ನೀಡಿದೆ. ಆದರೂ ಇಲ್ಲಿ ನಾವು ಗಮನಿಸಬೇಕಾದದ್ದು ಇಲ್ಲಿ ಸಿದ್ದರಾಮಯ್ಯ ಗೆದ್ದಿದ್ದೋ? ಡಿಕೆಶಿ ಗೆದ್ದಿರುವುದೋ ಎಂಬ ಅನುಮಾನದ ಬಹುಮುಖ್ಯ ಪ್ರಶ್ನೆ ಕಾಡುತ್ತಿರುವುದು ಸಿದ್ದು ಮತ್ತು ಡಿಕೆಶಿ ಅವರನ್ನು ಅನ್ನುವುದು ಅಷ್ಟೇ ಸತ್ಯ.


ಒಟ್ಟಿನಲ್ಲಿ ಅಧಿಕಾರ ರೂಢ ಪಕ್ಷ ಬಿಜೆಪಿಗೆ ಗಂತೂ ತಕ್ಕ ಪಾಠ ಕಲಿಸಿರುವುದಂತೂ ನಿಜ. ಬೆಲೆ ಏರಿಕೆ; ಕೊರೊನ ಸಮಸ್ಯೆ ನಿಭಾಯಿಸಿದ ರೀತಿ; ಭ್ರಷ್ಟಾಚಾರ ದಂತಹ ವಿಚಾರಗಳು ಸಾಕಷ್ಟು ಪರಿಣಾಮ ಪ್ರಭಾವ ಇಲ್ಲಿ ಬೀರಿದೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಫಲಿತಾಂಶವೂ ಹೌದು.ಈ ದಿಸೆಯಲ್ಲಿ ಬಿಜೆಪಿಗೂ ಕಾಂಗ್ರೆಸ್ಗೂ ಜೆಡಿಎಸ್ ಗೂ ಯಾವುದೇ ವ್ಯತ್ಯಾಸ ಇಲ್ಲ ಅನ್ನುವ ನಿಧಾ೯ರಕ್ಕೆ ಮತದಾರ ನಿಧಾನವಾಗಿ ಬರುತ್ತಿದ್ದಾನೆ ಅನ್ನುವ ಅರಿವಾಗುತ್ತಿದೆ. ಯಾವುದೊ ಒಂದು ಕಾರಣಕ್ಕಾಗಿ ಜನ ಬಿಜೆಪಿಯನ್ನು ಆಪ್ಪಿಕೊಂಡಿದ್ದಾರೆ, ಬಿಟ್ಟರೆ ಈ ಮೇಲಿನ ಮೂರು ಕಾರಣಕ್ಕಾಗಿ ಅಲ್ಲ. ಇದನ್ನು ಬಿಜೆಪಿ ಈಗಲೇ ಅರ್ಥ ಮಾಡಿಕೊಳ್ಳದೇ ಹೇೂದರೆ ಬಿಜೆಪಿ ಮುಂದಿನ ಚುನಾವಣೆಯಲ್ಲಿ  ಬಹುದೊಡ್ಡ ಪಾಠ ಕಲಿಯುವ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಇದು ಬಿಜೆಪಿಯಲ್ಲಿ ಆಧಿಕಾರ ರೂಢ ನಾಯಕರುಗಳಿಗೆ ಈಗ ಆರ್ಥವಾಗದೇ ಹೇೂಗಬಹುದು. ಆದರೆ ಅವರನ್ನು ಬಾಹ್ಯವಾಗಿ ನಿಯಂತ್ರಿಸುವ ಒತ್ತಡ ಗುಂಪುಗಳಿಗಾದರೂ ಅರ್ಥವಾದರೆ ಸಾಕು.


ಉತ್ತಮ ಅಭ್ಯರ್ಥಿಗಳನ್ನು ಮತದಾರ ಬಯಸುತ್ತಾನೆ ಅನ್ನುವುದು ಹಾನಗಲ್ ನಲ್ಲಿ ಸಾಬೀತಾಗಿದೆ. ಏನೇ ಆದರೂ ಈ ಉಪಚುನಾವಣೆ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿ ಅನ್ನುವುದನ್ನು ಮರೆಯುವಂತಿಲ್ಲ. ಅಲ್ವೇ?

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post