ಮಂಗಳೂರು: ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನಲ್ಲಿ ಇಂದು ಸಂಸ್ಥಾಪಕರ ದಿನಾಚರಣೆ ಹಾಗೂ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಜರಗಿತು.
ಸ್ವಾತಂತ್ರ್ಯ ಪೂರ್ವದಲ್ಲೇ ಕರ್ನಾಟಕ ಕರಾವಳಿಯಲ್ಲಿ ಮಂಗಳೂರಿನಲ್ಲಿ ಮೊತ್ತಮೊದಲ ಬಾರಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಕೆನರಾ ಬಾಲಕಿಯರ ಪ್ರೌಢಶಾಲೆ ಹಾಗೂ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ಅನ್ನು ಸ್ಥಾಪಿಸಿ ಇತಿಹಾಸ ಸೃಷ್ಟಿಸಿದ ಧೀಮಂತ ಅಮ್ಮೆಂಬಳ ಸುಬ್ಬರಾವ್ ಪೈ (1852-1909) ಅವರ ಜನ್ಮದಿನವಾದ ನವೆಂಬರ್ 19ರಂದು ಪ್ರತಿವರ್ಷವೂ ಕೆನರಾ ಶಿಕ್ಷಣ ಸಂಸ್ಥೆಗಳ ಹಾಗೂ ಕೆನರಾ ಬ್ಯಾಂಕ್‌ನ ಸಂಸ್ಥಾಪಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಕಳೆದ ಆರು ವರ್ಷಗಳಿಂದ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘವು ಪ್ರತಿಭಾವಂತ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಲು ವಿದ್ಯಾರ್ಥಿವೇತನವನ್ನು ವಿತರಿಸುತ್ತಿದೆ. ಈ ಬಾರಿ ಕೆನರಾ ಶಿಕ್ಷಣ ಸಂಸ್ಥೆಗಳಲ್ಲಿ ಒಂದನೇ ತರಗತಿಯಿಂದ ಪಿಯುಸಿ ವರೆಗೆ ವಿವಿಧ ತರಗತಿಗಳಲ್ಲಿ ಕಲಿಯುತ್ತಿರುವ 135 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ದಿವಂಗತ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಬಳಿಕ ಕೆನರಾ ಪ್ರೌಢಶಾಲೆಯ ಸುಧೀಂದ್ರ ಆಡಿಟೋರಿಯಂನಲ್ಲಿ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀಮತಿ ಹರಿಣಿ ಕುಮಾರಿ ಸಂಸ್ಥಾಪಕರ ದಿನದ ಭಾಷಣ ಮಾಡಿದರು. ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಶ್ರೀ ಬಿ.ಜೆ ಕಾಮತ್ ಸಂಸ್ಥಾಪಕರ ಸಂಸ್ಮರಣೆಯೊಂದಿಗೆ, ವಿದ್ಯಾರ್ಥಿ ವೇತನ ವಿತರಣೆಯ ಕುರಿತು ಮಾಹಿತಿ ನೀಡಿದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಖಜಾಂಚಿ ಎಂ. ವಾಮನ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅರುಣಾ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ವಿದ್ಯಾ ಶೆಟ್ಟಿ ವಂದಿಸಿದರು.
ಸಿಎಚ್‌ಎಸ್ ಡೊಂಗರಕೇರಿ ಸಂಚಾಲಕರಾದ ಗೋಪಾಲಕೃಷ್ಣ ಶೆಣೈ, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ವಿದ್ಯಾರ್ಥಿ ವೇತನ ಪುರಸ್ಕೃತ ಮಕ್ಕಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment