ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿತ್ರ ವಿಮರ್ಶೆ: ರಾಜ್ ಬಿ. ಶೆಟ್ಟಿ ನಿರ್ದೇಶನದ 'ಗರುಡಗಮನ ವೃಷಭವಾಹನ'

ಚಿತ್ರ ವಿಮರ್ಶೆ: ರಾಜ್ ಬಿ. ಶೆಟ್ಟಿ ನಿರ್ದೇಶನದ 'ಗರುಡಗಮನ ವೃಷಭವಾಹನ'



 'ಗರುಡ ಗಮನ ವೃಷಭ ವಾಹನ' ಇಂದು ತೆರೆಕಂಡ ನಮ್ಮ ರಾಜ್ ಬಿ ಶೆಟ್ಟಿ ನಿರ್ದೇಶನದ ಸಿನಿಮಾ. ಇತ್ತಿಚೆಗೆ ತೆರೆಕಂಡ ಕನ್ನಡ ಚಿತ್ರಗಳಲ್ಲಿ ಈ ಚಿತ್ರ ಒಂದು ಪ್ರಾಯೋಗಿಕ ಚಿತ್ರವೆಂದರೆ ತಪ್ಪಾಗಲಾರದು. ಮುಖ್ಯ ಪಾತ್ರದಲ್ಲಿ ಸ್ವತಃ ರಾಜ್ ಬಿ ಶೆಟ್ಟಿ ಮತ್ತು ರಿಷಭ ಶೆಟ್ಟಿಯವರು ನಟಿಸಿದ್ದಾರೆ. ರಾಜ್ ಬಿ ಶೆಟ್ಟಿಯವರು ತಮ್ಮ ಹಿಂದಿನ ಎಲ್ಲ ಚಿತ್ರಗಳಿಗಿಂತ ಇಲ್ಲಿ ತಮ್ಮನ್ನು ತಾವು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದಾರೆ ಎನ್ನಬಹುದು‌. ಮಂಗಳೂರಿನ ಭಾಷೆ, ಆಚಾರ ವಿಚಾರ ಕೇಂದ್ರಿತ ಚಿತ್ರವು ಇದಾಗಿದ್ದು ಸಂಭಾಷಣೆ ಸಹಜವಾಗಿ ದಿನ ನಿತ್ಯ ಮಂಗಳೂರಿನಲ್ಲಿ ಉಪಯೋಗಿಸುವ ಭಾಷೆಯಲ್ಲಿ ಮೂಡಿಬಂದಿದ್ದು ರಾಜ್ ಬಿ ಶೆಟ್ಟಿ ಮತ್ತು ರಿಷಭ ಶೆಟ್ಟಿಯವರು ಅಚ್ಚುಕಟ್ಟಾದ ನಟನೆಯಿಂದ ಪ್ರೇಕ್ಷಕರ ಮೊಗದಲ್ಲಿ ನಗು ಕಾಣುವಲ್ಲಿ ಯಶಸ್ಸು ಕಂಡಿದ್ದಾರೆ.


ಒಂದು ಮಗುವಿನ ಮನಸ್ಸಿನ ಮೇಲೆ ಬಾಲ್ಯದಲ್ಲೇ ಕೆಟ್ಟದಾದ ಘಟನೆಗಳು ಪ್ರಭಾವವನ್ನುಂಟು ಮಾಡಿ ಆತನನ್ನು ಕಲ್ಲಿನ ಮನಸ್ಥಿತಿಯ ಮನುಷ್ಯನನ್ನಾಗಿ ರೂಪಿಸುವತ್ತ ಆತನ ಬದುಕು ಸಾಗುತ್ತ ಮತ್ತು ಸಮಾಜ ಆತನನ್ನು ನಡೆಸಿಕೊಳ್ಳುವ ರೀತಿಯಿಂದ ಉಂಟಾಗುವ ನೋವು ಹತಾಶೆ ಮುಂದೊಮ್ಮೆ ಸರಿಯಾದ ಸಮಯದಲ್ಲಿ ಆತನ ಮನಸ್ಸಿನಲ್ಲಿ ಮಡುಗಟ್ಟಿರುವ ಕೋಪ, ಹತಾಶೆಯನ್ನು ಯಾವ ಕೆಟ್ಟ ಕೆಲಸಕ್ಕೆ ಉಪಯೋಗಿಸಬಹುದು ಎಂಬುದನ್ನು ರಾಜ್ ಬಿ ಶೆಟ್ಟಿಯವರು ಶಿವನ ಪಾತ್ರದಲ್ಲಿ ತೋರ್ಪಡಿಸಿದರೆ, ಬದುಕಲ್ಲಿ ಏನಾದರೂ ಮಾಡಬೇಕು ಎನ್ನುವ ತುಡಿತದಿಂದ ಅವಕಾಶಕ್ಕಾಗಿ ಕಾಯುತ್ತಿರುವ ಹಾಗೂ ಶಿವನು ಮಾಡುವ ಕ್ರೌರ್ಯದ ಕೆಲಸಗಳಿಂದ ತನ್ನ ಒಳಿತನ್ನು ಕಂಡುಕೊಂಡು ಹೆಸರು ಗಳಿಸುವ ಉನ್ಮಾದದಲ್ಲಿ ಕರಾಳ ಜಗತ್ತಿನ ಕೆಟ್ಟ ಮುಖದ ಒಂದೊಂದೇ ಪದರವನ್ನು ಒಳಹೊಕ್ಕು ಅದರಲ್ಲಿ ಸುಖ ಕಾಣುವ ಹರಿಯ ಪಾತ್ರದಲ್ಲಿ ರಿಷಭ ಶೆಟ್ಟಿಯವರು ತೋರ್ಪಡಿಸಿದ್ದಾರೆ.


ಇವರಿಬ್ಬರಲ್ಲಿ ಯಾರು ತಾವಾಗಿಯೇ ಎಂದು ಯಾರನ್ನು ಕೊಲ್ಲಲು ಹೋಗದೆ ತಮ್ಮ ಹಾದಿಗೆ ಅಡ್ಡವಾದವರನ್ನು ಬದುಕುಳಿಸದೆ ಸಾಗುತ್ತಿರುತ್ತಾರೆ. ಹರಿ ಮತ್ತು ಶಿವನನ್ನು ಮುಗಿಸುವ ಕಾರ್ಯಕ್ಕೆ ಇಳಿಯುವ ಬ್ರಹ್ಮಯ್ಯ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಾರೆ.ಶಿವ ಪ್ರತಿ ಕ್ರೌರ್ಯದ ಕಾರ್ಯ ನಂತರ ಏನು ಅರಿಯದ ಮುಗ್ಧ ವ್ಯಕ್ತಿಯಂತೆ ಇರುವವನಾದರೆ, ಹರಿ ಮಾಡಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ದೇವಸ್ಥಾನದ ಕೆರೆಯಲ್ಲಿ ಸ್ನಾನ ಮಾಡುವ ತೊಳೆದುಕೊಳ್ಳುತ್ತಾನೆ. ಇದು ನಮ್ಮ ಇಂದಿನ ಸಮಾಜದ ಮನಸ್ಥಿತಿಯನ್ನು ತಿಳಿಸಿಕೊಡುವ ಒಳಾರ್ಥವು ಹೌದು. ಸಂಗೀತ ಈ ಚಿತ್ರದ ಅವಿಭಾಜ್ಯ ಅಂಗ ಶಿವನ ಕ್ರೌರ್ಯವನ್ನು ಉದ್ಗರಿಸುವುದಾಗಲಿ, ಹುಲಿ ಕುಣಿತದ ಸನ್ನಿವೇಶವೆ ಇರಲಿ ಹದವಾಗಿ ಉಣಬಡಿಸಿದ್ದಾರೆ.


ಚಿತ್ರದ ಬಹುಪಾಲು ಮಂಗಳೂರಿನ ಆಡುಭಾಷೆ, ಸಂಪ್ರದಾಯ, ಪ್ರತಿನಿತ್ಯದ ಆಗುಹೋಗುಗಳ ಇರುವುದರಿಂದ ಕರಾವಳಿಯ ಪ್ರೇಕ್ಷಕರಿಗೆ ಇಷ್ಟವಾಗಬಹುದು ಆದರೆ ಉತ್ತರ ಕರ್ನಾಟಕದ ಮಂದಿ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಕುತೂಹಲದ ವಿಷಯ. ಕೆಲವೊಂದು ಕಡೆ ಚಿತ್ರ ಪ್ರೇಕ್ಷಕರು ಅಂದುಕೊಂಡಿದ್ದಕ್ಕಿಂತ ನಿಧಾನವಾಗಿ ಸಾಗುವುದರಿಂದ ಸ್ವಲ್ಪ ಬೇಜಾರು ಅಂತನಿಸಬಹುದು ಆದರೆ ಕೊನೆಯಲ್ಲಿ ನೀಡುವ ಸಂದೇಶ ಒಂದಿಷ್ಟು ಸಮಂಜಸ ಎಂಬುದು ನನ್ನ ಆಶಯ ಅದೇನೆಂದರೆ ನಮ್ಮ ನಮ್ಮ ಬದುಕಿನ ಬೆಳವಣಿಗೆ ನಾವು ಕಂಡುಕೊಳ್ಳುವ ಹಾದಿ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಈ ಭೂಮಿ ಮೇಲೆ ನಮ್ಮ ಕೊನೆಯು ಒಳಿತು ಕೆಡುಕಿನ ಹಾದಿಯಿಂದ ನಿರ್ಣಯಿಸುತ್ತದೆ. ಒಟ್ಟಾರೆ  ನಿತ್ಯ ನೋಡುವ ಪ್ರೇಮ ಕಥೆಗಳಿಗಿಂತ ವಿಭಿನ್ನ ಚಿತ್ರವನ್ನು ನೋಡಲು ಬಯಸುವುದಾದರೆ ಚಿತ್ರಮಂದಿರದೆಡೆಗೆ ನೀವು ಹೋಗಬಹುದು.

-ಪ್ರದೀಪ ಶೆಟ್ಟಿ ಬೇಳೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post