ದಾಭೋಲಿ (ಮಹಾರಾಷ್ಟ್ರ): ದಾಭೋಲಿ ಮಠಾಧೀಶ ಶ್ರೀ ಶ್ರೀ ಪ್ರದ್ಯುಮ್ನಾನಂದ ಸ್ವಾಮಿ ಮಹರಾಜ್ ನಿರ್ಯಾಣ ದಾಭೋಲಿ ನ. 29 ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಶ್ರೀಮಠ ಸಂಸ್ಥಾನ ದಾಭೋಲಿಯ ಶ್ರೀ ಪ್ರದ್ಯುಮ್ನಾನಂದ ಸ್ವಾಮೀ ಮಹಾರಾಜರು ನ. 29ರ ಮುಂಜಾವದಲ್ಲಿ ಬ್ರಹ್ಮೀಭೂತರಾದರು. ಶ್ರೀಗಳವರ ಹರೆಯ 87 ವರ್ಷಗಳು.
ಶ್ರೀಮಠದ ಪೀಠಾಧಿಪತಿಯಾಗಿ ಕಳೆದ 28 ವರ್ಷಗಳಿಂದ ತಮ್ಮ ಶಿಷ್ಯವರ್ಗ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಮಾಜದ ಧರ್ಮಗುರುಗಳಾಗಿ, ಮಾರ್ಗದರ್ಶಕರಾಗಿ ಪ್ರೇರಣಾಶಕ್ತಿಯಾಗಿ ಶೃದ್ಧಾಕೇಂದ್ರವಾಗಿದ್ದರು. ಮಠ ಪರಂಪರೆ ಆದ್ಯ ಶಂಕರಾಚಾರ್ಯರಿಂದ ಮೊದಲ್ಗೊಂಡು ಶೃಂಗೇರಿಯ ಹತ್ತನೆಯವರಾದ ಪ.ಪೂ. ವಿದ್ಯಾತೀರ್ಥ ಸ್ವಾಮೀಜಿಯವರಿಂದ ದೀಕ್ಷೆ ಪಡೆದುಕೊಂಡು, ಹದಿಮೂರನೆಯ ಶತಕದ ಕೊನೆಯ ಪಾದದಲ್ಲಿ, ಕುಡಾಳ್ ದೇಶಕರ್ ಸಮಾಜದ ಸಾಮಂತ ದೇಸಾಯಿ ಎಂಬವರು ಶ್ರೀ ಮದ್ವಿದ್ಯಾಪೂರ್ಣಾನಂದರೆಂಬ ಹೆಸರಿನಿಂದ ಪ್ರಖ್ಯಾತರಾದರು.
ವೈದಿಕ ಧರ್ಮದ ಪ್ರಸಾರಣಾರ್ಥವಾಗಿ ಆ ಕಾಲದಲ್ಲಿ ಕುಡಾಳ ಪ್ರಾಂತವನ್ನಾಳುತ್ತಿದ್ದ ಕುಡಾಳ ದೇಶಸ್ಥ ಆದ್ಯ ಗೌಡ ಬ್ರಾಹ್ಮಣರು ಸೋನವಡೆಯಲ್ಲಿ ಗುರುಮಠವನ್ನು ಸ್ಥಾಪಿಸಿ, ತಮ್ಮ ಧರ್ಮಗುರುವಾಗಿ ಸ್ವೀಕರಿಸಿದರು. ರಾಜಕೀಯ ಕಾರಣಗಳಿಂದಾಗಿ ಮಠದ ಸ್ಥಾನಗಳು ಬದಲಾವಣೆಯಾದವು. ಸೋನವಡೆ, ಚಿಂದರಮಠ, ಶ್ರೀ ಪೂರ್ಣಾನಂದ ಮಠ ಗೋಳವಣ ಹೀಗೆ ಈ ಮೂರೂ ಮಠಗಳನ್ನು ತ್ಯಜಿಸಿ 1745ರಲ್ಲಿ ಸ್ಥಾಪನೆಗೊಂಡ ದಾಭೋಲಿ ಮಠವು ಪ್ರಸ್ತುತ ಕುಡಾಳ್ ದೇಶಕರ್ ಸಮಾಜದ ಶ್ರದ್ಧಾಕೇಂದ್ರವಾಗಿದೆ.
ಶ್ರೀಮಠದ ಪ್ರಥಮ ಪೀಠಾಧಿಪತಿಗಳೇ ಶ್ರೀ ಪೂರ್ಣಾನಂದ ಸ್ವಾಮೀ ಮಹಾರಾಜರು. ಅಷ್ಟ ಮಹಾಸಿದ್ಧಿ ಪ್ರಾಪ್ತರೂ ವೈರಾಗ್ಯ ಜ್ಞಾನ ಸಂಪನ್ನರೂ ಆದ ಶ್ರೀ ಪೂರ್ಣಾನಂದ ಸ್ವಾಮೀಜಿಯವರು ತಮ್ಮ ಸ್ವೇಚ್ಛೆಯಿಂದ ನಿರ್ಧಾರಪೂರ್ವಕವಾಗಿ ಸಂಜೀವನಿ ಸಮಾಧಿಯನ್ನು 1763ರಲ್ಲಿ ಪಡೆದುಕೊಂಡು ಅಂದಿನಿಂದ ಇಂದಿನವರೆಗೆ ಭಕ್ತಾದಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಿದ್ದಾರೆ. ಶ್ರೀ ಪೂರ್ಣಾನಂದ ಸ್ವಾಮೀಜಿಯವರ ಸಮಾಧಿಯೇ ಶ್ರೀ ಮಠದಲ್ಲಿ ಮುಖ್ಯವಾಗಿ ಪೂಜೆಗೊಳ್ಳಲ್ಪಡುತ್ತಿದ್ದು ಶ್ರೀಗಳ ಪುಣ್ಯತಿಥಿಯಂದು ಮಹಾರಾಷ್ಟ್ರ, ಕರ್ನಾಟಕದಿಂದ ಭಕ್ತಾದಿಗಳು ಸೇರುತ್ತಾರೆ.
ಮಠದ ಪೂಜೆಯ ದೇವರು ಶ್ರೀಲಕ್ಷ್ಮೀ ನಾರಾಯಣ. ಮಠ ಪರಂಪರೆಯ ನಾಲ್ಕನೆಯ ಮಠವಾದ ಶ್ರೀ ಸಂಸ್ಥಾನ ದಾಭೋಲಿಯ ಉಗಮವಾದ ಕ್ರಿ.ಶ. 1745ರಿಂದ ಶ್ರೀಪೂರ್ಣಾನಂದ ಸ್ವಾಮೀಜಿಯವರಾದಿಯಾಗಿ ಪ್ರಸ್ತುತ ಶ್ರೀ ಪ್ರದ್ಯುಮ್ನಾನಂದ ಸ್ವಾಮೀಜಿಯವರು 23ನೇ ಮಠಾಧಿಪತಿಯಾಗಿ 1994ರ ಏಪ್ರಿಲ್ 29ರಂದು ಧರ್ಮಪೀಠವನ್ನೇರಿದರು. ಶ್ರೀ ರಮಾನಂದ ಸ್ವಾಮೀಜಿಯವರ ನಿರ್ಯಾಣದಿಂದ ತೆರವಾದ ದಾಭೋಲಿ ಮಠದ ಗುರುಪೀಠದ ಸ್ಥಾನವನ್ನು ತುಂಬಲು ಸಂಪ್ರದಾಯದಂತೆ ಶ್ರೀ ಮನೋಹರ ದಾಭೋಲ್ಕರ್ ಅವರು ಆಯ್ಕೆಯಾದರು. ಅವರಿಗೆ ಸನ್ಯಾಸದೀಕ್ಷಾ ಸಮಾರಂಭ 1994ರ ಏಪ್ರಿಲ್ 26ರಿಂದ 29ರವರೆಗೆ ಸರಳ ರೀತಿಯಲ್ಲಿ ನಡೆಯಿತು.
ನೂತನ ಮಠಾಧಿಪತಿಗಳಿಗೆ ನರಸಿಂಹವಾಡಿಯ ಶ್ರೀ ದಿಗಂಬರ ಶಾಸ್ತ್ರಿ ಮತ್ತು ಇತರ ಪುರೋಹಿತರು ಪೌರೋಹಿತ್ಯ ವಹಿಸಿ ಪಟ್ಟಾಭಿಷೇಕ ಮಾಡಿ ಶ್ರೀಮದ್ ಪ್ರದ್ಯುಮ್ನಾನಂದರೆಂಬ ಅಭಿದಾನದಿಂದ ಮಠಾಧೀಶರನ್ನಾಗಿ ಮಾಡಿದರು. ಶ್ರೀಗಳು ಶ್ರೀ ಮಠ ಸಂಸ್ಥಾನ ದಾಭೋಲಿಯ ಕಾರ್ಯಭಾರವನ್ನು ನಿರ್ವಹಿಸಿಕೊಂಡು ಕುಡಾಳ್ ದೇಶಕರ್ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ಶ್ರೀಗಳು ಉಡುಪಿ ಹಾಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಗೋವಾ, ಬೆಳಗಾಂವ್, ಕೊಲ್ಹಾಪುರ, ಮುಂಬಯಿಗಳಿಗೂ ಸಂಚರಿಸಿ ತಮ್ಮ ಶಿಷ್ಯ ವರ್ಗವನ್ನು ಹರಸಿದ್ದಾರೆ.
ಶ್ರೀ ಮಠದಲ್ಲಿ ಈ ಹಿಂದೆ ಹಲವಾರು ವರ್ಷಗಳಿಂದ ಸ್ಥಗಿತಗೊಂಡ ವೇದಪಾಠ ಶಾಲೆಯು ಪ್ರಸ್ತುತ ಶ್ರೀಗಳ ನೇತ್ತತ್ವದಲ್ಲಿ ಪುನರಾರಂಭವಾಯಿತು. ಹಾಗೆಯೇ ಹಿಂದೆ ಸ್ಥಗಿತಗೊಂಡಿದ್ದ ಗೋಶಾಲೆಯನ್ನು ಪುನಃ ಊರ್ಜಿತಾವಸ್ಥೆಗೆ ತಂದಿರುತ್ತಾರೆ. ಅಭ್ಯಾಸಿಗಳಿಗೆ, ಸಂಶೋಧಕರಿಗೆ ನೆರವಾಗುವ ದೃಷ್ಟಿಯಿಂದ ಒಂದು ಸುಸಜ್ಜಿತ ಗ್ರಂಥಾಲಯ ನಿರ್ಮಾಣವಾಗಿದೆ. ಹಲವಾರು ಯಜ್ಞಯಾಗಾದಿಗಳೂ ಶ್ರೀಮಠದಲ್ಲಿ ಆಗಾಗ್ಗೆ ನಡೆಯುತ್ತಿರುವುದು ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕತಿಕ ನೆಲೆಯಲ್ಲಿ ಸಮಾಜದ ಪುನರುತ್ಥಾನದ ದಿಸೆಯಲ್ಲಿ ಒಂದು ದಿವ್ಯ ಭವಿಷ್ಯ ನಿರ್ಮಾಣಕ್ಕೆ ಕಾರಣವಾಗಿದೆ.
ಮಠದ ಮುಖವಾಣಿಯಂತಿರುವ ಶ್ರೀ ಪೂರ್ಣಾನಂದ ವೈಭವ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ಮಿತ ಭಾಷಿಯಾಗಿದ್ದು ಸದಾ ತೇಜಸ್ವಿಯಾಗಿ ಶಿಷ್ಯ ವರ್ಗದವರಲ್ಲಿ ಸತ್ಕಾರ್ಯಕ್ಕೆ ಆತ್ಮಶಕ್ತಿಯನ್ನು ಧೈರ್ಯವನ್ನು ಪ್ರೇರಣೆಯನ್ನು ತುಂಬುವುದರಲ್ಲಿ ಆದ್ವಿತೀಯ ಶಕ್ತಿಯನ್ನು ಹೊಂದಿದ್ದ ಶ್ರೀಗಳವರ ನಿರ್ಯಾಣದಿಂದ ಶಿಷ್ಯ ವರ್ಗವು ದುಃಖಿತವಾಗಿದೆ. 2010ರಲ್ಲಿ ಶ್ರೀ ದತ್ತಾನಂದ ಸರಸ್ವತಿಯವರನ್ನು ಶಿಷ್ಯರನ್ನಾಗಿ ಸ್ವೀಕರಿಸಿರುತ್ತಾರೆ. ನಾಳೆ (ಮಂಗಳವಾರ, ತಾ 30/11/2021) ಪೂರ್ವಾಹ್ನ 11 ಗಂಟೆಗೆ ಶ್ರೀಗಳ ವೃಂದಾವನಸ್ಥ ಪೂರ್ವ ಸಾಂಪ್ರಾದಾಯಿಕ ಅಂತ್ಯವಿಧಿಗಳನ್ನು ಪೂರೈಸುವುದಾಗಿ ಶ್ರೀ ಮಠದ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ. ಶ್ರೀಗಳವರ ಪುಣ್ಯ ತಿಥಿüಯನ್ನು ಮಣಿಪಾಲದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಾಗೂ ಶ್ರೀ ಮಠ ಸಂಸ್ಥಾನ ದಾಭೋಲಿಯಲ್ಲಿ ಆಚರಿಸಲಿರುವರು.
ಗಣ್ಯರ ಸಂತಾಪ:
ಸಾರಸ್ವತ್ ಬ್ಯಾಂಕಿನ ಅಧ್ಯಕ್ಷರಾದ ಗೌತಮ್ ಠಾಕೂರ್, ಗೋವಾ ಸರಕಾರದ ಸಚಿವರಾದ ದೀಪಕ್ ಪ್ರಭು ಪಾವಾಸ್ಕರ್, ಮಹಾರಾಷ್ಟ್ರ ಸರಕಾರದ ಸಚಿವರಾದ ಉದಯ್ ಸಾಮಂತ್, ಮಾಜಿ ಕೇಂದ್ರ ಸಚಿವರಾದ ಸುರೇಶ್ ಪ್ರಭು, ಆರ್‍ಎಸ್‍ಎಸ್‍ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯವಾಹ ಜಯಪ್ರಕಾಶ್, ದಾಭೋಲಿ ಮಠದ ಮಾಜಿ ಅಧ್ಯಕ್ಷರುಗಳಾದ ಮಣಿಪಾಲದ ಎಸ್.ಕೆ. ಸಾಮಂತ್, ನಾಸಿಕ್‍ನ ಎಂ.ಪಿ. ಪ್ರಭು, ಸಂಜಯ್ ಠಾಕೂರ್, ಕೆ.ಕೆ.ಜಿ.ಡಿ.ಬಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಸತೀಶ್ ಪಾಟೀಲ್, ಸಂಜಯ್ ಪ್ರಭು, ಬೆಳಗಾಮ್‍ನ ತರುಣ್ ಭಾರತ್ ಪತ್ರಿಕೆಯ ಸಂಪಾದಕರಾದ ಕಿರಣ್ ಠಾಕೂರ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಪ್ರಭಾಕರ್ ಭಟ್, ಸಚಿವರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಸುನಿಲ್ ಕುಮಾರ್, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ರಘುಪತಿ ಭಟ್, ವೇದವ್ಯಾಸ್ ಕಾಮತ್, ರಾಜೇಶ್ ನಾೈಕ್, ಹರೀಶ್ ಪೂಂಜಾ, ಸಂಜೀವ ಮಠಂದೂರು, ಉಡುಪಿ ಬಿಜೆಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಲ್ಯಾಡಿ ಸುರೇಶ್ ನಾಯಕ್, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಪೂರ್ಣಾನಂದ ಸಹಕಾರಿಯ ಅಧ್ಯಕ್ಷರಾದ ಗಣೇಶ್ ಮರೋಳಿ, ಮಾಜಿ ಅಧ್ಯಕ್ಷರಾದ ಎಂ.ಎಂ. ಪ್ರಭು, ಕಶೆಕೋಡಿ ಲಕ್ಮೀವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಕಲ್ಲೇಗ ಸಂಜೀವ ನಾಯಕ್, ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಕರ್ ಸಾಮಂತ್, ದಿನೇಶ್ ಪ್ರಭು ಸಂತಾಪ ಸೂಚಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق