ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಶ್ಮೀರಿಗಳಲ್ಲೂ ದೇಸೀ ಹಸುಗಳನ್ನು ಸಾಕುವ ತುಡಿತವಿದೆ: ಡಾ. ವೈ.ವಿ ಕೃಷ್ಣಮೂರ್ತಿ

ಕಾಶ್ಮೀರಿಗಳಲ್ಲೂ ದೇಸೀ ಹಸುಗಳನ್ನು ಸಾಕುವ ತುಡಿತವಿದೆ: ಡಾ. ವೈ.ವಿ ಕೃಷ್ಣಮೂರ್ತಿ



'ಅಮೃತ ಕನ್ನಡಿಗ’ ರಾಷ್ಟ್ರೀಯ ಸೇವಾ ಪುರಸ್ಕಾರ ಲಭಿಸಿರುವ ಕಾಮದುಘಾ ಟ್ರಸ್ಟ್ ಅಧ್ಯಕ್ಷರಾದ ಪ್ರಸಿದ್ಧ ಪಶುವೈದ್ಯ ಡಾ. ವೈ.ವಿ. ಕೃಷ್ಣಮೂರ್ತಿ ಅವರೊಂದಿಗೆ ಹವ್ಯಕ ಮಹಾ ಮಂಡಲ ವಿದ್ಯಾರ್ಥಿವಾಹಿನಿ ವತಿಯಿಂದ ನಡೆಸಿದ ಸಂದರ್ಶನ


ಸಂದರ್ಶಕಿ: ಶ್ರೇಯಾ ಮಿಂಚಿನಡ್ಕ

+1 ವಿದ್ಯಾರ್ಥಿನಿ, ಎಸ್. ಎಸ್.ಎಚ್.ಎಸ್.ಎಸ್.ಕಾಟುಕುಕ್ಕೆ


ಬದಿಯಡ್ಕದ ಪ್ರಸಿದ್ಧ ಪಶುವೈದ್ಯ ಡಾ. ವೈ.ವಿ ಕೃಷ್ಣಮೂರ್ತಿಯವರನ್ನು ಇತ್ತೀಚೆಗೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ “ರಂಗವಿಜಯ” ಟ್ರಸ್ಟ್ ಇವರು “ಅಮೃತ ಕನ್ನಡಿಗ” ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿದರು.


ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನ ಸಮಾರಂಭವು ಜರಗಿತು. ಇವರ ಗೋಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿತ್ತು. ಬದಿಯಡ್ಕದ ಬೋಳುಕಟ್ಟೆಯಲ್ಲಿ ತಮ್ಮ ಮನೆಯಲ್ಲಿ ಪಶುವೈದ್ಯ ವೃತ್ತಿಯನ್ನು ನಡೆಸುತ್ತಿರುವ ಇವರು ಸುಮಾರು 20 ವರ್ಷಗಳಿಂದ ಶ್ರೀ ರಾಮಚಂದ್ರಾಪುರ ಮಠದ  ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಕಾಮದುಘಾ ಟ್ರಸ್ಟ್ ನ ಅಧ್ಯಕ್ಷರಾಗಿ ಶ್ರೀ ಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ. ವೈ.ವಿ. ಕೃಷ್ಣಮೂರ್ತಿಯವರಿಗೆ ಈ ಪ್ರಶಸ್ತಿ ಒಲಿದು ಬಂದದ್ದು ಕಾಸರಗೋಡಿನವರಾಗಿ ನಮಗೆಲ್ಲರಿಗೂ ಹೆಮ್ಮೆಯ ವಿಷಯ.


ಅದಕ್ಕಾಗಿಯೇ ಬುಧವಾರದಂದು ಅವರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಯುವುದಕ್ಕಾಗಿ ಒಂದು ಸಂದರ್ಶನಕ್ಕಾಗಿ ಅವರ ಬಳಿ ತೆರಳಿದ್ದೆ. ನನ್ನ ಮನಸಿನಲ್ಲಿದ್ದ ಅನೇಕ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳು ಬಹಳ ಅದ್ಭುತವಾಗಿದ್ದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ..

  

* “ಸರ್, ನಿಮಗೆ ನಿಮ್ಮ ಚಿಕ್ಕ ವಯಸ್ಸಿಂದಲೂ ಪಶುವೈದ್ಯರಾಗಬೇಕು ಎಂಬ ಆಸೆ ಇತ್ತಾ? ಅಥವಾ ಬೆಳೆಯುತ್ತಾ ಈ ಆಸೆ ಹುಟ್ಟಿಕೊಂಡಿತಾ?


“ ಬಹಳ ಸಣ್ಣ ಪ್ರಾಯದಿಂದಲೂ ನಾನು ಪಶುವೈದ್ಯನೇ ಆಗಬೇಕು ಎಂದು ಕನಸು ಕಂಡಿದ್ದೆ. ಆದರೆ ನನ್ನ ಗೆಳೆಯರು ನನ್ನ ಆಸೆಯನ್ನು ಕೇಳಿ ನಗುತ್ತಿದ್ದರು. ಆದರೂ ಸಹ ನಾನು ನನ್ನ ಕಲಿಕೆಯ ಪ್ರತಿ ಹಂತದಲ್ಲೂ ಪಶುವೈದ್ಯನಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡೇ ಮುನ್ನಡೆಯುತ್ತಾ ಬಂದಿದ್ದೇನೆ”

   

* “ಕಳೆದ ಸುಮಾರು ವರ್ಷಗಳಿಂದ ನೀವು ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯಲ್ಲಿ ತೊಡಗಿದ್ದೀರಿ. ಇದೇ ಕಾರಣಕ್ಕೆ ನಿಮಗೆ ಈ ಪ್ರಶಸ್ತಿ ಬಂದಿದೆಯಾ?


“೨೦೦೦ನೇ ಇಸವಿಯಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರಾರಂಭಿಸಿದ ಒಂದು ಹೊಸ ಯೋಜನೆ ಇದು. ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಇದ್ದಂತಹ ಜರ್ಸಿ ಹಸುಗಳ ಬದಲಿಗೆ ದೇಸೀ ಹಸುಗಳನ್ನು ಸಾಕಲು ಪ್ರಾರಂಭಿಸಲಾಯಿತು. ಈ ಯೋಜನೆಗೆ ಆಗ 'ಕಾಮದುಘಾ' ಎಂಬುದಾಗಿ ನಾಮಕರಣ ಮಾಡಿದ್ದರು. ಆ ಸಂದರ್ಭದಿಂದಲೂ ನಾನು ಇದರ ಜೊತೆಯಲ್ಲೇ ನಡೆದು ಬಂದಿದ್ದೇನೆ. ಆದರೆ ಈಗ ಈ ಯೋಜನೆಯ ಕೀರ್ತಿ ಎಲ್ಲೆಡೆ ಹರಡಿ ಶ್ರೀಗಳವರ ಕೀರ್ತಿ ಎಲ್ಲೆಡೆ ಪಸರಿಸಿರುವುದು ಬಹಳ ಹೆಮ್ಮೆಯ ವಿಚಾರ. ಹಾಗಾಗಿ ಖಂಡಿತವಾಗಿ ಈ ಪ್ರಶಸ್ತಿ ಬರಲು ಕಾರಣ ಕಾಮದುಘಾ ಯೋಜನೆಯಲ್ಲಿ ಕೆಲಸ ಮಾಡಿದ್ದರಿಂದಾಗಿ.”

 

* “ಈ ಗೋಸೇವೆ ಮಾಡುವಾಗ ನಿಮಗೆ ಅನೇಕ ಕಷ್ಟಗಳು ಎದುರಾಗಿರಬಹುದಲ್ಲವೆ? ಅವುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರಾ?.


-“ಮಠದ ಯೋಜನೆಗಳಲ್ಲಿ ಕೆಲಸ ಮಾಡುವುದಕ್ಕೂ, ಸರಕಾರದ ಯೋಜನೆಯಲ್ಲಿ ಕೆಲಸ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಸರಕಾರದ ಯೋಜನೆಗಿಂತ ಹೆಚ್ಚು ಬದ್ಧತೆ ಇದ್ದರೂ ವೇತನ, ಸಂಬಳದಂತಹ ವಿಚಾರಗಳಲ್ಲಿ ಸ್ವಲ್ಪ ಸ್ವಲ್ಪ ಕಸಿವಿಸಿಗಳು ಉಂಟಾಗುವುದು ಸಹಜ. ಆರಂಭದಲ್ಲಿ ೨೦೦೫ ರಲ್ಲಿ ನಾವು ಕರ್ನಾಟಕ ರಾಜ್ಯದಲ್ಲಿ ಗೋಯಾತ್ರೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಗುಲ್ಬರ್ಗ, ರಾಯಚೂರು ಹೀಗೆ ಹಲವಾರು ಜಿಲ್ಲೆಗಳಿಗೆ ಹೋಗಿ ಇಳಿದಾಗ ಎಲ್ಲಿ ಗೋ ಭಕ್ತರಿದ್ದಾರೆ ಎಂದು ಹುಡುಕಾಡುತ್ತಿದ್ದೆವು. ಸಂಪರ್ಕ ಮಾಡುತ್ತಿದ್ದವರು ಸಿಕ್ಕದೇ ಇದ್ದಂತಹ ಸಂದರ್ಭದಲ್ಲಿ 2-3 ದಿನಗಳು ಬರಿದೆ ಕೂತದ್ದು ಇದೆ. ಮನೆಯಿಂದ ಹೊರಟಾಗ ಇದೇ ಸಮಯಕ್ಕೆ ಬರುತ್ತೇನೆ ಎಂಬುದಾಗಿ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಆಗಿನಂತೆ ಶ್ರೀಗಳವರ ಹೆಸರು ಕೇಳಿದರೆ ಗೊತ್ತಿಲ್ಲ ಎನ್ನುವವರ ಸಂಖ್ಯೆಯೇ ಇಲ್ಲ.”

  

* “ದೇಸೀ ಗೋವುಗಳ ಸಂರಕ್ಷಣೆಗಾಗಿ ನಮ್ಮ ದೇಶದ ಹಲವೆಡೆ ನೀವು ಸಂಚರಿಸಿದವರಿದ್ದೀರ. ಅದರ ಕುರಿತು ಹೇಳುವುದಾದರೆ?


“ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಪ್ರವಾಸ ಎನ್ನುವಂತಹದ್ದು ಹಲವಾರು ವಿಷಯಗಳನ್ನು ತಿಳಿಸಿ ಕೊಡುತ್ತದೆ. ಮಹಾರಾಷ್ಟ್ರ, ರಾಜಸ್ಥಾನ ಮುಂತಾದ ರಾಜ್ಯದ ಹಸು ಸಾಕಣೆಗೆ ಹಾಗೂ ನಮ್ಮ ಊರಿನ ಹಸು ಸಾಕಣೆಗೆ ಹಲವಾರು ವ್ಯತ್ಯಾಸಗಳಿವೆ. ಭಾರತಾದ್ಯಂತ ಒಂದು ಹೊಸ ಮಾರ್ಪಾಟು ಉಂಟಾಗುತ್ತಾ ಇದೆ ಈ ದೇಸೀ ಗೋವಿನ ವಿಚಾರದಲ್ಲಿ.


ಕಾಶ್ಮೀರ ಅಂತ ಹೇಳಿದ ಕೂಡಲೇ ಅಲ್ಲಿ ಎಲ್ಲರೂ ದನವನ್ನು ಕಡಿದು ತಿನ್ನುವವರು ಎಂಬ ಭಾವನೆ ಬರುವುದು ಸಹಜ. ಆದರೆ ಕೊರೋನ ಕಾಲಕ್ಕೂ ಮೂರು ನಾಲ್ಕು ತಿಂಗಳುಗಳ ಮೊದಲು ನಾವು ಪುಲ್ವಾಮಾದಿಂದ 1 ಕಿಲೋ ಮೀಟರ್ ದೂರದಲ್ಲಿರುವ ಪ್ರದೇಶವೊಂದರಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿದ್ದೆವು. ಅದರಲ್ಲಿ ಕಾಶ್ಮೀರದ ಕೃಷಿಕರೆಲ್ಲರೂ ಭಾಗಿಯಾಗಿದ್ದರು. ಅವರಲ್ಲೂ ದೇಸೀ ಗೋವುಗಳನ್ನು ಸಾಕಬೇಕು ಎಂಬ ಮಹದಾಸೆ ಇತ್ತು. ಆದರೆ ಅದನ್ನು ಈಡೇರಿಸುವಷ್ಟರಲ್ಲಿ ಕೋರೋನದಿಂದಾಗಿ ಲಾಕ್ ಡೌನ್ ಉಂಟಾಯಿತು. ಅವರಿಗೆ ಹಸುಗಳ ಮೇಲಿರುವ ಉತ್ಸಾಹ ನಮ್ಮ ಊರಿನವರಿಗೆ ಇಲ್ಲ. ಅವರನ್ನು ಕಂಡು ನಾವು ಕಲಿಯಬೇಕಾದ ವಿಷಯವಾಗಿದೆ ಇದು. ಇನ್ನೇನು, ಒಂದು ವರ್ಷದ ಒಳಗೆ ಅವರಿಗೂ ಹಸುಗಳನ್ನು ತಲುಪಿಸುವ ಆಸೆ ಇದೆ.”

    

 * ಹಾಲು ಪ್ರಧನವಾಗಿರುವುದರಿಂದ ಜರ್ಸಿ, ಹೋಲ್ಸ್ಟಿನ್ ಮೊದಲಾದ ಹಸುಗಳನ್ನು ಸಾಕುವವರನ್ನು ನಾವು ಕಂಡಿದ್ದೇವೆ. ಅದಕ್ಕೆ ಪರ್ಯಾಯವಾಗಿ ನಮಗೆ ದೇಸೀ ಹಸುಗಳನ್ನು ಸಾಕಲು ಸಾಧ್ಯವೇ?


“ಖಂಡಿತವಾಗಿಯೂ ಸಾಧ್ಯವಿದೆ. ನಮ್ಮ ಪ್ರಕಾರ ಹಾಲು ಅಂದರೆ ಅಮೃತ ಸಮಾನ. ಆದರೆ ವಿದೇಶೀಯರು ಹಾಲನ್ನು “ವೈಟ್ನರ್”ಎನ್ನುತ್ತಾರೆ. ಯಾಕಂದ್ರೆ ಅವರಿಗೆ ಕಾಫಿ, ಟೀ ಯಲ್ಲಿ ಸೇರಿಸುವುದಕ್ಕೆ ಬೇಕಾಗಿ ಬಿಳಿಬಣ್ಣದ ನೀರಿನಂತಹ ವಸ್ತು ಬೇಕಾಗಿರುವುದು. ಕೇವಲ ಹೆಚ್ಚು ಹಾಲು ಸಿಗಬೇಕು ಎನ್ನುವ ಕಾರಣಕ್ಕಾಗಿ ಹಸುಗಳಿಗೆ ಬೇರೆ ಬೇರೆ ರೀತಿಯ ಪದಾರ್ಥಗಳನ್ನು ಸೇವನೆಗೆ ಕೊಡುವುದರಿಂದಾಗಿ ಅವುಗಳಿಂದ ದೊರೆಯುವ ಹಾಲಿನಲ್ಲಿ ವ್ಯತ್ಯಾಸ ಉಂಟಾಗಬಹುದು. ಹಾಲು ಮಾತ್ರವಲ್ಲ ದೇಸೀ ಗೋವುಗಳ ಮೂತ್ರ, ಸೆಗಣಿ ಎಂಬಿವುಗಳು ಕೂಡ ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಕಾಶ್ಮೀರದಂತಹ ರಾಜ್ಯಗಳಲ್ಲಿ ರೈತರು ದೇಸೀ ಗೋವುಗಳನ್ನು ಸಾಕಲು ಬಯಸುವುದು ಅದಕ್ಕಾಗಿಯೇ... ಅಲ್ಲಿರುವ ಏಷ್ಟೋ ರೈತರು ಸೇಬಿನ ಕೃಷಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡದೇ ಇರುವವರು ಇದ್ದಾರೆ. ಅವರಲ್ಲಿ ಗೋವಿನ ಮೂತ್ರ, ಸಗಣಿಯ ಬಳಕೆ ಮಾಡಿ ಕೃಷಿ ಮಾಡಬೇಕು ಎಂಬ ಹಂಬಲ ಇದೆ. ಹಾಗಾಗಿ ಹಾಲಿಗಾಗಿ ಮಾತ್ರವಲ್ಲ, ಇತರ ಉಪಯೋಗಗಳಿಗೂ ದೇಸೀ ಹಸುಗಳು ಬಹಳ ಸಹಾಯಕಾರಿಯಾಗಿವೆ.

 

* ಹೊಸತಾಗಿ ದೇಸೀ ಗೋವುಗಳನ್ನು ಸಾಕುವವರಿಗೆ ನಿಮ್ಮ ಕಡೆಯಿಂದ ಸಲಹೆಗಳೇನು?

“ಕೇರಳದಲ್ಲಿ ಮಲೆನಾಡು ಗಿಡ್ಡ ಎಂಬೀ ದೇಸೀ ತಳಿಗಳಿಗೆ ತುಂಬಾ ಬೇಡಿಕೆ ಇವೆ. ಅವರು ಕೃಷಿ ಉದ್ದೇಶಕ್ಕೆ ಮಾತ್ರವೇ ಇವುಗಳನ್ನು ಸಾಕಲು ಬಯಸುತ್ತಾರೆ. ಆದರೆ ಕರಾವಳಿ ಭಾಗದಲ್ಲಿ ಮಾತ್ರ ನಮಗೆ ನಮ್ಮ ಹಸುಗಳ ತಳಿಯ ಉಪಯೋಗ ಗೊತ್ತಾಗದೆ ಉಳಿದು ಬಿಟ್ಟಿದೆ. ಉತ್ತರ ಭಾರತದಲ್ಲಿ ಕೇವಲ (ಹೋರಿ) ಗಂಡು ಹಸುಗಳಿಗೆ ಏಳು, ಎಂಟು ಲಕ್ಷಗಳನ್ನೂ ಕೊಟ್ಟು ಖರೀದಿ ಮಾಡಲು ತಯಾರಿದ್ದಾರೆ.

    

* ಹಾಗಾದರೆ ಮುಂದಿನ ಪೀಳಿಗೆಗೆ ದೇಸೀ ಗೋವಿನ ಸಂರಕ್ಷಣೆಯಲ್ಲಿ ಎದುರಾಗಬಹುದಾದಂತಹ ಸಮಸ್ಯೆಗಳು ಯಾವುವು? ಅದಕ್ಕಿರುವ ಪರಿಹಾರಗಳು ಏನೇನು?

“ವಿದ್ಯಾರ್ಥಿ ಸಮುದಾಯದವರಿಗೆ ತಿಳಿಸಬೇಕಿದೆ. ಏನೇ ಆಗಲಿ, ನಮಗೆ ಹೊಟ್ಟೆಗೆ ಅನ್ನ, ರಾಗಿ, ಜೋಳ, ಗೋಧಿ ಇಂತಹದ್ದೇ ಬೇಕಾಗಿದೆ. ಗೋ ಆಧಾರಿತ ಕೃಷಿಯ ಅಗತ್ಯ ತುಂಬಾ ಇದೆ. ಹಾಗಾಗಿ ವಿಧ್ಯಾರ್ಥಿಗಳು ಇದರ ಬಗ್ಗೆ ಈಗಿನಿಂದಲೇ ಆಸಕ್ತಿ ಇಟ್ಟುಕೊಂಡು ಗೊ ಆಧಾರಿತ ಕೃಷಿಯನ್ನು ಬೆಳೆಸಬೇಕು” ಎನ್ನುತ್ತಾರೆ ಡಾ. ವೈ.ವಿ ಕೃಷ್ಣಮೂರ್ತಿ.


ಗೋ ಸೇವೆ ಎಂದರೆ ಕೇವಲ ದನದ ಸಾಕಣೆ ಮಾತ್ರವಲ್ಲ. ಅದಕ್ಕೋಸ್ಕರವಿರುವ ಆಹಾರವನ್ನು ಉತ್ಪಾದಿಸುವುದು, ಸಂಗ್ರಹಿಸುವುದು ಕೂಡ ಒಂದು ರೀತಿಯ ಗೋಸೇವೆಯೇ.

ಡಾ. ಕೃಷ್ಣಮೂರ್ತಿಯವರ ಮಾತುಗಳಿಂದ ಅನೇಕ ಅನೇಕ ಉತ್ತಮ ಮಾಹಿತಿಗಳು ನಮ್ಮದಾದುವು. ಇದನ್ನೆಲ್ಲ ನಮ್ಮ ಜೀವನದಲ್ಲೂ ಅಳವಡಿಸಿಕೊಂಡು ಗೋಮಾತೆಯ ಕೃಪೆಗೆ ಪಾತ್ರರಾಗೋಣ.



0 Comments

Post a Comment

Post a Comment (0)

Previous Post Next Post