ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾಗವತರಾದ ಗಾನ ಗಂಧರ್ವ ಪದ್ಯಾಣ ಗಣಪತಿ ಭಟ್ಟರು (66) ಇಂದು (ಅಕ್ಟೋಬರ 12, 2021) ಬೆಳಗ್ಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಬಹುಬೇಗನೆ ಸಿದ್ಧಿಪ್ರಸಿದ್ಧಿ ಪಡೆದ ಪದ್ಯಾಣ ಭಾಗವತರು ‘ಯಕ್ಷರತ್ನ’ ಬಿರುದಿಗೆ ಭಾಜನರಾಗಿದ್ದರು. ಯಕ್ಷಗಾನ ಅವರಿಗೆ ಮನೆತನದ ಬಳುವಳಿ. ಅಜ್ಜ ಪುಟ್ಟು ನಾರಾಯಣರು ಪ್ರಸಿದ್ಧ ಭಾಗವತರಾಗಿದ್ದರು. ತಂದೆ ಹಿಮ್ಮೇಳವಾದಕರಾಗಿದ್ದರು. ಪದ್ಯಾಣ ಮನೆತನ ಸಾಕಷ್ಟು ಕಲಾವಿದರನ್ನು ಈ ಕ್ಷೇತ್ರಕ್ಕೆ ನೀಡಿದೆ. ಪದ್ಯಾಣ ತಿರುಮಲೇಶ್ವರ ಭಟ್- ಸಾವಿತ್ರಿ ದಂಪತಿಯ ಸುಪುತ್ರರಾಗಿ ಜನಿಸಿದ ಗಣಪತಿ ಭಟ್ಟರಿಗೆ ಮನೆಯೇ ಮೊದಲ ಯಕ್ಷಗಾನ ಪಾಠ ಶಾಲೆಯಾಯಿತು. ಮಾಂಬಾಡಿ ನಾರಾಯಣ ಭಾಗವತರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಹದಿನೈದರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದರು.
ಚೌಡೇಶ್ವರಿ, ಕುಂಡಾವು, ಸುರತ್ಕಲ್, ಮಂಗಳಾದೇವಿ, ಎಡನೀರು, ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನ ಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸರಾಗ ಸಂಯೋಜನೆ ಮಾಡಿದ್ದಾರೆ. ಅವರು ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರು. 1500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೋಗಳಲ್ಲಿ ಅವರ ಸಿರಿಕಂಠದ ಧ್ವನಿ ದಾಖಲಾಗಿದೆ. ಹೊರನಾಡುಗಳಲ್ಲಿ ಹೊರರಾಷ್ಟ್ರಗಳಲ್ಲಿ ಯಕ್ಷಗಾನ ಆಟಕೂಟಗಳಲ್ಲಿ ಭಾಗವಹಿಸಿ ಮಧುರ ಹಾಡುಗಳಿಂದ ಕಾರ್ಯಕ್ರಮ ಕಳೆಗಟ್ಟಿಸಿದ್ದಾರೆ.
ಹಿಮ್ಮೇಳದ ಎಲ್ಲ ಅಂಗಗಳಲ್ಲಿ ಪರಿಣಿತರಾದ ಪದ್ಯಾಣರು ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ರವಿಚಂದ್ರ ಕನ್ನಡಿಕಟ್ಟೆಯಂತಹ ಯುವ ಭಾಗವತರು ಅವರ ಗರಡಿಯಲ್ಲಿ ಸಿದ್ಧಗೊಂಡಿದ್ದಾರೆ.
ಕಲಾರಂಗ ಸಂತಾಪ:
ನಿಡುಗಾಲದ ಯಕ್ಷಗಾನ ಸೇವೆಗಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೂ ಪದ್ಯಾಣ ಗಣಪತಿ ಭಟ್ಟರು ಭಾಜನರಾಗಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಯಕ್ಷಭಾರತಿ ಕಂಬನಿ:
'ಪದ್ಯಾಣರು ಕಳೆದ ಮೂರು ದಶಕಗಳಿಂದ ಕರ್ನಾಟಕ ಯಕ್ಷಭಾರತಿ ಪುತ್ತೂರು ಇದರ ಆಕಾಶವಾಣಿ ತಂಡದ ಭಾಗವತರಾಗಿ ಬಾನುಲಿ ಕೇಳುಗರನ್ನು ರಂಜಿಸಿದ್ದರು. ಶೇಣಿಯವರ ಕಾಲದಿಂದಲೂ ಹಲವಾರು ತಾಳಮದ್ದಳೆ, ಬಯಲಾಟ, ಧ್ವನಿ ಸುರಳಿಗಳಲ್ಲಿ ಜತೆಯಾಗಿದ್ದ ಅವರ ನಿಧನ ಅನಿರೀಕ್ಷಿತ ಆಘಾತವನ್ನುಂಟು ಮಾಡಿದೆ. ಪದ್ಯಾಣ ಭಾಗವತರ ಕಣ್ಮರೆ ಯಕ್ಷಗಾನ ರಂಗದಲ್ಲಿ ಬಹು ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ' ಎಂದು ಕರ್ನಾಟಕ ಯಕ್ಷಭಾರತಿಯ ಸಂಚಾಲಕ ಹಾಗೂ ಯಕ್ಷಾಂಗಣ ಮಂಗಳೂರು ಕಾರ್ಯಸಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕಂಬನಿ ಮಿಡಿದಿದ್ದಾರೆ.
ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಭಾರತಿ ಕಲಾವಿದರಾದ ಎಂ.ಕೆ.ರಮೇಶ ಆಚಾರ್ಯ, ಗಣರಾಜ ಕುಂಬಳೆ, ಉಮೇಶ ಗೇರುಕಟ್ಟೆ, ರಮೇಶ್ ಸಾಲ್ವಣ್ಕರ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق