ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನೈತಿಕ ಶಿಕ್ಷಣ ಉಪನ್ಯಾಸ
ಪುತ್ತೂರು: ವಿನಾಕಾರಣ ಯಾರನ್ನು ದ್ವೇಷ ಮಾಡಬಾರದು, ಎಲ್ಲರೊಂದಿಗೂ ಸ್ನೇಹಭಾವದಿಂದ ಇರಬೇಕು. ಅಸಾಹಯಕರನ್ನು ಕಂಡಾಗ ದಯೆ, ಕರುಣೆ ಪ್ರೀತಿ ವಾತ್ಸಲ್ಯ ಇರಬೇಕು. ಎಲ್ಲವು ತಮ್ಮಿಂದಲೇ ಹಾಗೂ ತಮ್ಮದೇ ಅನ್ನುವ ಮಮಕಾರ ಇರಬಾರದು. ಅಹಂಕಾರವನ್ನು ತೊರೆದು ಬೇರೆಯವರ ಸುಖ ದುಃಖಗಳಲ್ಲಿ ಭಾಗಿಯಾಬೇಕು ಹೀಗೆ ಅನೇಕ ಸಂಗತಿಗಳನ್ನು ಶ್ರೀಕೃಷ್ಣನು ಭಗವದ್ಗೀತೆಯ ಮುಖಾಂತರ ಜಗತ್ತಿಗೆ ಸಾರಿದ್ದಾನೆ ಎಂದು ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನೈತಿಕ ಶಿಕ್ಷಣ ವಿಷಯವಾಗಿ ಮಂಗಳವಾರ ಮಾತನಾಡುತ್ತಾ ಭಗವದ್ಗೀತೆಯ ಸಂದೇಶಗಳ ಬಗೆಗೆ ತಿಳಿಸಿಕೊಟ್ಟರು.
ನಾವೆಲ್ಲರೂ ಕ್ಷಮಾಗುಣವನ್ನು ಅಳವಡಿಸಿಕೊಳ್ಳಬೇಕು. ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸುವ ವಿಶಾಲ ಹೃದಯಿಗಳಾಗಬೇಕು. ಭಗವಂತ ಹೇಳಿದ ಜೀವನ ಸಂದೇಶವನ್ನು ಅವನದ್ದೇ ಮಾತುಗಳಿಂದ ಕಲಿಯುವುದೇ ಭಗವದ್ಗೀತೆ ಪಠಣ. ಕೃಷ್ಣನಿಗೆ ಸ್ಥಾನಕೊಡಬೇಕಾದದ್ದು ನಮ್ಮ ಹೃದಯದಲ್ಲಿಯೇ ಹೊರತು ಗರ್ಭಗುಡಿಯಲ್ಲಲ್ಲ ಎಂದರಲ್ಲದೆ ಎಲ್ಲಾ ಸಂಪ್ರದಾಯವನ್ನು ಒಪ್ಪುವ ಸಂಸ್ಕೃತಿ ಮತ್ತು ವಿಶಾಲ ಮನಸ್ಥಿತಿ ನಮ್ಮ ಭಾರತೀಯರದ್ದು. ನಮ್ಮದೇ ಶ್ರೇಷ್ಠ ಎನ್ನುವ ಮನೋಭಾವನೆಯಿಂದ ಹೊರಬಂದು ಎಲ್ಲವನ್ನು ಹಾಗೂ ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವ ಸ್ವಚ್ಛ ಹೃದಯಿಗಳಾಗಬೇಕು ಎಂದು ನುಡಿದರು .
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ರಾಮಚಂದ್ರ ಭಟ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಶಂಕರನಾರಾಯಣ ಭಟ್ ಪ್ರಸ್ತಾವನೆಗೈದರು. ಕಾಲೇಜಿನ ವಿದ್ಯಾರ್ಥಿನಿ ಪ್ರೀತಲ್ ದಯಾನಂದ್ ನಿರೂಪಿಸಿ ಸ್ವಾಗತಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment