ನಾವು ಜೀವನದಲ್ಲಿ ಎಷ್ಟು ವರ್ಷ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದು ಮುಖ್ಯ. ಜೀವನದಲ್ಲಿ ಏನು ಸಾಧಿಸಿದೆವು ಮುಂದಿನ ಜನಾಂಗಕ್ಕೆ ಏನನ್ನು ಬಿಟ್ಟು ಹೋದೆವೆನ್ನುವುದು ಇಲ್ಲಿ ನಾವು ಗಮನಿಸಬೇಕಾಗಿದೆ. ಮಾಧ್ಯಮಕ್ಕಾಗಿ ದುಡಿದು ಮಾಧ್ಯಮವನ್ನೆ ಉಸಿರಾಗಿಸಿಕೊಂಡು ಮಾಧ್ಯಮವನ್ನು ಕೃಷಿಗಾಗಿ ಬಳಸಿಕೊಂಡು ಯುವ ಪೀಳಿಗೆಗೆ ಮಾದರಿಯಾಗಿ ಬದುಕಿದ ಕೃಷಿಕ- ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಹುಟ್ಟಿ ಕಾರ್ಕಳವನ್ನು ತನ್ನ ಕರ್ಮಭೂಮಿಯನ್ನಾಗಿಸಿ ಕೊಂಡ ರಾಮಯ್ಯ ಮೀನಾಕ್ಷಿ ದಂಪತಿಗಳ ಸುಪುತ್ರ ಶ್ರೀಯುತ ರಾಧಾಕೃಷ್ಣ ತೊಡಿಕಾನ.
ಕೃಷಿ ಕುಟುಂಬದಲ್ಲಿ ಹುಟ್ಟಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಬದುಕಿನ ಜೀವನ ಮಾಧ್ಯಮಕ್ಕೆ ಪತ್ರಿಕಾ ಮಾಧ್ಯಮವನ್ನೇ ಆರಿಸಿಕೊಂಡು ಎಲ್ಲರಿಗಿಂತ ಭಿನ್ನವಾಗಿ ವಿಭಿನ್ನ ಚಿಂತನೆಗಳಿಂದ 32 ವರ್ಷಗಳ ಕಾಲ ಅದರಲ್ಲೇ ಕೃಷಿ ಮಾಡಿ ಜೀವನ ನಡೆಸುತ್ತಿರುವ ಕೃಷಿಕ- ಇವರು. ಕಳೆದ ಮೂವತ್ತು ವರ್ಷಗಳಿಂದ ಗ್ರಾಮೀಣ ಪತ್ರಿಕೋದ್ಯಮಕ್ಕಾಗಿ ಅವಿರತವಾಗಿ ದುಡಿದು ಕೃಷಿಗೆ ಕನ್ನಡಿಯಂತಿರುವ "ಕೃಷಿ ಬಿಂಬ" ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕನಾಗಿ ಕಳೆದ ೩೦ ವರ್ಷಗಳಿಂದ ಕೃಷಿ ಪತ್ರಿಕೋದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಒಂದಷ್ಟು ಸೇವೆಯನ್ನು ಮಾಡುತ್ತಿರುವ ಜಾಣಜ್ಞಾನಿ ಇವರು. ಬೇರೆ ಬೇರೆ ಪ್ರಸಿದ್ಧ ಪತ್ರಿಕೆಗಳ ವರದಿಗಾರನಾಗುವವರು ಬಹಳಷ್ಟು ಮಂದಿ ಇರಬಹುದು. ಆದರೆ ಕೃಷಿಗಾಗಿ ಪತ್ರಿಕೆಯೊಂದನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ಸನ್ನು ಕಾಣುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಈ 60ರ ಯುವಕ ಮಾಡಿ ತೋರಿಸಿದ್ದಾರೆ. ಸಾಧಿಸಿದರೆ ಸಬಳವೂ ನುಂಗಬಹುದು ಎ೦ಬ ಗಾದೆಯ ಮಾತನ್ನು ಇವರಿಗೆ ಹೋಲಿಸಿದಾಗ ನಿಜ ಅನ್ನಿಸುತ್ತದೆ. ಈ ಮಾಧ್ಯಮದ ಮೂಲಕ ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಸ್ಪಂದನೆಗೆ ಅವಕಾಶ ಮಾಡಿಕೊಟ್ಟರು. ಒಂದಷ್ಟು ಜಾಗೃತಿ ಮಾಡಿಸುವ ಪ್ರಯತ್ನ ಮಾಡಿದರು. ಮತ್ತೊಂದಷ್ಟು ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತ ತನ್ನೆಡೆಗೆ ಸೆಳೆದರು. ಪ್ರಗತಿಪರ ಕೃಷಿಕ ಸಾಧಕರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತ ಬಂದರು. ಕೃಷಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಒಂದಷ್ಟು ಸಮಾಜಕ್ಕೆ ಮನದಟ್ಟು ಮಾಡುತ್ತ ಬಂದರು.
ಇನ್ನು "ಕ.ರಾ. ಕೃಷ್ಣ ತೊಡಿಕಾನ", "ನವಜಾತ ಕಾರ್ಕಳ" ಎಂಬ ಕಾವ್ಯನಾಮದ ಮೂಲಕ ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡರು. "ಅಸ್ತಿರರು" ಎಂಬ ಕವನ ಸಂಕಲನ, ಅಚಲ" ಎಂಬ ಕಥಾ ಸಂಕಲನ ಇನ್ನು ಸಧ್ಯದಲ್ಲೇ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು ಒಂದಷ್ಟು ಇವರ ಸಾಹಿತ್ಯದ ಮೇಲಿನ ಆಸಕ್ತಿಗೆ ಹಿಡಿದ ಕೈಗನ್ನಡಿಯಾದವು. ಇವರ "ಆತ್ಮ ಕಸಿದವರು" ಎಂಬ ಕಿರುಕಥೆ ಕಿರುಚಿತ್ರವಾಗಿದ್ದು ಹೆಮ್ಮೆಯ ವಿಷಯ. ಕಥೆ ಕವನಗಳನ್ನು ಬರೆಯುವುದನ್ನು ನಿತ್ಯಪರಿಪಾಠ ಮಾಡಿಕೊಂಡ ಇವರು ಹಲವಾರು ಸಾಹಿತ್ಯ ಸಮ್ಮೇಳನದಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸುವುದರ ಜೊತೆಗೆ ಹಲವು ಕಡೆಗಳಲ್ಲಿ ಇವರು ಸನ್ಮಾನಕ್ಕೆ ಭಾಜನರಾಗಿದ್ದರು. ಮತ್ತು ಕೆಲವೆಡೆ ಕವಿಗೋಷ್ಟಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
JCI ಕಾರ್ಕಳ, ಕಾಂತಾವರ ದಸರಾ ನಾಡಹಬ್ಬ, ಸುಳ್ಯ ಪತ್ರಕರ್ತರ ಸಂಘ ಕಾರ್ಕಳ ತಾಲೂಕು ಕಲಾರಂಗ, ಬೆಳ್ಮಣ್ ತಾಲ್ಲೂಕು ಪತ್ರಕರ್ತರ ಬಳಗ, ಲಯನ್ಸ್ ಕ್ಲಬ್ ಕಾರ್ಕಳ ಹೀಗೆ ಹತ್ತು ಹಲವು ಸಂಘ ಸಂಸ್ಥೆ, ಸಮ್ಮೇಳನದಲ್ಲಿ ಇವರು ಪತ್ರಿಕೆ ಹಾಗೂ ಸಾಹಿತ್ಯ ಕೃಷಿಗಾಗಿ ಸನ್ಮಾನಿತರಾದರು. ಕಾರ್ಕಳ ಗ್ರಾಮೋತ್ಸವ ಪ್ರಶಸ್ತಿ ಹೂಗಾರ ಮಾಧ್ಯಮ ಪ್ರಶಸ್ತಿ ಇತ್ಯಾದಿಗಳಿಂದ ಪುರಸ್ಕೃತರಾದ ತೊಡಿಕಾನ ರವರ ಕಥೆ, ಸಂದರ್ಶನಗಳು ಆಕಾಶವಾಣಿಯಲ್ಲೂ ಪ್ರಸಾರಗೊಂಡಿದೆ. ಇಂತಹ ಅದ್ಭುತ ಪ್ರತಿಭೆಗೆ ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ ಉಡುಪಿ- ಮಣಿಪಾಲ ಘಟಕವು ಇವರಿಗೆ ಬಹು ಗೌರವದೊಂದಿಗೆ ವಿಶ್ವ ಸಂವಹನ ದಿನಾಚರಣೆಯ ಅಂಗವಾಗಿ "ಮಾಧ್ಯಮ ಜಾಣ ಪುರಸ್ಕಾರ" ವನ್ನು ನೀಡಿ ಗೌರವಿಸುತ್ತಿದೆ.
-ರಾಜೇಶ್ ಪಣಿಯಾಡಿ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment