ತಲಪಾಡಿ: ಎರಡು ದಶಕಗಳಿಂದ ಪ್ರತಿವರ್ಷವೂ ನವದಂಪತಿಗಳ ಸಮಾವೇಶವನ್ನು ನಡೆಸಿಕೊಂಡು ಬರುತ್ತಿರುವ ಶಿಶುಮಂದಿರದ ಕಾರ್ಯ ಶ್ಲಾಘನೀಯ. ಹಿಂದೂ ಸಮಾಜದಲ್ಲಿ ವಿವಾಹಕ್ಕೆ ಬಹಳ ಮಹತ್ವವಿದೆ. ಇದೊಂದು ಪವಿತ್ರ ಸಂಸ್ಕಾರವಾಗಿರುವುದರಿಂದ, ಕೇವಲ ರಿಜಿಸ್ಟ್ರೇಷನ್ ಎಂಬ ಒಪ್ಪಂದಕ್ಕೆ ಸೀಮಿತವಾಗಿರುವುದಲ್ಲ. ಇದು ‘ನಾನು’ ಹೋಗಿ ‘ನಾವು’ ಎಂದಾಗುವ ಪರಿವರ್ತನೆಯ ಕ್ಷಣ. ತನ್ನ ಸ್ವಂತ ಹಿತಾಸಕ್ತಿ ಬಿಟ್ಟು, ಇನ್ನೊಬ್ಬರ ಬಗ್ಗೆ ಚಿಂತನೆ ಮಾಡುವ ಕೌಟುಂಬಿಕ ಜೀವನಕ್ಕೆ ತೆರೆದುಕೊಳ್ಳುವ ಕಾಲ. ರಾಮ, ಕೃಷ್ಣ ಹೀಗೆ ದೇವರುಗಳು ಓಡಾಡಿದ ಈ ಪುಣ್ಯ ಭೂಮಿಯಲ್ಲಿ ಹಿಂದುಗಳಾಗಿ ಹುಟ್ಟಿದ ನಾವೇ ಧನ್ಯರು. ಸಂಸ್ಕಾರ, ಸಂಪ್ರದಾಯಗಳನ್ನು ಮಕ್ಕಳಿಗೆ ಹೇಳಿಕೊಡುವ ಜವಾಬ್ದಾರಿಯನ್ನು ತಾಯಿಯೇ ತೆಗೆದುಕೊಳ್ಳುವುದರಿಂದ ಹಿಂದೂ ಸಮಾಜ ಮಾತೃ ಕೇಂದ್ರಿತವಾಗಿದೆ ಮತ್ತು ಅದರಿಂದ ಕುಟುಂಬದ ಧರ್ಮ ಉಳಿದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಕಾರ್ಯಕರ್ತರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಅವರು ಅಕ್ಟೋಬರ್ 3ರಂದು ತಲಪಾಡಿಯ ಕಿನ್ಯದ ಕೇಶವ ಶಿಶುಮಂದಿರದಲ್ಲಿ ಜರುಗಿದ ನವದಂಪತಿಗಳ ಸಮಾವೇಶವನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣವನ್ನು ನೀಡುತ್ತಿದ್ದರು.
ನಮ್ಮ ಜೀವನ ಪರಿಪೂರ್ಣ ಮತ್ತು ವೈಶಿಷ್ಟ್ಯಪೂರ್ಣವಾಗುವುದು ಹೆಣ್ಣಿನಿಂದ. ತಂದೆ ಹಾಗೂ ಗಂಡನ ಮನೆಗಳನ್ನು ಬೆಳಗುವ ಹೆಣ್ಣು, ಎರಡೂ ಮನೆಗಳಿಗೂ ಶೋಭೆ ತರುತ್ತಾಳೆ. ಗಂಡ-ಹೆಂಡತಿ ಪರಸ್ಪರರನ್ನು ಅರ್ಥೈಸಿಕೊಂಡು, ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ, ಜೀವನ ಸುಖ-ಸಂತೋಷಗಳಿಂದ ಕೂಡಿರುತ್ತದೆ. ಹಿಂದೂ ಸಮಾಜದ ಮೇಲಿರುವ ಇಂದಿನ ಅನೇಕ ಸವಾಲುಗಳ ನಡುವೆ ಹಿಂದೂ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಕನಿಷ್ಠ 5 ಸರಳ ಜೀವನ ಪದ್ಧತಿಗಳನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ನವದಂಪತಿಗಳಿಗೆ ಮಾರ್ಗದರ್ಶನ ನೀಡಿದರು.
ಕೇಶವ ಶಿಶುಮಂದಿರದ ವ್ಯವಸ್ಥಾಪಕರಾದ ಶ್ರೀ ನಾರಾಯಣ ಕಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 33 ವರ್ಷಗಳಿಂದ ಕೇಶವ ಶಿಶುಮಂದಿರ ತನ್ನ ಕೈಲಾದ ಸೇವೆಯನ್ನು ಹಿಂದೂ ಸಮಾಜಕ್ಕೆ ನೀಡುತ್ತಾ ಬಂದಿದೆ. ಸೇವೆ, ಸಂಸ್ಕಾರ, ಸಾಮರಸ್ಯ ಮತ್ತು ಸಂಘಟನೆಗಳ ಮೂಲಕ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡುತ್ತಿದೆ. ಸಂಘದ ಮಾರ್ಗದರ್ಶನ, ಹಿರಿಯರ ಸಲಹೆ, ಕಾರ್ಯಕರ್ತರ ನಿಸ್ವಾರ್ಥ ಸೇವೆ, ಹಿತೈಷಿಗಳ ಸಹಾಯ ಮತ್ತು ಊರ-ಪರವೂರ ಹಿಂದೂ ಬಾಂಧವರ ಸಮರ್ಪಣಾ ಮನೋಭಾವ ನಮಗೆ ಪ್ರೇರಕ ಶಕ್ತಿ. ನಮ್ಮಿಂದ ಇನ್ನಷ್ಟು ಸತ್ಕಾರ್ಯಗಳನ್ನು ಮಾಡಿಸುವ ಯೋಗ-ಭಾಗ್ಯವನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು. ನಂತರ ಅವರು, ನೆರೆದ ಗಣ್ಯರ ಸ್ವಾಗತ ಪರಿಚಯವನ್ನು ಮಾಡಿಕೊಟ್ಟರು.
ನಂತರ ಪುರುಷರ ಗುಂಪು ಚರ್ಚೆಯಲ್ಲಿ ಪತಿಯಂದಿರ ಪ್ರಶ್ನೆಗಳಿಗೆ ಡಾ. ಭಟ್ ಮತ್ತು ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಸಮಾಲೋಚನೆ ಮತ್ತು ಮಾರ್ಗದರ್ಶನ ನೀಡಿದರು. ಮಹಿಳೆಯರ ಗುಂಪು ಚರ್ಚೆಯನ್ನು ರಾಷ್ಟ್ರ ಸೇವಿಕಾ ಸಮಿತಿಯ ಡಾ. ಕಮಲಾ ಪ್ರಭಾಕರ್ ಭಟ್, ಭಾಜಪದ ರಾಜ್ಯ ಪ್ರಶಿಕ್ಷಣ ಕೋಷ್ಠದ ಡಾ. ಮಂಜುಳಾ ರಾವ್ ಮತ್ತು ಸನಾತನ ನಾಟ್ಯಾಲಯ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ನಡೆಸಿಕೊಟ್ಟರು. ಕ್ರೂಢೀಕೃತ ವರದಿಯನ್ನು ಶ್ರೀ ಭಾಸ್ಕರ್ ನಾಟೆಕಲ್ ಮತ್ತು ಶ್ರೀಮತಿ ಸುಜಾತ ಟೀಚರ್ ದೇವಿನಗರ ಪ್ರಸ್ತುತಪಡಿಸಿದರು. ತದನಂತರ, ಹಿರಿಯ ದಂಪತಿಗಳಾದ ಶ್ರೀ ಚಂದ್ರಶೇಖರ ಶೆಟ್ಟಿ ಮತ್ತು ವಿದುಷಿ ಶಾರದಾಮಣಿ ಶೇಖರ್ ತಮ್ಮ ಅನುಭವ ಕಥನಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಾರ್ಗದರ್ಶನದಲ್ಲಿ, ಶಾರದಾ ಆಯುರ್ವೇದ ಆಸ್ಪತ್ರೆಯ ಸಹಯೋಗದೊಂದಿಗೆ ಕೇಶವ ಶಿಶುಮಂದಿರವು 4 ಎಪ್ರಿಲ್ 2021ರಿಂದ ಮೊದಲ್ಗೊಂಡು ಆರು ತಿಂಗಳು ಪ್ರಾಯೋಗಿಕವಾಗಿ ನಡೆಸಿದ ದಂಪತಿ ಶಿಕ್ಷಣ ಪ್ರಕಲ್ಪದ ಕುರಿತಾದ ಮಾಹಿತಿಯನ್ನು ನೀಡಲಾಯಿತು. ಮುಂದೆ ಪ್ರಕಲ್ಪವನ್ನು ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲಿದ್ದು ನೋಂದಾವಣೆಗೊಂಡ ನವದಂಪತಿಗಳಿಗೆ 1. ನವದಂಪತಿ ಶಿಕ್ಷಣ, 2. ಗರ್ಭವತಿ ಮಾತೆಯರ ಶಿಕ್ಷಣ, 3. ಒಂದು ವರ್ಷ ವಯಸ್ಸಿನ ಶಿಶುಗಳ ಮಾತೆಯರಿಗೆ ಶಿಕ್ಷಣ 4. ಒಂದರಿಂದ ಮೂರು ವರ್ಷಗಳ ವಯಸ್ಸಿನ ಮಕ್ಕಳ ಮಾತೆಯರಿಗೆ ಶಿಕ್ಷಣ ಹಾಗೂ 5. ಮೂರರಿಂದ ಐದು ವರ್ಷಗಳ ವಯಸ್ಸಿನ ಮಕ್ಕಳ ಮಾತೆಯರಿಗೆ ಶಿಕ್ಷಣ ಹೀಗೆ ಐದು ಹಂತಗಳಲ್ಲಿ ಸಮಗ್ರ ಶಿಕ್ಷಣವನ್ನು ನೀಡುವ ವಿಶಿಷ್ಟ ಯೋಜನೆಯನ್ನು ಹಮ್ಮಿಕೊಂಡಿದೆ.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಕಾರ್ಯಕರ್ತರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹಿಂದೂ ಸಂಪ್ರದಾಯದಲ್ಲಿ ವಿವಾಹದ ಉದ್ದೇಶ, ಆಚರಣೆಗಳ ಮಹತ್ವದ ಬಗ್ಗೆ ನವಜೋಡಿಗಳಿಗೆ ತಿಳಿಹೇಳಿದರು. ಹಿಂದೂ ಸಮಾಜದಲ್ಲಿ ಅರಿವನ್ನು ಮೂಡಿಸುವ ಸಂಘದ 6 ಕಾರ್ಯಕ್ರಮಗಳಲ್ಲಿ ಕುಟುಂಬ ಪ್ರಬೋಧನವೂ ಒಂದು. ಸತ್ಸಂಗದ 5 ಆಯಾಮಗಳಾದ ಭಜನ್, ಭೋಜನ್, ಭಾಷಾ, ಭೂಷಾ ಮತ್ತು ಭವನ್ ಗಳಲ್ಲಿ ಸಂಪ್ರದಾಯವನ್ನು ಪಾಲಿಸುವ ಮೂಲಕ ನಮ್ಮ ಕುಟುಂಬವನ್ನು ಸಶಕ್ತ ಗೊಳಿಸಬಹುದು. ಅರ್ಥ ಮತ್ತು ಕಾಮದ ಸದ್ವಿನಿಯೋಗ ಮತ್ತು ರಕ್ಷಣೆಯ ಮೂಲಕ ಧರ್ಮವನ್ನು ಪಾಲಿಸಿ ಮೋಕ್ಷವನ್ನು ಪಡೆಯುವುದೇ ಜೀವನದ ಉದ್ದೇಶ. ಇದನ್ನು ಅರಿತು ನಡೆಯುವುದರ ಮೂಲಕ ನಮ್ಮ ಮನೆಯನ್ನು ಮಂತ್ರಾಲಯವಾಗಿಸಬಹುದು ಎಂದು ಮಾರ್ಗದರ್ಶನ ನೀಡಿದರು.
ಹಿಂದೂ ಸಂಪ್ರದಾಯದಂತೆ, ಮಾತೃ ಮಂಡಳಿಯ ಮಾತೆಯರು ನವದಂಪತಿಗಳನ್ನು ಕಾಲಿಗೆ ನೀರು ಹಾಕಿ, ಆರತಿ ಎತ್ತಿ, ಹೂ- ಕುಂಕುಮಗಳನ್ನು ಇತ್ತು ಬರಮಾಡಿಕೊಂಡು, ಉಪಹಾರ ನೀಡಿ ಸತ್ಕರಿಸಿ, ಸಮಾವೇಶದಲ್ಲಿ ಭಾಗಿಯಾಗಲು ಅನುವು ಮಾಡಿಕೊಟ್ಟರು. ತಿಂಡಿ-ತೀರ್ಥಗಳ ಜೊತೆಗೆ ಮಧ್ಯಾಹ್ನದ ಹಲವು ಬಗೆಯ ಭಕ್ಷ್ಯ ಭೋಜನದ ಆತಿಥ್ಯ, ಕುಟುಂಬದ ಶುಭ ಸಮಾರಂಭದಂತೆ ಆತ್ಮೀಯವಾಗಿತ್ತು. ಸತಿಪತಿಯರಿಗೆ ಪ್ರತ್ಯೇಕವಾಗಿ ಆಯೋಜಿಸಿದ ಗುಂಪು ಚರ್ಚೆಯಲ್ಲಿ, ದಾಂಪತ್ಯದ ಹಲವು ಪ್ರಶ್ನೆಗಳಿಗೆ ಹಿರಿಯರಿಂದ ಸಮಾಲೋಚನೆ ದೊರೆಯಿತು. ಹಾಡು, ರಸಪ್ರಶ್ನೆ ಮುಂತಾದ ಮನರಂಜನಾ ಕಾರ್ಯಕ್ರಮಗಳು ಸಮಾವೇಶದ ಮೆರುಗನ್ನು ಹೆಚ್ಚಿಸಿತು. ಭಾಗವಹಿಸಿದ ದಂಪತಿಗಳು ತಮ್ಮ ಅನಿಸಿಕೆಗಳ ಮೂಲಕ ತಮಗಾದ ಅನುಭವ ಮತ್ತು ದೊರೆತ ಜೀವನ ಶಿಕ್ಷಣಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಆಯೋಜಕರನ್ನು ಅಭಿನಂದಿಸಿದರು. ಕೊನೆಯಲ್ಲಿ ದಂಪತಿಗಳ ಮಡಿಲು ತುಂಬಿ ಆಶೀರ್ವಾದದ ಮೂಲಕ ಬೀಳ್ಕೊಡಲಾಯಿತು.
ಈ ನವದಂಪತಿಗಳ ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ 32 ಜೋಡಿ ನವವಿವಾಹಿತರು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದರು. ಕೇಶವ ಶಿಶುಮಂದಿರದ ಯಕ್ಷಗಾನ ತಂಡದ ಕಲಾವಿದೆ ಕು. ಮೇಘಶ್ರೀ ಕಜೆ ಪ್ರಾರ್ಥನೆಯನ್ನು ನೆರವೇರಿಸಿದರು. ಸದಸ್ಯ ಶ್ರೀ ಕೇಶವ ಕಜೆ ವಂದನಾರ್ಪಣೆ ಮಾಡಿದರು. ಅಧ್ಯಕ್ಷರಾದ ಶ್ರೀ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಹಿತೈಷಿ ಶ್ರೀ ವಿಕ್ರಮ ಕುಂಟಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق