ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಂಜನಗೂಡು ತಾಲೂಕಿಗೆ 3 ಸುಸಜ್ಜಿತ ಅಂಬುಲೆನ್ಸ್: ಶಾಸಕ ಹರ್ಷವರ್ಧನ್ ವಿಶೇಷ ಕಾಳಜಿಗೆ ಸಿಕ್ತು ಫಲ

ನಂಜನಗೂಡು ತಾಲೂಕಿಗೆ 3 ಸುಸಜ್ಜಿತ ಅಂಬುಲೆನ್ಸ್: ಶಾಸಕ ಹರ್ಷವರ್ಧನ್ ವಿಶೇಷ ಕಾಳಜಿಗೆ ಸಿಕ್ತು ಫಲ



ನಂಜನಗೂಡು: ಶಾಸಕ ಹರ್ಷವರ್ಧನ್ ಅವರು ತಮ್ಮ ತಾಲೂಕಿಗೆ 3 ಸುಸಜ್ಜಿತ ಅಂಬುಲೆನ್ಸ್ ಗಳನ್ನು ನೀಡುವ ಮೂಲಕ ಜನತೆಗೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಸಂಬಂಧಿಸಿದ ಆಸ್ಪತ್ರೆಗಳಿಗೆ ಹಸ್ತಾಂತರಿಸಿರುವ ಶಾಸಕರು, ತಕ್ಷಣದಿಂದಲೇ ಅವುಗಳು ಜನರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಿದ್ದಾರೆ.


ನಂಜನಗೂಡು ಜನರಲ್ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಹೊಂದಿರುವ ಹೈಟೆಕ್ ಆಂಬ್ಯುಲೆನ್ಸ್ ಒದಗಿಸಿದ್ದಾರೆ. ಸರ್ಕಾರವು ಈ ವಾಹನಕ್ಕೆ 40 ಲಕ್ಷ ರೂ. ನೀಡಿದೆ. ತಮ್ಮ ಶಾಸಕರ ಅಭಿವೃದ್ಧಿ ನಿಧಿಯಿಂದ 30 ಲಕ್ಷ ರೂ. ನೀಡುವ ಮೂಲಕ ಹರ್ಷವರ್ಧನ್ ಇನ್ನೊಂದು ಅಂಬುಲೆನ್ಸ್ ನೀಡಿದ್ದಾರೆ. ಮೋಲ್ಡ್ ಟೆಕ್ ಪ್ಯಾಕೇಜಿಂಗ್ ಲಿಮಿಟೆಡ್ ಕಂಪನಿಯಿಂದ 23 ಲಕ್ಷ ರೂ. ವೆಚ್ಚದ ಮತ್ತೊಂದು ಆಂಬ್ಯುಲೆನ್ಸ್ ಅನ್ನು ಅವರು ಕೊಡಿಸಿದ್ದಾರೆ.


ಒಂದು ಅಂಬುಲೆನ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದರೆ, ಇನ್ನೆರಡು ತಗಡೂರು ಮತ್ತು ಹುಲ್ಲಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತವೆ. ಇದರ ಜೊತೆಗೆ, ಶಾಸಕರು ನಂಜನಗೂಡು ಸರ್ಕಾರಿ ಆಸ್ಪತ್ರೆಗೆ 30 ಲಕ್ಷ ರೂ. ಮೌಲ್ಯದ ಔಷಧಿಗಳನ್ನುಸಹ ಕೊಡುಗೆಯಾಗಿ ನೀಡಿದ್ದಾರೆ.


ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಮತ್ತು ನಂಜನಗೂಡು ಆರೋಗ್ಯಾಧಿಕಾರಿಗಳಾದ ಡಾ.ಈಶ್ವರ್ ಕೆ ಮತ್ತು ಡಾ.ಸುರೇಶ್ ಆಂಬ್ಯುಲೆನ್ಸ್‌ಗಳನ್ನು ಸ್ವೀಕರಿಸಿದರು. ಶಾಸಕ ಬಿ.ಹರ್ಷವರ್ಧನ್ ಅವರೇ ಆ್ಯಂಬುಲೆನ್ಸ್ ನಲ್ಲಿ ಕುಳಿತು ಸ್ವತಃ ಚಾಲನೆ ಮಾಡುವ ಮೂಲಕ ಉದ್ಘಾಟನೆಗೊಳಿಸಿದ್ದು ವಿಶೇಷವಾಗಿತ್ತು.


ಕರೋನಾ ಮೊದಲ ಮತ್ತು 2ನೇ ಅಲೆಗಳ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಗಳ ಕೊರತೆಯಿಂದಾಗಿ ನಂಜನಗೂಡಿನ ಜನರು ಅನುಭವಿಸಿದ ಸಂಕಷ್ಟವನ್ನು ಹರ್ಷವರ್ಧನ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.


"ನಾವು ಎರಡನೇ ಹಂತದಲ್ಲಿ ಸಾಕಷ್ಟು ಸಾವು, ನೋವುಗಳನ್ನು ಕಂಡಿದ್ದೇವೆ. ನನ್ನ ಕ್ಷೇತ್ರದಲ್ಲೂ ಅನೇಕ ಅನಾಹುತಗಳು ಸಂಭವಿಸಿದವು. ಅಂಬ್ಯುಲೆನ್ಸ್‌ ಮತ್ತು ಔಷಧಗಳ ಕೊರತೆ ದೊಡ್ಡ ಪ್ರಮಾಣದಲ್ಲಿ ನಮ್ಮನ್ನು ಕಾಡಿತು. ಇದರಿಂದಾಗಿ ನಾನು ತುಂಬಾ ನೋವನ್ನು ಅನುಭವಿಸಿದೆ. ಅಂಬ್ಯುಲೆನ್ಸ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಬಂದು ನನ್ನ ಫೋಟೋ ಹಾಕಿ ನಾನು ಪ್ರಚಾರ ಪಡೆಯಬಹದಿತ್ತು. ನಾನು ಹಾಗೆ ಮಾಡಲಿಲ್ಲ. ಜನರ ಪ್ರತಿನಿಧಿಯಾಗಿ ನಾನು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಬಯಸಿದ್ದೆ. ಆರೋಗ್ಯ ಅಧಿಕಾರಿಗಳ ಸಹಕಾರದಿಂದ ನಾನು ಅಂಬ್ಯುಲೆನ್ಸ್‌ಗಳನ್ನು ಪಡೆಯಲು ಸಾಧ್ಯವಾಯಿತು. ಸಂಭವನೀಯ 3ನೇ ಅಲೆಯನ್ನು ಎದುರಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗುತ್ತಿದೆ'' ಎಂದು ಹರ್ಷವರ್ಧನ್ ವಿವರಿಸಿದರು.


ಮೋಸದ ಡಾಕ್ಟರ್ ವಿರುದ್ಧ ದೂರು:

ಹುರ ಗ್ರಾಮದಲ್ಲಿ ನಕಲಿ ವೈದ್ಯರಿಂದ ಸಮಸ್ಯೆಯಾಗುತ್ತಿರುವ ಕುರಿತು ಶಾಸಕರ ಗಮನ ಸೆಳೆದಾಗ, ಅಂತಹ ವೈದ್ಯರ ಕ್ಲಿನಿಕ್ ಮುಚ್ಚುವುದು ಸೇರಿದಂತೆ ಅವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶಿಸುವುದಾಗಿ ತಿಳಿಸಿದರು.


ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ನಕಲಿ ವೈದ್ಯರ ಬಗ್ಗೆ ಹಲವಾರು ದೂರುಗಳು ಬಂದಿವೆ. ಇಂತಹ ಚಿಕಿತ್ಸಾಲಯಗಳನ್ನು ತೆರೆಯಬಾರದು ಎಂದು ಸರ್ಕಾರವು ನಿರ್ದೇಶನ ನೀಡಿದೆ. ಇದನ್ನು ಧಿಕ್ಕರಿಸಿ ನಕಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ. ಶೀಘ್ರದಲ್ಲೇ ಅವುಗಳನ್ನು ಮುಚ್ಚಲಾಗುವುದು ಎಂದು ಅವರು ಹೇಳಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم