ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರಕಾಶ್ ಜಿ ಭಟ್
ಪುತ್ತೂರು: ಪ್ರಸ್ತುತ ಸಮಾಜದ ವಿದ್ಯಾರ್ಥಿಗಳಲ್ಲಿ ಜ್ಞಾನದ ಕೊರತೆಯಿದೆ. ಜ್ಞಾನದ ಮಟ್ಟವನ್ನು ಹೆಚ್ಚಿಸುವಲ್ಲಿ ವಿದ್ಯಾರ್ಥಿಗಳು ವಿವಿಧ ತರಬೇತಿಗಳನ್ನು ಪಡೆದುಕೊಂಡರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಸಣ್ಣ ಪ್ರಾಯದಿಂದಲೇ ತಮ್ಮ ಮುಂದಿನ ಜೀವನಕ್ಕೆ ಬೇಕಾಗುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಿವಿಧ ತರಬೇತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ ಮುಖ್ಯ ತಾಂತ್ರಿಕ ಅಧಿಕಾರಿ ಪ್ರಕಾಶ್ ಜಿ. ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಎಂಟು, ಒಂಬತ್ತು ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿರುವ ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ದೊರಕಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ತರಬೇತಿಗಳ ಅವಶ್ಯಕತೆಯಿದೆ. ಒಳ್ಳೆಯ ಮನಸ್ಥಿತಿಯಿಂದ ಕಷ್ಟ ಪಟ್ಟು ಅಭ್ಯಾಸ ಮಾಡಿದಾಗ ತಕ್ಕ ಫಲ ದೊರಕುತ್ತದೆ. ಈ ನೆಲೆಯಿಂದ ವಿದ್ಯಾರ್ಥಿಗಳು ತಮ್ಮಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕೀಳರಿಮೆಯನ್ನು ಹೋಗಲಾಡಿಸಲು ಮತ್ತು ಆತ್ಮವಿಶ್ವಾಸ ಬೆಳೆಸಲು ತರಬೇತಿ ಅವಶ್ಯಕ. ಪೆÇೀಷಕರು ಕೂಡ ತಮ್ಮ ಮಕ್ಕಳಿಗೆ ಸಹಕಾರ ನೀಡಬೇಕು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳು ತಮಗೆ ಬೇಕಾಗುವ ಎಲ್ಲಾ ತರಬೇತಿಗಳನ್ನು ಪಡೆದು, ಅಪೂರ್ವವಾದ ಜ್ಞಾನವನ್ನು ಬೆಳೆಸಿಕೊಂಡು ದೇಶಕ್ಕೆ ಹೆಸರು ತರುವಂತವರಾಗಬೇಕು. ಪ್ರಸ್ತುತ ದಿನಗಳಲ್ಲಿ ಕಲಿಕೆಗೆ ಮತ್ತು ಕೆಲವೊಂದು ವೃತ್ತಿಪರ ಕೊರ್ಸುಗಳಿಗೆ ಸರಕಾರದಿಂದಲೂ ಸಹಾಯಧನ ದೊರೆಯುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ವೃತ್ತಿಪರ ಕೊರ್ಸುಗಳನ್ನು ಅಭ್ಯಾಸ ಮಾಡಿದಲ್ಲಿ ಉತ್ತಮವಾದ ಉದ್ಯೋಗವನ್ನು ಗಳಿಸಬಹುದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ್ ಶೆಟ್ಟಿ ಮಾತನಾಡಿ ಪ್ರಸ್ತುತ ಜಗತ್ತಿನಲ್ಲಿ ಹೊಸ ಹೊಸ ವ್ಯವಸ್ಥೆಗಳು ಉದಯಿಸುತ್ತಿವೆ. ಅವಕಾಶಗಳು ವೃದ್ಧಿಸುತ್ತಿವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಅವಕಾಶಗಳು ಲಭ್ಯವಾಗುತ್ತಿವೆ. ಅದನ್ನು ಉಪಯೋಗಿಸಿಕೊಂಡು ಭವಿಷ್ಯದ ಹಾದಿಯನ್ನು ಭದ್ರಪಡಿಸಿಕೊಳ್ಳಬೇಕು. ಅವಕಾಶಗಳಿಂದ ವಂಚಿತರಾಗಬಾರದು. ಜೀವನದಲ್ಲಿ ಒಳ್ಳೆಯ ಉದ್ಯೋಗ ದೊರೆಯಬೇಕಾದರೆ ಅನೇಕ ತರಬೇತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಉಪಸ್ಥಿರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಎಂ ಆರ್ ಪ್ರಾರ್ಥಿಸಿ, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಸ್ವಾಗತಿಸಿದರು. ವಿದ್ಯಾಲಯದ ಶಿಕ್ಷಕಿ ಶ್ರೀಮತಿ ಸುಚೇತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ ಅವರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ ಮಾಹಿತಿ ಕಾರ್ಯಗಾರ ನಡೆಯಿತು.
ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಆಸಕ್ತ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ, ಎನ್‍ಟಿಎಸ್‍ಇ, ಕೆವಿಪಿವೈ ಹಾಗೂ ಎನ್‍ಡಿಎ ಪರೀಕ್ಷೆಗಳಿಗೆ ನಿರಂತರ ತರಬೇತಿ ನಡೆಯಲಿದೆ. ಈ ತರಬೇತಿಗೆ ಅಂಬಿಕಾ ಸಂಸ್ಥೆಗಳಲ್ಲದೆ ಇತರ ಯಾವುದೇ ಸಂಸ್ಥೆಯ ವಿದ್ಯಾರ್ಥಿಗಳು ಬೇಕಾದರೂ ದಾಖಲಾತಿ ಹೊಂದಬಹುದಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment