ಮಂಗಳೂರು: ಬ್ಯಾರಿ ಭಾಷೆಗೆ ಸಾವಿರಾರು ವರ್ಷದ ಇತಿಹಾಸ ಇದೆ ಎಂಬ ಸತ್ಯ ಬಪ್ಪ ಬ್ಯಾರಿಯ ಐತಿಹಾಸಿಕ ಚರಿತ್ರೆ, ಬಬ್ಬರ್ಯ ದೈವದ ಪಾಡ್ದನ, ಇಸ್ಲಾಮಿ ಚರಿತ್ರೆ ಹಾಗೂ ಶಾಸನಗಳಿಂದ ಸಾಬೀತಾಗಿದೆ. ಈ ಭಾಷೆಯ ಬೆಳವಣಿಗೆಗೆ ಅಕಾಡೆಮಿಯನ್ನು ನೀಡುವ ಮೂಲಕ ಎಲ್ಲಾ ಸರಕಾರಗಳು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ. ಪ್ರಸಕ್ತ ರಾಜ್ಯ ಸರಕಾರ ಅಕಾಡೆಮಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಉಚಿತ ನಿವೇಶನ ಮಂಜೂರು ಮಾಡಿ ಬ್ಯಾರಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ಆರು ಕೋಟಿ ಮಂಜೂರು ಮಾಡಿ ಈಗಾಗಲೇ ಮೂರು ಕೋಟಿ ಬಿಡುಗಡೆ ಮಾಡಿದೆ. ಇದನ್ನು ಬ್ಯಾರಿ ಭಾಷಿಕರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್ ಉಚ್ಚಿಲ್ ಹೇಳಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ರವಿವಾರ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠ ಇದರ ಜಂಟಿ ಆಶ್ರಯದಲ್ಲಿ ನಡೆದ ಬ್ಯಾರಿ ಭಾಷಾ ದಿನಾಚರಣೆಯನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೂತನ ಶಿಕ್ಷಣ ನೀತಿಯ ಅನ್ವಯದಂತೆ ವಿಶ್ವವಿದ್ಯಾನಿಲಯಗಳಲ್ಲಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ದಫ್, ಒಪ್ಪಣೆ, ಕೋಲ್ಕಲಿ ಮುಂತಾದ ಕಲಾಪ್ರಕಾರಗಳು ಸರ್ಟಿಫಿಕೇಟ್ ಕೋರ್ಸ್ ಗಳಾಗಿ ಹೊರಹೊಮ್ಮಲಿದೆ. ಶಾಲೆ ಹಾಗೂ ಪದವಿ ಕಾಲೇಜು ಮಟ್ಟದಲ್ಲಿ ತೃತೀಯ ಐಚ್ಚಿಕ ಭಾಷೆಯಾಗಿ ಬ್ಯಾರಿ ಭಾಷೆ ಮೂಡಿ ಬರಲಿದ್ದು ಸಿದ್ದತೆಗಳು ಭರದಿಂದ ಸಾಗುತ್ತಿದೆ. ಬ್ಯಾರಿ ಭಾಷೆಯನ್ನು ಶೈಕ್ಷಣಿಕವಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಬ್ಯಾರಿ ಭಾಷಿಕರದ್ದಾಗಿದೆ ಎಂದು ಹೇಳಿದರು.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾರಿ ಭಾಷಾ ದಿನಾಚರಣೆಯ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಹಂಝ ಮಲಾರ್ ಮಾತನಾಡಿ, ಬ್ಯಾರಿ ಭಾಷೆಗೆ ಅಕಾಡೆಮಿ ದೊರಕಿದ ಅಕ್ಟೊಬರ್ 3 ರಂದು ವಿಶ್ವದಾದ್ಯಂತ ಇರುವ ಬ್ಯಾರಿ ಭಾಷಿಕರು ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬ್ಯಾರಿ ಆಂದೋಲನದ ರೂವಾರಿಗಳನ್ನು, ಸಾಹಿತಿಗಳನ್ನೂ, ಕಲಾವಿದರನ್ನು ಗುರುತಿಸಿ ಬ್ಯಾರಿ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ಪುರಾತನ ಭಾಷೆಯಾದ ಬ್ಯಾರಿ ಭಾಷೆಗೆ ರಾಜ್ಯ ಭಾಷೆಯ ಸ್ಥಾನಮಾನ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಸೇರಿದಂತೆ ಭಾಷೆಗೆ ನ್ಯಾಯ ಒದಗಿಸುವ ಎಲ್ಲಾ ಪ್ರಯತ್ನಗಳನ್ನು ಅಕಾಡೆಮಿ ಮಾಡಬೇಕೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಕೋಡಿಜಾಲ್ ಇಬ್ರಾಹಿಂ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ಯಾರಿ ಆಂದೋಲನದ ಹಿರಿಯ ರೂವಾರಿಗಳಲ್ಲಿ ಒಬ್ಬರಾದ ಅಬ್ದುಲ್ ಖಾದರ್ ಬುಟ್ಟೋ ಫರಂಗಿಪೇಟೆ, ಹಿರಿಯ ಬ್ಯಾರಿ ಸಾಹಿತಿ ಟಿಎ ಆಲಿಯಬ್ಬ ಜೋಕಟ್ಟೆ, ಖ್ಯಾತ ಬ್ಯಾರಿ ಭಾಷಾ ಪ್ರವಚನಕಾರ, ಭಾಷಾ ತಜ್ಞ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಖ್ಯಾತ ಬ್ಯಾರಿ ಗಾಯಕರಾದ ಶಮೀರ್ ಮುಲ್ಕಿ, ಅಶ್ರಫ್ ಸವಣೂರ್, ಸಮದ್ ಗಡಿಯಾರ, ಜಿಯಾ ಕಲ್ಲಡ್ಕ, ಖ್ಯಾತ ಬ್ಯಾರಿ ನಾಟಕ ಕಲಾವಿದ ಸತ್ತಾರ್ ಗೂಡಿನಬಳಿ, ಖ್ಯಾತ ಬ್ಯಾರಿ ಸಂಗೀತ ಸಾಹಿತಿಗಳಾದ ರಾಝ್ ಕಲಾಯಿ, ಇರ್ಫಾನ್ ಬಜಾಲ್ ಸೇರಿದಂತೆ ಹತ್ತು ಮಂದಿ ಬ್ಯಾರಿ ಸಾಧಕರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ಪ್ರಬಂಧ ವಾಚನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಮುಹಮ್ಮದ್ ಸಲೀಂ, ದ್ವಿತೀಯ, ಮುಹಮ್ಮದ್ ಸಾಹಿದ್ ಮೋಂಟುಗೋಳಿ ಹಾಗೂ ತೃತೀಯ ಸ್ಥಾನ ಪಡೆದ ಮುಹಮ್ಮದ್ ತೌಶೀಫ್ ರಿಗೆ ಬಹುಮಾನ ನೀಡಲಾಯಿತು. ಇನ್ನು ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶಾಹೀದಾ ಮಂಗಳೂರು, ದ್ವಿತೀಯ ಸ್ಥಾನ ಪಡೆದ ಹಫೀಝಾ ಫಾತಿಮಾ ಹಾಗೂ ತೃತೀಯ ಸ್ಥಾನ ಪಡೆದ ಖದೀಜಾ ಅಶ್ಯಮ್ ರಿಗೆ ಬಹುಮಾನ ನೀಡಲಾಯಿತು. ಇನ್ನು ಬ್ಯಾರಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿಹಾಬುದ್ದೀನ್ ಕಕ್ಕಿಂಜೆ, ದ್ವಿತೀಯ ಸ್ಥಾನ ಪಡೆದ ತಾಜುದ್ದೀನ್ ಅಮ್ಮುಂಜೆ, ತೃತೀಯ ಸ್ಥಾನ ಪಡೆದ ಮುಹಮ್ಮದ್ ಹಫೀಲ್, ನಿಯ್ಯಾ ಬಂಟ್ವಾಳ ಇವರಿಗೆ ಬಹುಮಾನ ನೀಡಲಾಯಿತು.
ಇದೇ ವೇಳೆ ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮುಸ್ತಫಾ, ದ್ವಿತೀಯ ಸ್ಥಾನವನ್ನು ಹಬೀಬ್ ರಹ್ಮಾನ್ ಹಾಗೂ ತೃತೀಯ ಸ್ಥಾನವನ್ನು ಪಡೆದ ಬಿಎ ಮುಹಮ್ಮದ್, ಮುಹಮ್ಮದ್ ಸೌರೀಜ್ ಇವರಿಗೆ ಬಹುಮಾನ ನೀಡಲಾಯಿತು. ಜೊತೆಗೆ ಪ್ರಬಂಧ ವಾಚನ, ಗಾಯನ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನ ನೀಡುವ ಮೂಲಕ ಗೌರವಿಸಲಾಯಿತು. ಜಡ್ಜ್ ಗಳಾಗಿ ಅಬ್ದುಲ್ ಅಜೀಜ್ ಝುಹ್ರಿ ಪುಣಚ, ಅಶೀರುದ್ದೀನ್ ಸಾರ್ತಬೈಲ್ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬ್ಯಾರಿ ಅಕಾಡೆಮಿ ಸದಸ್ಯರಾದ ಕಮರುದ್ದೀನ್ ಸಾಲ್ಮರ, ಸುರೇಖಾ, ಚಂಚಲಾಕ್ಷಿ ಹಾಗೂ ಅಹ್ಮದ್ ಬಾವಾ ಪಡೀಲ್, ಅಲಿಕುಞ ಪಾರೆ, ಹಸನಬ್ಬ, ಬಶೀರ್ ಬೈಕಂಪಾಡಿ, ಹುಸೇನ್ ಕಾಟಿಪಳ್ಳ, ಇಸ್ಮಾಯಿಲ್ ಮೂಡುಶೆಡ್ಡೆ, ಅಝೀಝ್ ಪರ್ತಿಪ್ಪಾಡಿ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಡಾ. ಸಿದ್ದೀಕ್ ವಗ್ಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಬ್ಯಾರಿ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ವಂದಿಸಿದರು. ಸದಸ್ಯ ಸಂಚಾಲಕ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment