ಅಮೃತಾನಂದಮಯಿ ಸೇವಾ ಸಮಿತಿಯ ಪ್ರಯತ್ನಕ್ಕೆ ಶ್ಲಾಘನೆ
ಮಂಗಳೂರು: ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೊಕ್ಕಪಟ್ನ- ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಅಮೃತಾನಂದಮಯಿ ಆಶ್ರಮದ ಮೂಲಕವಾಗಿ ಕಂಕನಾಡಿ ರೈಲ್ವೇ ಸ್ಟೇಷನ್ ವರೆಗೆ ಮತ್ತು ಅಲ್ಲಿಂದ ವಾಪಸು ಬೋಳೂರು ಸುಲ್ತಾನ್ ಬತ್ತೇರಿ- ಬೊಕ್ಕಪಟ್ನದ ವರೆಗೆ ಸರಕಾರಿ ಸಿಟಿ ಬಸ್ ಸೇವೆಯನ್ನು ಹೊಸದಾಗಿ ಸೋಮವಾರದಿಂದ (ಸೆ.27) ಆರಂಭಿಸಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಬಸ್ ಓಡಾಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಸ್ಥಳೀಯ ಸಾರ್ವಜನಿಕರು ಬಹಳ ಕಾಲದಿಂದಲೂ ಇಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಸಲ್ಲಿಸುತ್ತಿದ್ದರು. ಇಲ್ಲಿನ ಜನರ ಭಾವನೆಗಳಿಗನುಗುಣವಾಗಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಮಂಗಳೂರು ಭೇಟಿಯ ಸಂದರ್ಭದಲ್ಲಿ ಅಮ್ಮನವರು ಇಲ್ಲಿ ಸಾರಿಗೆ ಸೌಲಭ್ಯ ಅಭಿವೃದ್ಧಿ ಮಾಡಬೇಕಾಗಿ ತಿಳಿಸಿದ್ದರು. ಅಮ್ಮನವರ ಸಂಕಲ್ಪದಂತೆ ಇಂದು ಅವರ 68 ನೆಯ ಜನ್ಮದಿನಾಚರಣೆಯಂದು ಈ ಸೇವೆ ಆರಂಭಗೊಳ್ಳುತ್ತಿರುವುದು ವಿಶೇಷ ಎಂದು ಶಾಸಕರು ಹೇಳಿದರು. ಈ ನಿಟ್ಟಿನಲ್ಲಿ ಅಮೃತಾನಂದಮಯಿ ಸೇವಾ ಸಮಿತಿಯ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಸ್ಥಳೀಯ ಜನರು ಬಡ,ಮಧ್ಯಮ ವರ್ಗದವರಾಗಿದ್ದು ಅವರಿಗೆ ಈ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಪ್ರಯೋಜನಕಾರಿ ಎನಿಸಲಿದೆ. ಕಂಕನಾಡಿ ರೈಲು ನಿಲ್ದಾಣ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಇದು ಅನುಕೂಲಕರ. ಇಲ್ಲಿನ ರಸ್ತೆ ಗಳನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸಲಾಗುತ್ತಿದೆ ಎಂದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಕಾರಿ ಬಸ್ ಚಾಲನೆಗೊಂಡರೆ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ. ಬ್ರಹ್ಮಸ್ಥಾನ ಕ್ಕೆ ಆಗಮಿಸುವ ಭಕ್ತರಿಗೆ ಮತ್ತು ವಾರಾಂತ್ಯದಲ್ಲಿ ನದೀಯಾನ ಹಾಗೂ ಬೋಟ್'ಹೌಸ್'ಗಳ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದರು. ಸ್ಟ್ರೀಟ್ ಫೆಸ್ಟಿವಲ್ ಮೂಲಕ ಸಾರ್ವಜನಿಕರಿಗೂ ವ್ಯಾಪಾರಸ್ಥರಿಗೂ ಉಪಯೋಗವಾಗಲಿದ್ದು ಪ್ರಧಾನಿಗಳ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದರು.
ಕೆ ಎಸ್ ಆರ್ ಟಿ ಸಿ, ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ ಎಸ್. ಎನ್. ಸ್ವಾಗತಿಸಿದರು. ಅಮೃತಾನಂದಮಯಿ ಆಶ್ರಮದ ಕೃಷ್ಣ ಶೆಟ್ಟಿ ವಂದಿಸಿದರು. ಡಾ.ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ, ಆಡಳಿತ ನಿರ್ದೇಶಕರು. ಎಸ್.ಸಿ.ಎಸ್ ಆಸ್ಪತ್ರೆ, ಮಂಗಳೂರು, ಮಾಜಿ ಮೇಯರ್ ದಿವಾಕರ್, ಸ್ಥಳೀಯ ಕಾರ್ಪೋರೇಟರ್ ಜಗದೀಶ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಸುರೇಶ್ ಅಮೀನ್, ಮುರಳೀಧರ್ ಶೆಟ್ಟಿ, ಶ್ರೀ ಪಂಕಜ್ ವಸಾನಿ, ಆರ್.ಟಿ.ಓ. ವೆರ್ಣೇಕರ್, ಬೋಳೂರು ಮೊಗವೀರ ಸಭಾದ ಪ್ರತಿನಿಧಿಗಳು, ರಾಹುಲ್ ಶೆಟ್ಟಿ, ಯೋಗೀಶ್ ಆಚಾರ್ಯ, ತುಕಾರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment