"ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು, ಬಿದ್ದಿರಲೂ ಬಂದು ನೋಡದ ತಾಯಿ, ಶುದ್ಧ ವೈರಿಗಳು ಸರ್ವಜ್ಞ " ಈ ವಚನವನ್ನು ನಾನು ನೆನಪಿನಲ್ಲೇ ಇಡಬೇಕು.
ಕುಂಬ್ರ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನಾನು 6 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಪಿ. ಟಿ. ಮಾಸ್ಟರ್ ಆಗಿ ( ದೈಹಿಕ ಶಿಕ್ಷಣ ಶಿಕ್ಷಕರು) ಬಂದಿದ್ದವರ ಒಂದು ಬುದ್ಧಿ ಮಾತು ನನ್ನ ಜೀವನದಲ್ಲಿ ದೊಡ್ಡ ತಿರುವು ಪಡೆದಿದೆ ಅನ್ನೋದು ಸತ್ಯ.
ಅವರು ಕ್ಲಾಸ್ಗೆ ಬಂದ ಮೊದಲ ದಿವಸ ಎಲ್ಲಾ ವಿದ್ಯಾರ್ಥಿಗಳಿಗೆ ನಿಮ್ಮ ಮುಂದಿನ ಉದ್ಯೋಗ ಯಾವುದು ಮಾಡಬೇಕೆಂದಿರುವಿರಿ? ಎಂಬ ಪ್ರಶ್ನೆ ಆಗಿತ್ತು.... ಕೆಲವರು ಪೊಲೀಸ್, ಇನ್ನು ಕೆಲವರು ಇಂಜಿನಿಯರ್, ಡಾಕ್ಟರ್... ಇತ್ಯಾದಿ ಉತ್ತರ ನೀಡಿದ್ರು... ನನ್ನ ಸರದಿ ಬಂದಾಗ ನನ್ನ ಅಪ್ಪ ಮಾಡ್ತಿದ್ದ ಉದ್ಯೋಗ ಕೆಂಪು ಕಲ್ಲು ಕಡಿಯುವುದು ಅಂತ ಹೇಳ್ದೆ... ಅಷ್ಟರಲ್ಲಿ ಅವರ ಸಿಟ್ಟು ನೆತ್ತಿಗೆ ಏರಿತ್ತು.... ಏನು "ಅಜ್ಜ ನೆಟ್ಟ ಆಲದ ಮರ ಆಗ್ಬೇಕಾ " ಬೇರೆ ಉದ್ಯೋಗ ಮಾಡ್ಬಾರದ? ಸರ್ಕಾರ ನಿಮಗೆ ಇಷ್ಟು ಸವಲತ್ತು ನೀಡಿದೆ ಅದನ್ನು ಉಪಯೋಗಿಸಬಾರದ? ನೀನು ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗೋದನ್ನ ನಾನು ನೋಡ್ಬೇಕು... ಎಂಥ ಮನಸ್ಸು ಗುರುವಿನದ್ದು! ಮನದಲ್ಲಿ ಅಂದುಕೊಂಡೆ.
ಅವತ್ತಿಂದ ಚೆನ್ನಾಗಿ ಓದಿ 6 ನೇ ಕ್ಲಾಸ್ಸಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದೆ...7ನೇ ತರಗತಿಯಲ್ಲಿ ಶಿಕ್ಷಣ ಮಂತ್ರಿಯ ಜವಾಬ್ದಾರಿ ನೀಡಿದರು. ಅಲ್ಲಿಯೂ ಪ್ರಥಮ ಶ್ರೇಣಿ ಪಡೆದೆ. ಹೀಗೆ ನಾನು ಎಡವಿ ಬೀಳೋ ಹೊತ್ತಲ್ಲಿ ಸರಿಯಾಗಿ ಬುದ್ಧಿ ಹೇಳಿ ನೀನು ಈ ದಾರೀಲೆ ನಡೆ ಎಂದವರು... ನನ್ನ ಪಾಲಿಗೆ ಆರಾಧ್ಯ ಮೂರ್ತಿ ಶ್ರೀ ವಿಶ್ವೇಶ್ವರ ಭಟ್.
ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಇಂತಹ ಗುರುಗಳನ್ನು ನೆನಪು ಮಾಡಿ ಈ ಮೂಲಕ ಅವರಿಗೆ *ಗುರುದಕ್ಷಿಣೆ* ನೀಡುತ್ತಿದ್ದೇನೆ.
ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಕರು ಬುದ್ಧಿವಾದ ಹೇಳೋವಾಗ ನಮ್ಮ ಸದುದ್ದೇಶಕ್ಕೆಂದು ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸಾರ್ಥಕತೆ ಪಡೆಯುವುದರಲ್ಲಿ ಎರಡು ಮಾತಿಲ್ಲ ಎನ್ನೋದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ..
ಅವರ ಬೋಧನೆ ನನ್ನ ಸಮಾಜದಲ್ಲಿ ಗುರುತಿಸುವಂತೆ ಮಾಡಿದೆ... ಹಾಗಾಗಿ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗವೂ ಲಭಿಸಿದೆ.
"ಪುಸ್ತಕದ ಪುಟದೊಳಗೆ ಸ್ಪಷ್ಟವಾಗಿ ಬರೆಸಿ,
ಮನಸೊಳಗೆ ಜ್ಞಾನದೀವಿಗೆಯ ಬೆಳಗಿಸಿ, ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ,
ಬದುಕಿನ ನಿಜವಾದ ನಡೆ ನುಡಿಯನ್ನು ಕಲಿಸಿದ,
ಬೋಧನೆಯ ಮೂಲಕ ಸಾಧನೆಯ ಹಾದಿಗೆ ನಡೆಸಿದ "ಎಲ್ಲಾ ಗುರುಗಳಿಗೆ ಸಾವಿರ ಸಾವಿರ ಸಾಷ್ಟಾಂಗ ನಮನಗಳು.
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
✍️ನಾರಾಯಣ. ಕುಂಬ್ರ
ಲ್ಯಾಬ್ ಸಹಾಯಕರು,
ರಸಾಯನ ಶಾಸ್ತ್ರ ವಿಭಾಗ,
ವಿವೇಕಾನಂದ ಕಾಲೇಜು,
ನೆಹರುನಗರ, ಪುತ್ತೂರು.
إرسال تعليق