ಬೆಳ್ತಂಗಡಿ: ವಿದ್ಯುತ್ ಮೀಟರನ್ನು ಮನೆಯ ಹಿಂಭಾಗದಿಂದ ಮುಂಭಾಗಕ್ಕೆ ಸ್ಥಳಾಂತರಿಸಲು ಲಂಚ ಪಡೆದಿರುವನೆಂಬ ಆಪಾದನೆ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯವರು ದಾಖಲಿಸಿರುವ ಪ್ರಕರಣದಲ್ಲಿ ಆರೋಪಿ ಬೆಳ್ತಂಗಡಿ ಮೆಸ್ಕಾಂನ ಲೈನ್‍ಮ್ಯಾನ್ ಆಗಿದ್ದ ಪುರಂದರದಾಸ್ ಎಂಬವರನ್ನು ದೋಷಮುಕ್ತಗೊಳಿಸಿ ಮಂಗಳೂರಿನ ಗೌರವಾನ್ವಿತ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯ ತೀರ್ಪು ನೀಡಿರುತ್ತದೆ.
ಬೆಳ್ತಂಗಡಿ ತಾಲೂಕು, ನ್ಯಾಯತರ್ಪು ಗ್ರಾಮದ ಹೈದರ್ ಎಂಬವರು ವಿದ್ಯುತ್ ಮೀಟರನ್ನು ತನ್ನ ಮನೆಯ ಹಿಂಬದಿಯಿಂದ ಮನೆಯ ಮುಂಭಾಗಕ್ಕೆ ಅಳವಡಿಸಲು ಮೆಸ್ಕಾಂ ರವರಿಗೆ ಕೋರಿಕೊಂಡ ಮೇರೆಗೆ ಆರೋಪಿ ಬಂದು ಲೈಟ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ಕಡಿದುಹಾಕಿದ್ದು ತಾ.12.04.2013 ರಂದು ಲೈಟ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ನೀಡಲು ಆರೋಪಿಯಲ್ಲಿ ಕೇಳಿದಾಗ ವಿದ್ಯುತ್ ಸಂಪರ್ಕ ನೀಡಬೇಕಾದರೆ ರೂ.1500/-ನ್ನು ಲಂಚವಾಗಿ ನೀಡಬೇಕೆಂದು ಹೇಳಿದ್ದು, ಅವರ ಕೋರಿಕೆ ಮೇರೆಗೆ ರೂ.500/-ನ್ನು ನೀಡಿದ್ದು ಉಳಿದ ರೂ.1000/-ವನ್ನು ನೀಡದೇ ಇದ್ದಲ್ಲಿ ಮುಂದಕ್ಕೆ ವಿದ್ಯುತ್ ಸಂಪರ್ಕವನ್ನು ನಿಲ್ಲಿಸಲಾಗುವುದು, ಎಂದು ಆರೋಪಿ ಬೆದರಿಸಿದನೆಂದೂ. ತಾ.16.04.2013ರಂದು ಆರೋಪಿಯ ಮೊಬೈಲ್‍ಗೆ ಕರೆಮಾಡಿ ಮಾತನಾಡಿದಾಗ ಲಂಚದ ಹಣಕ್ಕೆ ಬೇಡಿಕೆಯಿಟ್ಟು 17.04.2013 ರಂದು ಸಂಜೆ 7 ಗಂಟೆಯೊಳಗೆ ಸದ್ರಿ ಹಣ ನೀಡದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿದು ಹಾಕಲಾಗುವುದು ಎಂದು ಆರೋಪಿ ಪುನ: ಎಚ್ಚರಿಕೆ ನೀಡಿದನೆಂದು ಆಪಾದಿಸಿ ಫಿರ್ಯಾದುದಾರ ಹೈದರ್ ರವರು ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ಹಾಗೂ ಮೊಬೈಲ್ ಸಂಭಾಷಣೆಯ ವಿವರ ನೀಡಿದ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸದ್ರಿ ದೂರಿನ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸರು ತಾ.17.04.2013ರಂದು ಪಂಚರೊಂದಿಗೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ರೇಷ್ಮೆ ರಸ್ತೆ ಎಂಬಲ್ಲಿಗೆ ತೆರಳಿ, ಹೈದರ್ ಆರೋಪಿಗೆ ಕರೆಮಾಡಿದಾಗ ಆರೋಪಿ ಹೈದರ್ ಇದ್ದಲ್ಲಿಗೆ ಬಂದಿದ್ದ. ಆರೋಪಿಯ ಬೇಡಿಕೆಯುತ ಹೈದರ್ ರೂ.1000/-ವನ್ನು ಆರೋಪಿಯ ಶರ್ಟಿನ ಕಿಸೆಯಲ್ಲಿ ಇಟ್ಟಿದ್ದು, ಆರೋಪಿ ಪಿರ್ಯಾದುದಾರರಿಂದ ಲಂಚದ ಹಣ ಪಡೆದಿರುವುದನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿದ್ದು, ಆರೋಪಿ ಲೋಕಾಯುಕ್ತ ಬಲೆಗೆ ಬಿದ್ದಿರುವುದಾಗಿಯೂ ಲಂಚದ ಹಣಕ್ಕೆ ಬೇಡಿಕೆಯೊಡ್ಡಿ ಲಂಚದ ಹಣ ಪಡೆದುಕೊಂಡಿರುವುದು ತನಿಖೆಯಿಂದ ಹಾಗೂ ಸಾಕ್ಷ್ಯಾಧಾರದಿಂದ ತಿಳಿದು ಬಂದಿರುವುದರಿಂದ ಲೈನ್‍ಮ್ಯಾನ್ ಪುರಂದರದಾಸ್ ರವರು ಕಲಂ 7, 13(1)ಡಿ ಜೊತೆಗೆ 13(2) ಲಂಚ ನಿರೋಧ ಕಾಯ್ಕೆ 1988ರ ಪ್ರಕಾರ ಶಿಕ್ಷಾರ್ಹ ಅಪರಾಧವೆಸಗಿರುತ್ತಾರೆ ಎಂದು ಆಪಾದಿಸಿ ಲೋಕಾಯುಕ್ತ ಪೆÇಲೀಸರು ಮಂಗಳೂರು ಗೌರವಾನ್ವಿತ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ) ನ್ಯಾಯಾಲಯದಲ್ಲಿ ಚಾರ್ಜ್‍ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಪರವಾಗಿ ಒಟ್ಟು 11 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದು ಆರೋಪಿಯ ಪರವಾಗಿ ಆರೋಪಿ ಪುರಂದರ್ ದಾಸ್‍ರವರೇ ವಿಚಾರಣೆಗೊಳಪಟ್ಟಿದ್ದರು.
ಪ್ರಕರಣದ ಫಿರ್ಯಾದಿದಾರರಾದ ಹೈದರ್ ಮತ್ತು ಆತನ ಮಿತ್ರ ಹಾಗೂ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿರುವ ಶರತ್ ಕುಮಾರ್ ಎಂಬವರು ಸೇರಿ ಮೆಸ್ಕಾಂ ಇಲಾಖೆಯ ಅನುಮತಿ ಪಡೆಯದೆ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಹೈದರ್‍ನ ಮನೆಯ ವಿದ್ಯುತ್ ಮೀಟರನ್ನು ಮನೆಯ ಹಿಂಬದಿಯಿಂದ ಮುಂಭಾಗಕ್ಕೆ ಸ್ಥಳಾಂತರ ಮಾಡಿದ್ದರು. ತಾ.12.04.2013ರಂದು ಸದ್ರಿ ಶರತ್ ಕುಮಾರ್ ಶೆಟ್ಟಿ ಪುನ: ವಿದ್ಯುತ್ ಸಂಪರ್ಕ ಮಾಡಿಸಿದ್ದು, ತಾ.15.04.2013ರಂದು ಈ ವಿಚಾರವು ಲೈನ್‍ಮ್ಯಾನ್ ಆಗಿರುವ ಪುರಂದರದಾಸ್ ರವರ ಗಮನಕ್ಕೆ ಬಂದಿತ್ತು. ಫಿರ್ಯಾದುದಾರರನ್ನು ವಿಚಾರಿಸಿದಾಗ ಆತ ಒಪ್ಪಿಕೊಂಡಿದ್ದು, ತಕ್ಷಣ ವರದಿಯನ್ನು ಪುರಂದರದದಾಸ್ ರವರು ತನ್ನ ಮೇಲಧಿಕಾರಿಗಳಿಗೆ ತಿಳಿಸಿದ್ದೆ. ಇದರಿಂದ ಹೈದರ್ ಮತ್ತು ಶರತ್ ಕುಮಾರ್ ಶೆಟ್ಟಿಯವರು ತಮ್ಮ ಮೇಲೆ ಮೆಸ್ಕಾಂ ಇಲಾಖೆಯಲ್ಲಿ ಪ್ರಕರಣ ದಾಖಲಾಗಬಹುದೆಂದು ಬೆದರಿ, ರಾಜಕೀಯ ಪ್ರಭಾವದಿಂದ ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಪುರಂದರದಾಸ್ ಸಾಕ್ಷ್ಯ ಹೇಳಿದ್ದರು.
ಪ್ರಕರಣದ ಫಿರ್ಯಾದಿದಾರರು ಪಾಟೀ ಸವಾಲಿನಲ್ಲಿ ಶರತ್ ಕುಮಾರ್ ಶೆಟ್ಟಿ ಎಂಬವರು ವಿದ್ಯುತ್ ಸಂಪರ್ಕವನ್ನು ಮೊದಲಿಗೆ ವಿದ್ಯುತ್ ಕಂಬದಿಂದ ಕಡಿತಗೊಳಿಸಿ, ವಯರಿಂಗ್ ಆದ ನಂತರ ಆತನೇ ವಿದ್ಯುತ್ ಮರು ಸಂಪರ್ಕ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿ ಲಂಚದ ಹಣದ ಬೇಡಿಕೆ ಮಾಡಿದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಾಗಲಿ, ಆರೋಪಿ ಲಂಚದ ಹಣ ಸ್ವೀಕಾರ ಪಡೆದು ಬಗ್ಗೆ ಯಾವುದೇ ಸೂಕ್ತ ಸಾಕ್ಷ್ಯಧಾರಗಳು ನ್ಯಾಯಾಲಯಕ್ಕೆ ಸಲ್ಲಿಸದಿರುವುದರ ಬಗ್ಗೆ ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಸುದೀರ್ಘವಾದ ವಾದ ಮಂಡನೆ ಮಾಡಿದ್ದರು.
ಆರೋಪಿ ಪರ ವಕೀಲರು ವಾದವನ್ನು ಪುರಸ್ಕರಿಸಿದ ಗೌರವಾನ್ವಿತ ನ್ಯಾಯಾಲಯವು ಆರೋಪಿ ಪುರಂದರದಾಸ್ ರವರನ್ನು ಪ್ರಕರಣದಿಂದ ಖುಲಾಸೆಗೊಳಿಸಿರುತ್ತಾರೆ. ಆರೋಪಿಯ ಪರವಾಗಿ ಮಂಗಳೂರಿನ ನ್ಯಾಯವಾದಿ ರಾಮ್ ಪ್ರಸಾದ್ ಎಸ್. ರವರು ವಾದಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment