ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಂವಿಧಾನದ ಬೆಳಕಿನಡಿಯಲ್ಲಿ- ನಮ್ಮ ನಡೆ ಬೆಣಗಲ್ ಕಡೆಗೆ- ನಾಳೆ

ಸಂವಿಧಾನದ ಬೆಳಕಿನಡಿಯಲ್ಲಿ- ನಮ್ಮ ನಡೆ ಬೆಣಗಲ್ ಕಡೆಗೆ- ನಾಳೆ

ಉಡುಪಿ ನಿವೇಶನ ಹಗರಣ ಸಂತ್ರಸ್ತರ ಸಾತ್ವಿಕ ಪ್ರತಿಭಟನೆ 



ಮಾನ್ಯರೇ, ವಂದನೆಗಳು. ಈ ದೇಶಕ್ಕೊಂದು ಸಂವಿಧಾನ ಬೇಕೆಂದು ಚಿಂತಿಸಿ, ಅದರ ಮೊದಲ ಕರಡನ್ನು ಸಿದ್ಧಪಡಿಸಿದವರು ರಾಜನೀತಿಜ್ಞ, ಸಂವಿಧಾನತಜ್ಞ, ಬಹುಶ್ರುತ ವಿದ್ವಾಂಸ ದಿವಂಗತ ಶ್ರೀ ಬೆಣಗಲ್ ನರಸಿಂಗರಾಯರು. ಭಾರತದ ಸಂವಿಧಾನ ಸಂರಚನಾ ಸಮಿತಿಯ ಸಲಹೆಗಾರರಾಗಿದ್ದ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಭವ್ಯ, ಸದೃಢ ಸಂವಿಧಾನವನ್ನು ರೂಪಿಸಿದವರು ಡಾ.ಬಿ.ಆರ್. ಅಂಬೇಡ್ಕರರು. ಆ ಇಬ್ಬರು ಧೀಮಂತರು ಕಂಡ `ಸರ್ವರಿಗೂ ಸಮ ಪಾಲು, ಸಮಬಾಳು’ ಕನಸು ಇಂದೇನಾಗಿದೆ?! ಅದೊಂದು ದುರಂತ, ದುಃಸ್ವಪ್ನ. ಆಡಳಿತದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ; ನಿತ್ಯಜೀವನದ ಆರಾಧನಾರಂಗ, ಶಿಕ್ಷಣ, ಸಾಹಿತ್ಯ, ಮಾಧ್ಯಮ... ಹೀಗೆ ಎಲ್ಲ ಅವಯವಗಳು ಭ್ರಷ್ಟ, ಕ್ರೂರ, ಲಂಪಟ, ಅವೈಚಾರಿಕ ಮತ್ತು ಲಜ್ಜೆಗೇಡಿ ಜನರಿಂದ ತುಂಬಿ ಅವನತಿ ಕಂಡಿವೆ. ಆ ಎಲ್ಲೆಡೆ ಇರುವ ಬೆರಳೆಣಿಕೆಯ ಪ್ರಾಮಾಣಿಕ ವ್ಯಕ್ತಿಗಳು ಅಸಹಾಯಕರಾಗಿ ಮೌನವಾಗಿದ್ದಾರೆ, ಹತಾಶರಾಗಿದ್ದಾರೆ.  


ದೇಶ ಆತ್ಮವಿಲ್ಲದ ಕಳೇಬರದಂತಾಗಿದೆ. ಅಂತೆಯೇ, ಒಂದು ಕಾಲದಲ್ಲಿ ವಿದ್ಯೆ, ಶಿಕ್ಷಣ, ಸಂಸ್ಕøತಿ, ಮಾನವೀಯ ಮೌಲ್ಯ, ನ್ಯಾಯಪರತೆಯ ಸಾಕಾರರೂಪವಾಗಿದ್ದ ಬೆಣಗಲ್ ಮನೆ ಇಂದು ಇಲ್ಲವಾಗಿ ಆ ಜಾಗವೀಗ `ಸಾರಸ್ವತರಡಿ’ ಎಂಬ ಹಾಳುದಿಬ್ಬವಾಗಿ ನಮ್ಮ ನಾಡಿನ ಅವನತಿಯ ಸಂಕೇತವಾಗಿದೆ.

ರಾಜಪ್ರಭುತ್ವದಲ್ಲಿ `ಯಥಾ ರಾಜಾ ತಥಾ ಪ್ರಜಾ:’ ಎಂದಾದರೆ ಪ್ರಜಾಪ್ರಭುತ್ವದಲ್ಲಿ `ಯಥಾ ಪ್ರಜಾ ತಥಾ ರಾಜಃ’. ಪ್ರಜೆಗಳಾದ ನಾವು ಭ್ರಷ್ಟರಾಗಿಹೋಗಿರುವುದರಿಂದಲೇ ನಮ್ಮ ಪ್ರತಿನಿಧಿಗಳು ಭ್ರಷ್ಟರಾಗಿದ್ದಾರೆ. ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯ ಉದ್ಧಾರಕ್ಕೆ ಈಗ ಅಗತ್ಯವಿರುವುದು ಆತ್ಮಾವಲೋಕನ. ಆ ಆತ್ಮಶೋಧನೆಯ ಮೊದಲ ಹೆಜ್ಜೆ `ನಮ್ಮ ನಡೆ ಬೆಣಗಲ್ ಕಡೆಗೆ’.


ಆಗಸ್ಟ್ ದಿನಾಂಕ 15, 2021, ಸ್ವಾತಂತ್ರ್ಯೋತ್ಸವದ ದಿನ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬೆಳಿಗ್ಗೆ 7 ಗಂಟೆಗೆ ಉಡುಪಿಯ ಜಿಲ್ಲಾಧಿಕಾರಿಗಳ ಕಛೇರಿಯ (ಮಣಿಪಾಲ) ಮುಂಭಾಗದಲ್ಲಿರುವ ಡಾ.ಅಂಬೇಡ್ಕರ್ ಅವರ ಪ್ರತಿಮೆಯ ಎದುರಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿ ಬೆಣಗಲ್ಲಿಗೆ ಪಾದಯಾತ್ರೆ ಹೋಗಲಿದ್ದೇವೆ. ಮಣಿಪಾಲದಿಂದ ಬೆಣಗಲ್ಲಿಗೆ 26 ಕಿ.ಮೀ ದೂರ. ಸಾಯಂಕಾಲ 4 ಗಂಟೆಗೆ ಸಾರಸ್ವತರಡಿಯಲ್ಲಿ ಸಮಾವೇಶಗೊಂಡು ನಿರ್ಗಮಿಸಲಿದ್ದೇವೆ. ಸಭೆ, ಭಾಷಣ ಇತ್ಯಾದಿ ಇರುವುದಿಲ್ಲ. ವಿದ್ವಾಂಸರೂ ಚಿಂತಕರೂ ಆದ ಡಾ. ರೋಹಿಣಾಕ್ಷ ಶಿರ್ಲಾಲ್, ಶ್ರೀ ಅರವಿಂದ ಚೊಕ್ಕಾಡಿ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸಿ ಮುಕ್ತ ಮಾತುಕತೆಗೆ ಲಭ್ಯರಿರುತ್ತಾರೆ.


ಯಾರೆಲ್ಲಾ ಭಾಗವಹಿಸಬಹುದು? ಈ ದೇಶದ ಇಂದಿನ ದುಸ್ಥಿತಿಯ ಬಗ್ಗೆ ಕಳವಳಗೊಂಡಿರುವ ಯಾವ ನಾಗರಿಕರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು.



ಪಾದಯಾತ್ರೆಯ ಸ್ವರೂಪವೇನು?

`ನಮ್ಮ ನಡೆ ಬೆಣಗಲ್ ಕಡೆಗೆ’ ಎಂಬ ಫಲಕ ಬಿಟ್ಟರೆ ಬೇರೆ ಫಲಕ, ಬ್ಯಾನರ್ ಇರುವುದಿಲ್ಲ. ಯಾವ ರಾಜಕೀಯ ಪಕ್ಷಗಳ ಝೆಂಡಾ-ಅಜೆಂಡಾಗಳಿಗೆ ಆಸ್ಪದವಿಲ್ಲ. ಇಲ್ಲಿ ನೇತಾರರು, ವಿ.ಐ.ಪಿ.ಗಳು ಇರುವುದಿಲ್ಲ. ಯಾರೂ ಹಣ ಖರ್ಚು ಮಾಡಬಾರದು, ನೀಡಬಾರದು. ಯಾರೂ ಆಹಾರ, ತಿಂಡಿತೀರ್ಥ ಹಂಚುವಂತಿಲ್ಲ. ಇಲ್ಲಿ ಖರ್ಚು ಇರುವುದಿಲ್ಲ. ಹಾರಾರ್ಪಣೆ, ಸನ್ಮಾನ, ಘೋಷಣೆ ಯಾವುದಕ್ಕೂ ಅವಕಾಶ ಇರುವುದಿಲ್ಲ. ಇದು ರಾಜಕೀಯ ಶುದ್ಧೀಕರಣಕ್ಕಾಗಿ ರಾಜಕೀಯೇತರ ಪಾದಯಾತ್ರೆ.


ಸಂಘಟಕರು ಯಾರು?

ನಾವು ಉಡುಪಿಯಲ್ಲಿ ನ್ಯಾಯಯುತವಾಗಿ ಮನೆ ನಿವೇಶನಗಳನ್ನು ಖರೀದಿಸಿದರೂ ಕಂದಾಯ ಇಲಾಖೆ-ಭೂಮಾಫಿಯಾ ಮಾಡಿದ ವಂಚನೆಯಿಂದಾಗಿ ಮತ್ತು ನ್ಯಾಯಾಲಯದ ಮೌನದಿಂದ ನೊಂದ ಸಾಮಾನ್ಯ ಪ್ರಜೆಗಳು. ನಿವೇಶನ ಹಗರಣದ ಸಂತ್ರಸ್ತರಾದ ನಾವು ಪಾದಯಾತ್ರೆಗೆ ಚಾಲನೆ ನೀಡುತ್ತೇವೆ, ಸ್ಥೂಲವಾಗಿ ನಿರ್ದೇಶಿಸುತ್ತೇವೆ; ಆದರೆ ಜವಾಬ್ದಾರಿಯುತ ಪ್ರಜೆಗಳೇ ಅದನ್ನು ನೆರವೇರಿಸುತ್ತಾರೆ. ನಮ್ಮ ರಾಷ್ಟ್ರದ ಎಲ್ಲ ರಂಗಗಳು ಕಲುಷಿತಗೊಂಡಿರುವುದು ಸರ್ವವೇದ್ಯ. ಆದರೆ ನಮ್ಮ ಹೋರಾಟದ ಹಾದಿಯಲ್ಲಿ ನಾವು ನಮ್ಮ ಶಾಸನ, ಆಡಳಿತ ಮತ್ತು ನ್ಯಾಯದಾನದ ಪ್ರತಿ ಹೆಜ್ಜೆಯಲ್ಲಿಯೂ ಸಾಂವಿಧಾನಿಕ ಬಿಕ್ಕಟ್ಟನ್ನು ಗುರುತಿಸಿ ಕಳವಳಗೊಂಡಿದ್ದೇವೆ. ಹಾಗೆಯೇ, ಇದಾವುದರ ಪರಿವೇ ಇಲ್ಲದೆ ಪ್ರಜೆಗಳು ನಿರಮ್ಮಳವಾಗಿರುವುದನ್ನು ಕಂಡು ಗಾಬರಿಗೊಂಡಿದ್ದೇವೆ. ನಮ್ಮ ನಿವೇಶನದ ಹೋರಾಟವು ಪ್ರಜೆ ಮತ್ತು ರಾಷ್ಟ್ರದ ಆತ್ಮಾವಲೋಕನz Àಯಾತ್ರೆಯಾಗಿ, ಕಳೆದುಕೊಂಡ ಪ್ರಜ್ಞೆಯ ಹುಡುಕಾಟವಾಗಿ ವಿಕಾಸಹೊಂದಿದೆ.


ಬೆಣಗಲ್ ಸಂಜೀವರಾಯರು, ರಾಮರಾಯರು, ನರಸಿಂಗರಾಯರು, ರಾಮರಾಯರು, ಶಿವರಾಯರು, ಶ್ಯಾಮ್ ಬೆಣಗಲ್ ಮೊದಲಾದವರು ನಮ್ಮ ಬೆಣಗಲ್ಲಿನವರು ಎಂಬುದು ನಮಗೆ ಹೆಮ್ಮೆಯ ವಿಷಯ ಹೌದು. ಆದರೆ ಅದಕ್ಕಿಂತ ಮುಖ್ಯವಾಗಿ ಅದು ನಮ್ಮ ನೈತಿಕ ಜವಾಬ್ದಾರಿಯ ವಿಷಯ. ಇದು ನಮ್ಮ ಕರ್ತವ್ಯ.

ಬನ್ನಿ! ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ!


ನಮ್ಮ ನಡೆ ಬೆಣಗಲ್ ಕಡೆಗೆ

ಇಬ್ಬರು ಧೀಮಂತರು ಹಾಕಿಕೊಟ್ಟ ನೀತಿಮಾರ್ಗ, ನಮ್ಮ ಸಂವಿಧಾನ, ಅಲಕ್ಷ್ಯಕ್ಕೆ ಗುರಿಯಾಗುತ್ತಿರುವ ಈ ದಿನಗಳಲ್ಲಿ ನಮ್ಮ ನಡೆ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಪದತಲದಿಂದ ಆರಂಭಗೊಂಡು ಸಂವಿಧಾನಕ್ಕೆ ಬೀಜಾಂಕುರವಿತ್ತ ಬೆಣಗಲ್ ನರಸಿಂಗರಾಯರ ಜನ್ಮಸ್ಥಳ ಬೆಣಗಲ್ಲಿಗೆ – ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯ ಉಳಿವಿಗೆ.



• ಯಾತ್ರೆಯ ಯಾವ ಹಂತದಲ್ಲಿಯೂ, ಎಲ್ಲಿಯೂ ಸೇರಿಕೊಳ್ಳಬಹುದು ಮತ್ತು ನಿರ್ಗಮಿಸಬಹುದು. ಪಾದಯಾತ್ರೆಯಲ್ಲಿ ಭಾಗವಹಿಸುವವರು ತಮ್ಮ ಊರುಗಳಿಂದ ನೇರವಾಗಿ ಬೆಣಗಲ್ಲಿಗೆ ಬರಬಹುದು. 

• ಪಾದಯಾತ್ರೆಯ ಮಾರ್ಗದಲ್ಲಿ ಊಟ, ಉಪಾಹಾರಕ್ಕಾಗಿ ನಿರ್ದಿಷ್ಟ ಜಾಗಗಳನ್ನು ಗುರುತಿಸಲಾಗಿದೆ. ಪಾದಯಾತ್ರೆಯ ಮಾರ್ಗದಲ್ಲಿ 10-12 ನಿರ್ದಿಷ್ಟ ಜಾಗಗಳಲ್ಲಿ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ. 

• ಪ್ರತಿಯೊಬ್ಬ ಪಾದಯಾತ್ರಿಕ ತನ್ನ ಖರ್ಚನ್ನು ತಾನೇ ಭರಿಸುತ್ತಾನೆ. ಯಾವ ರಾಜಕೀಯ ಪಕ್ಷಗಳು, ಮತೀಯ ಸಂಸ್ಥೆಗಳು ಮತ್ತು ಸರಕಾರೇತರ ಸಂಘಟನೆಗಳು ಆಹಾರ, ತಿಂಡಿತೀರ್ಥ ಮತ್ತು ನೀರನ್ನು ಹಂಚುವಂತಿಲ್ಲ. 

• ಬೆಣಗಲ್ಲಿನಲ್ಲಿ ಊರ ನಾಗರಿಕರಿಂದ ಸರಳ ಆತಿಥ್ಯ ಸ್ವೀಕರಿಸಿ ಸಾಯಂಕಾಲ 5ರ ಒಳಗಾಗಿ ನಿರ್ಗಮಿಸುತ್ತೇವೆ.   

• ಈಗ ಮತ್ತು ಪಾದಯಾತ್ರೆಯ ಹೊತ್ತಿನಲ್ಲಿ ಯಾವುದೇ ವಿಚಾರಣೆಗಾಗಿ ಸಂಪರ್ಕಿಸಿ: 9141836255, 9449923793, 94839275580, 9448723355, 9880100901, 7090338883, 8722200333, 7338303718.


ಬನ್ನಿ! ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ!

- ಉಡುಪಿ ನಿವೇಶನ ಹಗರಣ ಸಂತ್ರಸ್ತರು

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post