ಉಜಿರೆ: ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅಮೆರಿಕಾದ ಎರಡು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪಿ.ಎಚ್.ಡಿ ಸಂಶೋಧನಾ ಅಧ್ಯಯನ ಕೈಗೊಳ್ಳಲು ಫೆಲೋಷಿಪ್ ಪಡೆದಿದ್ದಾರೆ.
ವಿಭಾಗದ 2017-19ನೇ ಸಾಲಿನಲ್ಲಿ ಆರ್ಗ್ಯಾನಿಕ್ ಕೆಮಿಸ್ಟ್ರ್ರಿ ವಿಭಾಗದಲ್ಲಿ ಸ್ನಾತಕೋತ್ತರ ವ್ಯಾಸಂಗ ಪೂರೈಸಿದ್ದ ಗಿರೀಶ್ ಗೌಡ ಆರ್ ಮತ್ತು ಕೆಮಿಸ್ಟ್ರಿ ವಿಭಾಗದಲ್ಲಿ ಅಧ್ಯಯನನಿರತರಾಗಿದ್ದ ಸಾಧನಾ ಭಟ್ ಫೆಲೋಷಿಪ್ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಡೆಯುವ ಜಿ.ಆರ್.ಇ ಮತ್ತು ಟಫೆಲ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದರು. ಆ ಮೂಲಕ ಅಮೆರಿಕಾದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಕೈಗೊಳ್ಳುವ ಶೈಕ್ಷಣಿಕ ಅರ್ಹತೆಯನ್ನು ಗಳಿಸಿಕೊಂಡಿದ್ದರು.
ಉನ್ನತ ಶಿಕ್ಷಣದ ಹಂತದಲ್ಲಿ ಇವರಿಬ್ಬರೂ ಪಡೆದ ಅಂಕಗಳು ಮತ್ತು ಸಂಶೋಧನಾ ಜ್ಞಾನ ಕೌಶಲ್ಯವನ್ನು ಪರಿಗಣಿಸಿ ಅಮೆರಿಕಾದ ಹ್ಯೂಸ್ಟನ್ ಮತ್ತು ಟೆನ್ನೆಸೆ ವಿಶ್ವವಿದ್ಯಾನಿಲಯಗಳು ಸಂಶೋಧನಾ ಫೆಲೋಷಿಪ್‍ಗೆ ಆಯ್ಕೆ ಮಾಡಿವೆ.
ಗಿರೀಶ್ ಗೌಡ ಆರ್ ಅವರು ಅಮೆರಿಕಾದ ಹ್ಯೂಸ್ಟನ್ ವಿಶ್ವವಿದ್ಯಾನಿಲಯದ ನ್ಯಾಚ್ಯುರಲ್ ಸೈನ್ಸಸ್ ಮತ್ತು ಮ್ಯಾಥಮೆಟಿಕ್ಸ್ ಕಾಲೇಜಿನಲ್ಲಿ ಆರ್ಗೆನೋ ಮೆಟ್ಯಾಲಿಕ್ ಕೆಮಿಸ್ಟ್ರಿಗೆ ಸಂಬಂಧಿಸಿದಂತೆ ಪಿ.ಎಚ್.ಡಿ ಸಂಶೋಧನಾ ಅಧ್ಯಯನ ಕೈಗೊಳ್ಳಲಿದ್ದಾರೆ. ಅಮೆರಿಕಾದಲ್ಲಿ ಪ್ರತಿಷ್ಠಿತವೆನ್ನಿಸಿದ ಮತ್ತೊಂದು ವಿಶ್ವವಿದ್ಯಾನಿಲಯವಾದ ಯುನಿವರ್ಸಿಟಿ ಆಫ್ ಟೆನೆಸೆಯಲ್ಲಿ ಸಾಧನಾ ಭಟ್ ಸಂಶೋಧನಾ ಅಧ್ಯಯನ ಕೈಗೊಳ್ಳಲಿದ್ದಾರೆ.
ಈ ಫೆಲೋಷಿಪ್ ಅವಧಿ ಐದು ವರ್ಷಗಳದ್ದು. ರಸಾಯನಶಾಸ್ತ್ರ ಅಕ್ಯಾಡೆಮಿಕ್ ವಲಯದಲ್ಲಿ ನಡೆಯುವ ಸಂಶೋಧನೆಗೆ ಜಾಗತಿಕ ಮನ್ನಣೆ ಇದೆ. ಸಂಶೋಧನಾ ಫಲಿತಾಂಶಗಳನ್ನು ಆಧರಿಸಿಕೊಂಡು ಮಹತ್ವದ ಆವಿಷ್ಕಾರಗಳು ನಡೆಯುತ್ತವೆ. ಅಂಥ ಆವಿಷ್ಕಾರಕ್ಕೆ ಬೇಕಾದ ವಿನೂತನ ಹೊಳಹುಗಳನ್ನು ರೂಪಿಸುವಲ್ಲಿ ಈ ಪಿ.ಎಚ್.ಡಿ ಸಂಶೋಧನೆ ಮಹತ್ವದ ಪಾತ್ರವಹಿಸುತ್ತದೆ. ಈ ಸಂಶೋಧನಾ ಫೆಲೋಶಿಪ್‍ಗೆ ಆಯ್ಕೆಯಾಗುವ ಮೂಲಕ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಅರ್ಗ್ಯಾನಿಕ್ ಕೆಮಿಸ್ಟ್ರಿ ಮತ್ತು ಕೆಮಿಸ್ಟ್ರಿ ವಿಭಾಗದ ಈ ಇಬ್ಬರೂ ವಿದ್ಯಾರ್ಥಿಗಳು ಮಹತ್ವದ ಶೈಕ್ಷಣಿಕ ಮುನ್ನಡೆ ಸಾಧಿಸಿದಂತಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment