ಧರ್ಮಸ್ಥಳ: ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆ, ಧರ್ಮಸ್ಥಳ ಇಲ್ಲಿ ಆನ್ಲೈನ್ ಮೂಲಕ ಭಿತ್ತಿ ಪತ್ರಿಕೆಯು ಆ.7ರಂದು ಶುಭಾರಂಭಗೊಂಡಿತು. ತಂತ್ರಜ್ಞಾನ ಬಳಕೆಯ ಈ ಸಮಯದಲ್ಲಿ "ಕನಸು" ಮತ್ತು "ಹೊಂಗನಸು" ಎಂಬ ಮಕ್ಕಳ ಸ್ವರಚಿತ ಬರಹಗಳನ್ನು ಒಳಗೊಂಡ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಡಾ. ಧನಂಜಯ ಕುಂಬ್ಳೆ, ಭಾಗವಹಿಸಿದ್ದರು. ಕವಿಗಳು, ಲೇಖಕರು, ವಿಮರ್ಶಕರೂ ಆಗಿರುವ ಪ್ರೊ. ಡಾ. ಧನಂಜಯ ಕುಂಬ್ಳೆ ಅವರು ಆನ್‌ಲೈನ್ ಮೂಲಕವೇ ಮಾತನಾಡುತ್ತಾ, "ಭಿತ್ತಿ ಪತ್ರಿಕೆಗಳು ಹೊಸ ಬರಹಗಾರರನ್ನು ರೂಪಿಸುವ ವೇದಿಕೆ. ಬಿತ್ತಿಪತ್ರಿಕೆಯೇ ಬರಹಗಾರರಿಗೆ ಮೊದಲ ಮೆಟ್ಟಿಲು. ಬರವಣಿಗೆಯೆಂಬುದು ಒಂದು ಕೃಷಿ ಇದ್ದಂತೆ. ನಮ್ಮೊಳಗಿರುವ ಪ್ರತಿಭೆ ಎಂಬ ಬೀಜ ಇದ್ದಕ್ಕಿದ್ದಂತೆ ಹುಟ್ಟುವುದಿಲ್ಲ. ಅದಕ್ಕಾಗಿ ಇನ್ನೊಂದು ಕವಿತೆ, ಲೇಖನಗಳನ್ನು ತನ್ಮಯತೆಯಿಂದ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು' ಎಂದರು.
ಪ್ರಾಸ, ಕ್ಲಿಷ್ಟಕರವಲ್ಲದ ಪದಗಳನ್ನು ಬಳಸಿ ಓದಿದ ವಿಷಯಗಳ ಭಾವವನ್ನು ರಚನಾತ್ಮಕ ಸೊಬಗಿನಿಂದ ಬರೆಯುವ ವಿಧಾನವನ್ನು ಬೆಳೆಸಿಕೊಳ್ಳಬೇಕು. ನಮ್ಮ ಮನಸ್ಸನ್ನು ಸುತ್ತಮುತ್ತ ತೆರೆದಿಡುತ್ತಾ, ಆನಂದಿಸುತ್ತಾ, ಆಸ್ವಾದಿಸುತ್ತಾ ಸೃಜನಾತ್ಮಕ ಬರವಣಿಗೆಯನ್ನು ಹೊರ ತರಲು ಪ್ರಯತ್ನಿಸಬೇಕು. ಜಗತ್ತನ್ನು ಇರುವ ದೃಷ್ಟಿಯಿಂದ ನೋಡುವುದರ ಬದಲು ಹೊಸ ಕಾಣ್ಕೆಯಿಂದ ನೋಡಿದರೆ ಕಾವ್ಯದ ಶಕ್ತಿ ಪ್ರಾಪ್ತವಾಗುತ್ತದೆ. ಬರವಣಿಗೆಯೆಂಬುದು ಪದಗಳ ಜೊತೆಗೆ ಆಟ. ಪದ ಸಂಪತ್ತೇ ಬರಹಗಾರನ ಸ್ನೇಹಿತ ಎನ್ನುತ್ತಾ, ಬೇಂದ್ರೆಯವರ "ಮೂಡಲ ಮನೆಯ ಮುತ್ತಿನ ನೀರಿನ", ಕುವೆಂಪುರವರ "ದೇವರು ರುಜು ಮಾಡಿದನು", ಪಂಜೆ ಮಂಗೇಶರಾಯರ "ನಾಗರಹಾವು ಹಾವೊಳು ಹೂವೆ" ಎಂಬ ಕವನದ ಸಾಲುಗಳಲ್ಲಿ ಅಡಗಿರುವ ಧ್ವನಿಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಒಳ್ಳೆಯ ಬರಹಗಾರರಾಗಿ ಒಳ್ಳೆಯ ಕೃತಿಗಳನ್ನು ನೀಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಅದಕ್ಕಾಗಿ ಶಾಲೆಯಲ್ಲಿ ನೀಡುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಜಗತ್ತನ್ನೇ ನೋಡುವ ಕಿಂಡಿಯಾದ ಮೊಬೈಲ್ ಮಾಯಾಜಾಲದಲ್ಲಿ ಸಿಲುಕಿ ಸಮಯವನ್ನು ಹಾಳು ಮಾಡದಿರಿ ಎಂಬ ಸಂದೇಶವನ್ನು ನೀಡುತ್ತಾ, ನಮ್ಮಲ್ಲಿಯೂ ಕವನದ ಹುಟ್ಟಿಗೆ ಕಾರಣವಾಗುವಂತೆ ವಿಚಾರಧಾರೆಗಳನ್ನು ಸುರಿಸಿದರು. ಭಿತ್ತಿಪತ್ರಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ ಪರಿಮಳಾ ಎಂವಿ ಇವರು, ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಬರಹಗಾರರಾಗಿ ಹೊರಹೊಮ್ಮಿ ಎಂದು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಅತಿಥಿಗಳಾದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಸೋಮಶೇಖರ ಶೆಟ್ಟಿ ಮತ್ತು ಪತ್ರಕರ್ತರಾದ ಲಕ್ಷ್ಮೀ ಮಚ್ಚಿನ ಇವರು ಕಾರ್ಯಕ್ರಮದ ಔಚಿತ್ಯವನ್ನು ಶ್ಲಾಘಿಸಿ, ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿ ಎಂದು ಆಶಿಸಿದರು.
ಎಸ್.ಡಿ.ಎಂ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು, ಪೋಷಕ ವೃಂದದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹತ್ತನೇ ತರಗತಿಯ ಅಭಿರಾಮ್ ಮತ್ತು ಪ್ರೀತಮ್ ಅವರ ಪ್ರಾರ್ಥನೆಯೊಂದಿಗೆ ಮೊದಲುಗೊಂಡು ಸಹಶಿಕ್ಷಕಿ ಶ್ರೀಮತಿ ದಿವ್ಯ. ಎನ್ ಇವರ ಸ್ವಾಗತಿಸಿದರು. 9ನೇ ತರಗತಿಯ ಕುಮಾರಿ ಸಂಜನಾ ಇವರ ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕಿ ಶ್ರೀಮತಿ ಕಾವ್ಯ ಜ್ಞಾನೇಶ್ ಇವರ ತಾಂತ್ರಿಕ ನಿರ್ದೇಶನದಲ್ಲಿ ಆಯೋಜನೆಗೊಂಡಿತು. 10ನೇ ತರಗತಿಯ ಕುಮಾರಿ ಪುಣ್ಯಶ್ರೀ ಇವರು ನಿರೂಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment