ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಇವರ ನಿರ್ದೇಶನದ ಮೇರೆಗೆ, ಉಡುಪಿ, ಕುಂದಾಪುರ, ಮತ್ತು ಕಾರ್ಕಳ ನ್ಯಾಯಾಲಯಗಳ ಆವರಣದಲ್ಲಿ ಮೆಗಾ ಲೋಕ್ ಅದಾಲತನ್ನು ಬರುವ ಅಗಸ್ಟ್ 14ರಂದು ಆಯೋಜಿಲಾಗಿದೆ.
ಈ ಬಗ್ಗೆ ಸಾರ್ವಜನಿಕರಿಗೆ ಪೂರ್ವ ಮಾಹಿತಿ ಒದಗಿಸುವ ಕಾರ್ಯಕ್ರಮವು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಆಯೋಜನೆಯಲ್ಲಿ ಶೋಕಾ ಮಾತಾ ಚರ್ಚಿನ ಎದುರಿನ ಕವಿ ಮುದ್ದಣ ಮಾರ್ಗದಲ್ಲಿ ಸೋಮವಾರ ನಡೆಯಿತು. ಜಾಗೃತಿ ಜಾಥವು ಶೋಕಾಮಾತಾ ಚರ್ಚ್ ಇಲ್ಲಿಂದ, ಕವಿ ಮುದ್ದಣ ಮಾರ್ಗದ ಮೂಲಕ ಸಾಗಿಬಂದು, ಚಿತ್ತರಂಜನ್ ಸರ್ಕಲ್ ಬಳಿ ಸಮಾಪನಗೊಂಡಿತು. ಸಾರ್ವಜನಿಕರಿಗೆ ಮಾಹಿತಿ ಕರಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಧೀಶೆ ಶರ್ಮಿಳಾ ಎಸ್ ಅವರು, ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಪರಿಹಾರ ಪಡೆದುಕೊಳ್ಳಬಹುದು. ಹಾಗೂ ರಾಜೀ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾದ ಪ್ರಕರಣಗಳ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರು ಕಾನೂನು ಸೇವೆಗಳ ಪ್ರಾಧಿಕಾರದ ಲೋಕ ಅದಾಲತ್ ಕಾರ್ಯಕ್ರಮದ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ಕರೆ ನೀಡಿದರು. ಶೋಕಾಮಾತಾ ಧರ್ಮಕೇಂದ್ರದ ಧರ್ಮ ಗುರುಗಳಾದ ವಂದನೀಯ ಚಾರ್ಲ್ಸ್ ಮಿನೇಜಸ್ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಕೆ.ಅಮೃತಕಲಾ, ಫಾ. ವಿಲಿಯಂ ಮಾರ್ಟಿಸ್, ನಾಗರಿಕ ಸಮಿತಿಯ ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಸದಸ್ಯ ರಾಜೇಶ್ ಕಾಪು, ಹಾಗೂ ಶೋಕಾಮಾತಾ ಚರ್ಚಿನ ಆಡಳಿತ ಮಂಡಳಿಯ ಸದಸ್ಯರು, ಹರ್ಷ ಮಳಿಗೆಯ ಸಿಬ್ಬಂದಿಗಳು, ಆದರ್ಶ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಪ್ರಾಸ್ತವನೆಗೈದರು. ಕೆ. ಬಾಲಗಂಗಾಧರ ರಾವ್ ವಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Post a Comment