ಬೆಂಗಳೂರು: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅತಿ ರಂಜನೀಯವಾದ ಕೃಷ್ಣನ ಬಾಲ ಲೀಲೆಗಳು ಪ್ರತಿಯೊಬ್ಬರನ್ನು ಆಕರ್ಷಿಸುತ್ತಾ ಬಂದಿರುವುದು ಭಾಗವತದ ಹಿರಿಮೆ. ಪ್ರತಿಯೊಬ್ಬ ತಂದೆತಾಯಿಗಳಿಗೆ ತಮ್ಮ ಮಕ್ಕಳನ್ನು `ಕೃಷ್ಣ’ನ ವೇಷದಲ್ಲಿ ನೋಡುವುದೇ ಒಂದು ಸಂತಸ. ಇಂಥ ಅವರ ಕನಸನ್ನು ನನಸಾಗಿಸುವುದಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿಯೇ ಸೂಕ್ತ ಸಮಯ.
ಕೃಷ್ಣನ ಕಥೆಯನ್ನಾಧರಿತ ನೃತ್ಯ, ನಾಟಕ, ರಸಪ್ರಶ್ನೆ, ಚಿತ್ರ ಪ್ರದರ್ಶನ, ಮೊಸರು ಕುಡಿಕೆ ಒಡೆಯುವುದು ಮುಂತಾದ ಹತ್ತು ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳನ್ನು ಪೋಷಕರನ್ನು ರಂಜಿಸಲು ಹಲವಾರು ಸಂಘಸಂಸ್ಥೆಗಳು ಹಾಗೂ ಮಠಮಾನ್ಯಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಕರೋನಾ ಭಯದಿಂದ ಕಂಗೆಟ್ಟಿರುವ ಮಕ್ಕಳಲ್ಲಿ ನವಉತ್ಸಾಹವನ್ನು ತುಂಬುವ ನಿಟ್ಟಿನಲ್ಲಿ ಶ್ರೀ ವಿವೇಕಾನಂದ ಕಲಾ ಕೇಂದ್ರದವರು ಈ ಬಾರಿ ಕೃಷ್ಣನ ಕುರಿತು ರಸಪ್ರಶ್ನೆ, ಕೃಷ್ಣ ಲೇಖನ ಹಾಗೂ ಕೃಷ್ಣನ ವೇಷಭೂಷಣ ಸ್ಪರ್ಧೆಗಳನ್ನು 8 ರಿಂದ 14 ವರ್ಷದ ಮಕ್ಕಳಿಗೆ ಉಚಿತವಾಗಿ ಆಯೋಜಿಸಿ, ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ವಿಶೇಷ ಬಹುಮಾನಗಳನ್ನು ನೀಡಿ ಅವರಲ್ಲಿ ನವಚೈತನ್ಯವನ್ನು ಮೂಡಿಸಿದ್ದು ವಿಶೇಷವಾಗಿತ್ತು.
ಸಾಂಸ್ಕೃತಿಕ ಪರಂಪರೆಗಳ ಮಹತ್ವದ ಹಿನ್ನೆಲೆಯೊಂದಿಗೆ ನೀಡುವ ಶಿಕ್ಷಣ ಮಕ್ಕಳಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಮೂಡಿಸುತ್ತದೆ. ಶಿಕ್ಷಣ ಸಂಸ್ಥೆಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಒಟ್ಟಾಗಿ ಮಕ್ಕಳ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಅಗತ್ಯ ಇಂದು ಅನಿವಾರ್ಯವಾಗಿದೆ, ಇದು ಹಲವಾರು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಅಭಿಮತವೂ ಆಗಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶ್ರೀ ವಿವೇಕಾನಂದ ಕಲಾ ಕೇಂದ್ರದವರ ಪರಿಶ್ರಮವನ್ನು ಶ್ಲಾಘಿಸಿ, 'ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಲ್ಲಿ ಇನ್ನೂ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಬೇಕೆಂದು ಸೋಮನಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಿವಶಂಕರ್‌ರವರು' ಶ್ರೀ ವಿವೇಕಾನಂದ ಕಲಾಕೇಂದ್ರದ ಗೌ|| ಕಾರ್ಯದರ್ಶಿ ಡಾ.ಶ್ರೀ. ವಿ. ನಾಗರಾಜ್ ಅವರನ್ನು ವಿನಂತಿಸಿಕೊಂಡರು. ನೆರೆದಿದ್ದ ಪೋಷಕರು ಒಟ್ಟಾಗಿ ಇದಕ್ಕೆ ಸಮ್ಮತಿಸಿದರು.
ಮಕ್ಕಳಿಗೆ ಶ್ರೀಕೃಷ್ಣನ ಕಥೆಯನ್ನು ಸಾದರಪಡಿಸುವ ನಿಟ್ಟಿನಲ್ಲಿ ಡಾ|| ಶ್ವೇತಾ ರವರು ೪೫ ನಿಮಿಷಗಳ ತಮ್ಮ ಏಕ ವ್ಯಕ್ತಿ ನೃತ್ಯಪ್ರದರ್ಶನದಲ್ಲಿ 'ಕವಿ ಕಂಡ ಕೃಷ್ಣ' ನೃತ್ಯನಾಟಕವನ್ನು ಸಾದರಪಡಿಸಿದುದು ವಿಶೇಷವಾಗಿತ್ತು. ಮಾಸ್ಟರ್ ದೈವಿಕ್ ಅರ್ಜುನನ್ನಾಗಿ ನೀಡಿದ `ಭಗವದ್ಗೀತೆ’ ನೃತ್ಯ ಬೋಧಪ್ರದವಾಗಿ ಮಕ್ಕಳಿಗೆ ಸ್ಫೂರ್ತಿ ನೀಡಿತು. ಇದು ಅವರಲ್ಲಿದ್ದ ಸುಪ್ತ ಪ್ರತಿಭೆಗೆ ನವ ಅವಕಾಶವನ್ನು ಕಲ್ಪಿಸಿಕೊಟ್ಟಿತೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪರವಾಗಿ ಆಗಮಿಸಿದ್ದ ಶ್ರೀಮತಿ ಮಂಜುಳ ರವರು ಕಲಾಕೇಂದ್ರವರನ್ನು ಅಭಿನಂದಿಸಿದರು.
ಸುಗಮಸಂಗೀತ ಹಾಗೂ ಹಿನ್ನೆಲೆ ಗಾಯನದಲ್ಲಿ ಪ್ರಖ್ಯಾತರಾಗಿರುವ `ಕರ್ನಾಟಕ ಕಲಾಶ್ರೀ’, `ರಾಜ್ಯಪ್ರಶಸ್ತಿ’, ಪುರಸ್ಕೃತೆ ಶ್ರೀಮತಿ ಎಂ. ಕೆ. ಜಯಶ್ರೀ ರವರಿಂದ ಸಿದ್ಧಪಡಿಸಿದ ನೃತ್ಯರೂಪಕ `ಕವಿ ಕಂಡ ಕೃಷ್ಣ’ ದ ಏಕವ್ಯಕ್ತಿ ನೃತ್ಯಪ್ರದರ್ಶನವನ್ನು ಮನಸಾರೆ ಕೊಂಡಾಡಿದರು.
ಇಂತಹ ಹತ್ತು ಹಲವಾರು ವೈವಿಧ್ಯಮಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳನ್ನು ಹಾಗೂ ಪೋಷಕರನ್ನು ರಂಜಿಸಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕಲಾ ಕೇಂದ್ರದವರನ್ನು ವಿನಂತಿಸಿಕೊAಡರು. ಒಟ್ಟಾರೆ ಇದೊಂದು ಯಶಸ್ವಿಯಾದ ಕಾರ್ಯಕ್ರಮವಾಗಿತ್ತು.
- ಸೌಮ್ಯ ಜಗನ್ನಾಥ್
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment