ಪ್ರತಿಷ್ಠಿತ "ಬಿ ಜಿ ಮೋಹನ್ ದಾಸ್ ಪ್ರಶಸ್ತಿ"
ಮಂಗಳೂರು: ಪ್ರಪ್ರಥಮ ಬಾರಿಗೆ ಕನ್ನಡದ ಡಿಜಿಟಲ್ ಮೀಡಿಯಾದ ವರದಿಗಾರಿಕೆಗೆ ನೀಡಲಾಗುವ ಪ್ರತಿಷ್ಠಿತ "ಬಿ ಜಿ ಮೋಹನ್ ದಾಸ್ ಪ್ರಶಸ್ತಿ"ಗೆ ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ ಆಯ್ಕೆಯಾಗಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಗಲ್ಪ್ ದೇಶದಲ್ಲಿ ಮೊದಲ ಕನ್ನಡ ವೆಬ್ ಸೈಟ್ ಗಲ್ಫ್ ಕನ್ನಡಿಗ.ಕಾಮ್ ಮೂಲಕ ಆರಂಭಿಸಿದ ಬಿ ಜಿ ಮೋಹನ್ ದಾಸ್ ಅವರ ಸ್ಮರಣಾರ್ಥ ನಿರತ ಸಾಹಿತ್ಯ ಸಂಪದ, ತುಂಬೆ ಮತ್ತು ಗಲ್ಪ್ ಕನ್ನಡಿಗ ಸಂಸ್ಥೆ ಈ ಪ್ರಶಸ್ತಿ ನೀಡುತ್ತಿದೆ.
ವಾರ್ತಾಭಾರತಿ ಡಿಜಿಟಲ್ ಆವೃತ್ತಿಯಲ್ಲಿ ಪ್ರಕಟವಾದ ಬಂಟ್ವಾಳ ವರದಿಗಾರ ಇಮ್ತಿಯಾಝ್ ಶಾ ತುಂಬೆ ಅವರ "ನೆಟ್ವರ್ಕ್ ಬಿಸಿನೆಸ್ ಎಂಬ ಮೋಸದ ಜಾಲ" ಎಂಬ ವಿಶೇಷ ವರದಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಬಿ ಜಿ ಮೋಹನ್ ದಾಸ್ ಅವರ ಮೊದಲ ಪುಣ್ಯಸ್ಮರಣೆ ದಿನವಾದ ಆಗಸ್ಟ್ 31 ರಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಪ್ರಶಸ್ತಿ ವಿಜೇತ ಇಮ್ತಿಯಾಝ್ ಶಾ ಪರಿಚಯ:
ಇಮ್ತಿಯಾಝ್ ಶಾ ತುಂಬೆ ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ವರದಿಗಾರರಾಗಿದ್ದಾರೆ. 1990ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಂಬ್ಲಮೊಗರು ಗ್ರಾಮದ ದೋಡ ಎಂಬ ಹಳ್ಳಿಯಲ್ಲಿ ಡಿ.ಝುಬೈರ್ ಮತ್ತು ಆಯಿಷಾ ದಂಪತಿಯ ಪುತ್ರನಾಗಿ ಜನಿಸಿದ ಇವರು ಅಂಬ್ಲಮೊಗರು ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಉಳ್ಳಾಲದ ಅಳೇಕಲ ಮದನಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಅಧ್ಯಯನ ಮಾಡಿದ್ದಾರೆ. ಬಳಿಕ ತಲಪಾಡಿ ಕೆ.ಸಿ.ರೋಡಿನ ಝೀನತ್ ಎಜುಕೇಶನ್ ಟ್ರಸ್ಟ್ ನ ಸ್ಕೂಲ್ ಆಫ್ ಕುರ್'ಆನಿಕ್ ಸ್ಟಡೀಸ್ ಕಾಲೇಜಿನಲ್ಲಿ ಎರಡು ವರ್ಷ ಅಫ್ಝಲುಲ್ ಉಲೆಮಾ ಪ್ರಿಲಿಮಿನರಿ ಕೋರ್ಸ್ ವ್ಯಾಸಂಗದ ಬಳಿಕ ಮಂಗಳೂರಿನ ಸ್ಟಾರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಮಂಗಳೂರಿನ ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದ್ದಾರೆ.
2011ರಲ್ಲಿ ವಾರ್ತಾಭಾರತಿ ದಿನ ಪತ್ರಿಕೆಗೆ ಟ್ರೈನಿ ಉಪ ಸಂಪಾದಕನಾಗಿ ಸೇರ್ಪಡೆಯಾದ ಇವರು ಬಳಿಕ ವಾರ್ತಾಭಾರತಿ ಪತ್ರಿಕೆಯಲ್ಲಿ ಉಪ ಸಂಪಾದಕನಾಗಿ, ಶಿವಮೊಗ್ಗ, ಬೆಂಗಳೂರು ಆವೃತ್ತಿಯ ಮುಖ್ಯಸ್ಥನಾಗಿ, ವರದಿಗಾರನಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಉಂಟಾದ ಭೀಕರ ಪ್ರವಾಹ, ಭೂ ಕುಸಿತದಿಂದ ಹಲವು ಸಾವು ನೋವು ಸಂಭವಿಸಿದ್ದು ಈ ವೇಳೆ ಕೊಡಗು ಜಿಲ್ಲೆಯಲ್ಲಿ 10 ದಿನಗಳ ಕಾಲ ಪ್ರವಾಸ ಮಾಡಿ ಅಲ್ಲಿನ ಜನರ ಸಂಕಷ್ಟಗಳ ಬಗ್ಗೆ ಅದ್ಯಯನ ನಡೆಸಿ ಮಾಡಿದ್ದ 'ಕೊಡುವ ಕೈಗಳಿಗಾಗಿ ಕಾಯುತ್ತಿದೆ ಕೊಡಗು' ವಿಶೇಷ ಮಾನವೀಯ ವರದಿಗೆ 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಪತ್ರಕರ್ತರಿಗೆ ನೀಡುವ ಪ್ರತಿಷ್ಠಿತ 'ಪದ್ಯಾಣ ಗೋಪಾಲಕೃಷ್ಣ' (ಪಗೋ) ಲಭಿಸಿದೆ. 2020ರಲ್ಲಿ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ರಾಜ್ಯ ಮಟ್ಟದ 'ಸ್ಕೂಪ್' ಪ್ರಶಸ್ತಿ ಯು ಇವರಿಗೆ ಲಭಿಸಿದೆ.
ಪ್ರಸಕ್ತ ವಾರ್ತಾಭಾರತಿ ದಿನ ಪತ್ರಿಕೆಯ ಬಂಟ್ವಾಳ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment