ಸಾಂದರ್ಭಿಕ ಚಿತ್ರ
ಅಂದ್ರಾಣ ಪೇಪರ್ ಬಿಡಿಸಿ ಓದುತ್ತಾ ಇಪ್ಪಗ ಶ್ಯಾಮರಾಯರಿಂಗೆ "ವರ ಬೇಕಾಗಿದ್ದಾರೆ" ಹೇಳುವ ಕಾಲಮ್‌ನ ಅಡಿಲಿ ಇದ್ದ ಬರಹ ಕಣ್ಣಿಂಗೆ ಬಿದ್ದತ್ತು. 'ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ ಅರುವತ್ತು ವರ್ಷದ ಅವಿವಾಹಿತ ಮಹಿಳೆಗೆ ಅರುವತ್ತೈದರ ಒಳಗಿನ ಆರೋಗ್ಯವಂತ ವರ ಬೇಕಾಗಿದ್ದಾರೆ' ಹೇಳುವ ಜಾಹೀರಾತು.
ನಾಲ್ಕು ವರ್ಷದ ಹಿಂದೆ ಹೆಂಡತಿಯ ಕಳಕ್ಕೊಂಡ ಮೇಲೆ ರಾಯರು ಒಂಟಿ. ಅಡಿಗೆಗೆ ಹೇಳಿ ರಾಮಣ್ಣನ ಬಪ್ಪಲೆ ಮಾಡಿದ ಕಾರಣ ಒಂದು ಹೊತ್ತು ಅಡಿಗೆ ಮಾಡಿ ಮಡುಗಿಕ್ಕಿ ಹೋದರೆ ಮತ್ತೆ ಅವಬಪ್ಪದು ಮರುದಿನವೇ. ಅಲ್ಲಿವರೆಗೆ ಶ್ಯಾಮರಾಯರು ಒಬ್ಬನೇ ಹೊತ್ತು ಕಳವದು. ಮನಸ್ಸಿಂಗೆ ಒಂಟಿತನ ತುಂಬಾ ಕಾಡುತ್ತು. ಇದ್ದ ಒಬ್ಬನೇ ಮಗ ಇಂಜಿನಿಯರಿಂಗ್ ಮುಗುಶಿ ಟ್ರೈನಿಂಗ್ ಹೇಳಿ ಅಮೇರಿಕಕ್ಕೆ ಹೋದವ ಅಲ್ಲೇ ಅನಿವಾಸಿ ಭಾರತೀಯ ಕೂಸೊಂದರ ಮದುವೆಯಾಗಿ ಅಲ್ಲಿಯಾಣ ಪ್ರಜೆಯೇ ಆಗಿಹೋದ.
ಅಬ್ಬೆ ತೀರಿಗೊಂಡಪ್ಪಗ ಬಂದು ಕಾರ್ಯಂಗಳ ಮುಗುಶಿ ತಿರುಗಿ ಅಮೇರಿಕಾಕ್ಕೆ ಹೋಪಗ ಶ್ಯಾಮರಾಯರನ್ನೂ ಕರಕ್ಕೊಂಡು ಹೋದ. ಒಂದೆರಡು ತಿಂಗಳು ಅಪ್ಪಗಲೇ ರಾಯರಿಂಗೆ ಮಣ್ಣಿನ ಸೆಳೆತ. ವಾಪಸು ಬಂದವು ಒಬ್ಬನೇ ಆದರೂ ಆನು ಇಲ್ಲೇ ಇಪ್ಪದು ಹೇಳಿ ತೀರ್ಮಾನ ತೆಕ್ಕೊಂಡವು.
ಇಷ್ಟೆಲ್ಲಾ ಆಗಿ ವರ್ಷ ನಾಲ್ಕಾತು. ಒಂದರಿಯೂ ಮಗ ಬಯ್ಂದನೇ ಇಲ್ಲೆ. ಅಂಬಗಂಬಗ ಫೋನ್ ಮಾಡಿಗೊಂಡಿದ್ದವಂಗೆ ಈಗೀಗ ಅದಕ್ಕೊ ಪುರುಸೊತ್ತಿಲ್ಲೆ.ರಾಯರೇ ಒಂದೊಂದರಿ ಫೋನ್ ಮಾಡಿರೂ 'ಆನೀಗ ಕೆಲಸಲ್ಲಿದ್ದೆ ಮತ್ತೆ ಮಾಡ್ತೆ' ಹೇಳಿ ಉತ್ತರ.
ಜಾಹೀರಾತು ನೋಡಿಯಪ್ಪಗ ರಾಯರಿಂಗೆ 'ಆನೀಗ ಹೇಂಗಾದರೂ ಒಬ್ಬಂಟಿ. ಎನಗೂ ಕಷ್ಟ ಸುಖ ಹಂಚಿಗೊಂಬಲೆ ಒಂದು ಜೀವ ಜೊತೆಗಿದ್ದರೆ ಅಕ್ಕು 'ಹೇಳುವ ಭಾವನೆ ಮೂಡಿತ್ತು. ಹಾಂಗೆ ಅದರಲ್ಲಿಪ್ಪ ನಂಬರಿಂಗೆ ಫೋನ್ ಮಾಡಿ ಮರುದಿನ 'ಹೋಟೆಲ್ ದ್ವಾರಕ'ಲ್ಲಿ ಭೇಟಿ ಅಪ್ಪದು ಹೇಳಿ ತೀರ್ಮಾನ ಮಾಡಿದವು.
ಹೇಳಿದ ಸಮಯಕ್ಕೆ ಸರಿಯಾಗಿ 'ದ್ವಾರಕಾ' ಹೋಟ್ಲಿಂಗೆ ಶ್ಯಾಮರಾಯರು ಬಂದವು. ಫೋಟೋ ನೋಡಿದ ಕಾರಣ ನಿರ್ಮಲಾ ಆರು ಹೇಳಿ ಕಂಡು ಹಿಡಿವಲೆ ಎಂತ ಕಷ್ಟವೂ ಆಯ್ದಿಲ್ಲೆ.
"ನಮಸ್ಕಾರ ಆನು ಶ್ಯಾಮರಾಯ. ನಿಂಗೋ ನಿರ್ಮಲಾ ಅಲ್ಲದಾ" ಹೇಳಿಯಪ್ಪಗ" ಹಾ ಅಪ್ಪು ಬನ್ನಿ ಇಲ್ಲಿ ಕೂದುಗೊಳ್ಳಿ" ಹೇಳಿ ಅದರ ಎದುರಾಣ ಚಯರ್ ತೋರ್ಸಿತ್ತು. ಅಲ್ಲೇ ಕೂದ ರಾಯರು ಮಾತು ಶುರುಮಾಡಿದವು.
"ನೋಡಿ ನಿರ್ಮಲಾ ಆನು ನಿಂಗೊ ಕೊಟ್ಟ ಜಾಹೀರಾತು ನೋಡಿದೆ.ಆನು ಕೂಡಾ ಒಬ್ಬನೇ ಇಪ್ಪದು. ಬ್ಯಾಂಕ್ ಉದ್ಯೋಗಂದ ನಿವೃತ್ತ. ಎನ್ನ ಅರ್ಧಾಂಗಿ ತೀರಿಗೊಂಡು ನಾಲ್ಕು ವರ್ಷಾತು. ಎನ್ನ ಕಷ್ಟ ಸುಖಂಗಳ ಹಂಚಿಗೊಂಬಲೆ ಆರೂ ಇಲ್ಲದ್ದೆ ತುಂಬಾ ಸಂಕಟ ಅನುಭವಿಸಿದ್ದೆ. ಆರಾದರೂ ಜೊತೆಗಿದ್ದರೆ ಹೇಳಿ ಹಂಬಲಿಸಿಗೊಂಡಿತ್ತೆ. ನಿಂಗಳ ಜಾಹೀರಾತು ನೋಡಿಯಪ್ಪಗ ನಾವಿಬ್ರೂ ಒಂದೇ ದೋಣಿಯ ಪಯಣಿಗರು ಅನಿಸಿತ್ತು. ಹಾಂಗೆ ನಿಂಗೊಗೆ ಒಪ್ಪಿಗೆ ಇದ್ದರೆ ನಾವಿಬ್ರೂ ಮದುವೆ ಆಗಿ ಜೊತೆಗಿಪ್ಪ. ಬಂಧು ಬಳಗದವು ಒಬ್ಬೊಬ್ಬ ಒಂದೊಂದು ಹೇಳುಗು. ತೊಂದರಿಲ್ಲೆ ಅವು ಆರುದೇ ನಮ್ಮ ಕಷ್ಟಕ್ಕೆ ಬತ್ತವಿಲ್ಲೆ.
"ಅದು ಸರಿ ರಾಯರೇ.ಎನಗೆ ಆರತ್ರೂ ಕೇಳ್ಲೆ ಹೇಳಿಲ್ಲೆ. ನಾಲ್ಕು ಜನ ತಂಗೆಕ್ಕೊ ಇದ್ದರೂ ಎನಗಾರೂ ಇಲ್ಲೆ. ಈ ಪ್ರಾಯಲ್ಲಿ ಮದುವೆ ಹೇಳಿರೆ ಎಲ್ಲರೂ ನೆಗೆ ಮಾಡುವವೇ ಇಪ್ಪದು. ಆದರೆ ಎನಗೆ ದೈಹಿಕವಾಗಿ ಯಾವ ಕಾಮನೆಯೂ ಇಲ್ಲೆ. ಆದರೆ ಮಾನಸಿಕವಾಗಿ ಒಂದು ಆಸರೆ ಬೇಕು ಹೇಳಿ ಅನ್ಸಿತ್ತು. ಅದು ನಿಂಗೊ ಆವುತ್ತಿ ಹೇಳಿಯಾದರೆ ಎನ್ನ ಅಭ್ಯಂತರ ಇಲ್ಲೆ. ನಾಳೆಯೇ ಕೆಲವು ಜನ ಹಿತೈಷಿಗಳ ಸಮ್ಮುಖಲ್ಲಿ ದೇವಸ್ಥಾನಲ್ಲಿ ಮದುವೆ ಅಪ್ಪ ಆಗದ" ಹೇಳಿಯಪ್ಪಗ ರಾಯರು ಸಮ್ಮತಿ ಸೂಚಿಸಿದವು. "ನಿಂಗೊ ತಪ್ಪು ತಿಳಿಯೆಡಿ. ಆನು ಕುತೂಹಲಕ್ಕೆ ಕೇಳ್ತಾ ಇದ್ದೆ. ನಿಂಗೊ ಇದುವರೆಗೆ ಮದುವೆ ಮಾಡಿಗೊಂಡಿದಿಲ್ಲಿ ಏಕೆ?"ರಾಯರು ಕೇಳಿಯಪ್ಪಗ ನಿರ್ಮಲಾ ನಿಧಾನವಾಗಿ ಅದರ ಕಥೆ ಹೇಳುಲೆ ಶುರುಮಾಡಿತ್ತು.
ರಾಮಭಟ್ಟ್ರಿಂಗೆ ನಾಲ್ಕು ಜನ ಕೂಸುಗೊ. ಅದರಲ್ಲಿ ಹಿರಿಮಗಳು ನಿರ್ಮಲಾ. ಒಂದರಹಿಂದೆ ಒಂದು ಕೂಸುಗಳೇ ಹುಟ್ಟಿಯಪ್ಪಗ ರಾಮಭಟ್ಟ್ರಿಂಗೆ ತಲೆಬೆಶಿ ಆಗಿ ಮನೆಬಿಟ್ಟು ಹೋದವು ಎಷ್ಟು ದಿನ ಆದರೂ ತಿರುಗಿ ಬಯಿಂದವೇ ಇಲ್ಲೆ. ಅಪ್ಪನ ದಾರಿ ಕಾದು ಬಾರದ್ದಿಪ್ಪಗ ಅದೇ ಕೊರಗಿಲಿ ಹಾಸಿಗೆ ಹಿಡುದತ್ತು.ಅಷ್ಟಪ್ಪಗ ನಿರ್ಮಲಾ ಡಿಗ್ರಿ ಮುಗುಶಿತ್ತಷ್ಟೆ. ಎಲ್ಲೋರ ಜವಾಬ್ದಾರಿ ಹಿರಿಮಗಳು ನಿರ್ಮಲಾ ಮೇಲೆ ಬಿದ್ದತ್ತು. ತಂಗೆಕ್ಕಳ ಓದು ಅದರ ಬಿಎಡ್ ಮುಗಿವಗ ಅಷ್ಟಿಷ್ಟು ಇದ್ದ ಚಿನ್ನ ಪೈಸೆ ಎಲ್ಲಾ ಖಾಲಿ ಆತು. ಅಂಬಗೆಲ್ಲಾ ಕಲ್ತಾದ ಕೂಡ್ಲೆ ಕೆಲಸ ಸಿಕ್ಕಿಗೊಂಡಿತ್ತು. ಒಂದು ಗವರ್ನ್‌ಮೆಂಟ್ ಶಾಲೆಲಿ ಟೀಚರ್ ಆಗಿ ಕೆಲಸಕ್ಕೆ ಸೇರಿತ್ತು. ಇಷ್ಟೆಲ್ಲಾ ಅಪ್ಪಗ ಅಬ್ಬೆ ತೀರಿಹೋತು. ತಂಗೆಕ್ಕಳ ಎಲ್ಲಾ ಜವಾಬ್ಧಾರಿ ವಹಿಸಿಗೊಂಡು ನಿರ್ಮಲಾ ಅವರ ಎಲ್ಲಾ ಬೇಕು ಬೇಡಂಗಳ ಪೂರೈಸಿಗೊಂಡು ತನ್ನ ಬಯಕೆಗಳನ್ನೇ ಮರದತ್ತು.
ದೊಡ್ಡ ತಂಗೆ ಶ್ಯಾಮಲಾ ಡಿಗ್ರಿ ಕಡೇ ವರ್ಷ ಅದರ ಲೆಕ್ಚರನ್ನೇ ಪ್ರೀತಿಸುತ್ತೆ ಹೇಳಿಯಪ್ಪಗ ಅವರ ಮನೆಯವರತ್ರೆ ಮಾತಾಡಿ ತಾನೇ ಮುಂದೆ ನಿಂದು ಮದುವೆ ಮಾಡ್ಸಿತ್ತು. ಹಾಂಗೇ ಮತ್ತೆ ಇಬ್ರನ್ನೂ ಕಲಿಸಿ ಒಳ್ಳೊಳ್ಳೆ ಸಂಬಂಧ ನೋಡಿ ಮದುವೆ ಮಾಡಿ ಕೊಟ್ಟತ್ತು. ಅವರೆಲ್ಲರ ಜವಾಬ್ದಾರಿ ಮುಗುದಪ್ಪಗ ಒಂದಷ್ಟು ಸಾಲ ನಿರ್ಮಲಾ ತಲೆಮೇಲೆ. ತಂಗೆಕ್ಕೊಗೆ ಆರಿಂಗೂ ಸಾಲದ ಗೊಡವೆ ಇಲ್ಲೆ. ಎಲ್ಲರಿಂಗೂ ಅವರವರ ಸಂಸಾರದ ಚಿಂತೆ."ಅಕ್ಕ ಹೇಂಗಾರು ಒಂದೇ. ಅದಕ್ಕೆಂತ ಖರ್ಚಿಲ್ಲೆನ್ನೆ. ಹೇಂಗಾರು ಸಂಬಳ ಬತ್ತು" ಹೇಳಿ ಸುಮ್ಮನಾದವು.
ಹಾಂಗೂ ಹೀಂಗೂ ಒಂದೆರಡು ವರ್ಷಲ್ಲಿ ಸಾಲ ಮುಗುದಪ್ಪಗ ಒಂದೊಂದೇ ಬಾಣಂತನ ಶುರುವಾತು. ಅಬ್ಬೆಪ್ಪ ಇಲ್ಲದ್ದ ಮನೆ. ಅವರ ಜಾಗೆಲಿ ನಿಂದು ನಿರ್ಮಲಾ ಅದನ್ನೂ ನಿಭಾಯಿಸಿತ್ತು. ಒಂದು ಹೆಣ್ಣಿನ ಬಪ್ಪಲೆ ಮಾಡಿ ಚೆಂದಕ್ಕೆ ಬಾಣಂತನ ಮಾಡಿ
ಕಳುಸಿತ್ತು.
ಇಷ್ಟೆಲ್ಲಪ್ಪಗ ನಿರ್ಮಲಂಗೆ ವರ್ಷ ನಲುವತ್ತಾತು. ಆರಿಂಗೂ ನಿರ್ಮಲಂಗೆ ಒಂದು ಮದುವೆ ಮಾಡೆಕ್ಕು, ಅದಕ್ಕೂ ಆಸೆ ಬಯಕೆ ಇದ್ದು ಹೇಳಿ ಅನಿಸಿದ್ದೇ ಇಲ್ಲೆ. ನಿರ್ಮಲಂಗೂ ಅವೆಲ್ಲಾ' ಅಕ್ಕ ಅಕ್ಕ 'ಹೇಳಿಗೊಂಡು ಅಂಬಗಂಬಗ ಮಕ್ಕಳೊಟ್ಟಿಂಗೆ ಬಪ್ಪಗ ಮದುವೆ ಆಗದ್ದು ಒಂದು ಕೊರತೆ ಹೇಳಿ ಆಯ್ದಿಲ್ಲೆ. ಶಾಲೆಲಿ ಮಕ್ಕಳೊಟ್ಟಿಂಗೆ ಸಹೋದ್ಯೋಗಿಗಳ ಒಟ್ಟಿಂಗೆ ಕಳುದು ಮನೆಗೆ ಬಪ್ಪಗ ಒಂಟಿತನ ಅಷ್ಟಾಗಿ ಕಾಡಿದ್ದಿಲ್ಲೆ.
ಈಗ ತಂಗೆಕ್ಕೊಗೆ ಅವರವರ ಸಂಸಾರ ಜವಾಬ್ದಾರಿ. ಆರಿಂಗೂ ಬಪ್ಪಲೆ ಪುರುಸೊತ್ತಿಲ್ಲೆ. ನೆಂಪಪ್ಪಗ ಒಂದೊಂದರಿ ಫೋನ್ ಅಷ್ಟೇ. ಉದಾಸೀನ ಆವುತ್ತು ಹೇಳಿ ನಿರ್ಮಲಾ ಒಂದೊಂದರಿ ತಂಗೆಕ್ಕಳಲ್ಲಿಗೆ ಹೋದರೆ ಒಬ್ಬೊಬ್ಬನದ್ದು ಒಂದೊಂದು ರೀತಿ. ಅಕ್ಕನ ಹೆಚ್ಚುದಿನ ಕೂರ್ಸಿಗೊಂಡರೆ ಎಲ್ಲಿ ಜವಾಬ್ದಾರಿ ಹೊರೆಕ್ಕಾವುತ್ತೋ ಹೇಳಿ ಅಕ್ಕನ ಸಾಗಹಾಕುಲೆ ನೋಡುವವೇ. ಸಣ್ಣಾದಿಪ್ಪಗ ಕೊಂಡಾಟಲ್ಲಿ ದೊಡ್ಡಮ್ಮ ಹೇಳಿ ಓಡಿಗೊಂಡು ಬಂದೊಡಿದ್ದ ಮಕ್ಕೊಗೆ ಈಗ ಫ್ರೆಂಡ್ಸ್ ಮೊಬೈಲ್ ಹೇಳಿ ಅವರ ಪ್ರಪಂಚವೇ ಬೇರೆ. ನಿರ್ಮಲಂಗೆ ಕಿರಿಕಿರಿಯಾಗಿ ಅದು ತಂಗೆಕ್ಕಳಲ್ಲಿಗೆ ಹೋಪದೇ ಕಮ್ಮಿ ಮಾಡಿತ್ತು.
ಅಂದು ಒಟ್ಟಿಂಗೆ ಕೆಲಸ ಮಾಡಿಗೊಂಡಿದ್ದ "ಶೇಖರ ನಾವು ಮದುವೆ ಅಪ್ಪನಾ " ಹೇಳಿಯಪ್ಪಗ" ಎನಗೆ ತಂಗೆಕ್ಕಳ ಜವಾಬ್ದಾರಿ ಇದ್ದು. ಹಾಂಗಾಗಿ ಆನು ಮದುವೆ ಆವುತ್ತಿಲ್ಲೆ"ಹೇಳಿ ಅವನ ಕೋರಿಕೆಯ ತಿರಸ್ಕರಿಸಿತ್ತು ನಿರ್ಮಲಾ.
"ನೋಡು ನಿರ್ಮಲಾ ಈಗ ಎಲ್ಲರೂ ಇದ್ದವು ನಾಳೆ ಎಲ್ಲರೂ ಅವರವರ ಸಂಸಾರ ಹೇಳಿಯಪ್ಪಗ ನಿನ್ನವು ಆರು ಇರವು" ಹೇಳಿಯಪ್ಪಗ "ಇಲ್ಲೆ ಎನ್ನ ತಂಗೆಕ್ಕೋ ಎನ್ನ ಬಿಟ್ಟು ಹಾಕವು". ಹೇಳಿ ನಿರ್ಮಲಾ ಧೈರ್ಯಲ್ಲಿ ಹೇಳಿಗೊಂಡಿತ್ತು. ಶೇಖರ ಬೇರೆ ಕೂಸಿನ ಮದುವೆ ಆಗಿ ಎರಡು ಮಕ್ಕಳ ಅಪ್ಪನಾಗಿ, ಪುಳ್ಳಿಯಕ್ಕಳೊಟ್ಟಿಂಗೆ ಸಂತೋಷಲ್ಲಿದ್ದ.
ಈಗ ನಿರ್ಮಲಂಗೆ ಅರುವತ್ತಾತು. ಕೆಲಸಂದ ರಿಟೈರ್ಡ್ ಆತು. ಮನಸ್ಸಿನ ಬೇಜಾರವೂ ಪ್ರಾಯದ ಆಭಾವವೂ ಸೇರಿಯಪ್ಪಗ ಅನಾರೋಗ್ಯ ಕಾಡ್ಲೆ ಶುರುವಾತು.
ಇಂದು ಶೇಖರ ಹೇಳಿದ್ದು ಸತ್ಯ. ಅಂದು ಆನು ಎನ್ನ ಬಗ್ಗೆ ಯೋಚನೆ ಮಾಡಿತ್ತರೆ ಇಂದು ಒಬ್ಬಂಟಿಯಾಗಿರೆಕ್ಕಾತ್ತಿಲ್ಲೆ. ಎಲ್ಲರಾಂಗೆ ಆನು ಎನ್ನ ಸಂಸಾರ ಹೇಳಿ ಇಪ್ಪಲಾವ್ತಿತ್ತು. ಇನ್ನಾದರೂ ಎನಗಾಗಿ ಬದುಕೆಕ್ಕು ಹಾಂಗಾಗಿ ಈಗ ಈ ನಿರ್ಧಾರಕ್ಕೆ ಬಂದದು." ಹೇಳಿತ್ತು ನಿರ್ಮಲಾ.
ಶ್ಯಾಮರಾಯರು ಮಗಂಗೆ ಫೋನ್ ಮಾಡಿ ವಿಷಯ ಹೇಳಿಯಪ್ಪಗ 'ನಿಂಗಳ ಇಷ್ಟ ಎನ್ನಂದ ಯಾವ ಆಕ್ಷೇಪ ಇಲ್ಲೆ' ಹೇಳುವ ಉತ್ತರ ಬಂತು. ನಿರ್ಮಲಾನ ತಂಗೆಕ್ಕೋ "ಅಕ್ಕ ನಿನಗೆ ಈ ಪ್ರಾಯಲ್ಲಿ ಮದುವೆ ಎಲ್ಲ ಬೇಕೋ ಎಂಗಳ ಮಕ್ಕೋ ಎಂತ ಹೇಳುಗು?! ಎಂಗೊಗೆಲ್ಲಾ ಮರ್ಯಾದೆ ಪ್ರಶ್ನೆ. ಈ ಹುಚ್ಚಾಟವೆಲ್ಲ ನಿಲ್ಸು" ಹೇಳಿ ಅವರ ಬುದ್ಧಿಯ ತೋರ್ಸಿದವು.
"ನಿಂಗೋ ಆರು ಎಂತ ಹೇಳಿದರೂ ಆನು ಎನ್ನ ನಿರ್ಧಾರಂದ ಹಿಂದೆ ಬತ್ತಿಲ್ಲೆ. ನಿಂಗೊಗೆಲ್ಲಾ ಆಯೆಕ್ಕಾದ ಹಾಂಗೆ ಮಾಡಿದ್ದೆ. ಇನ್ನಾದರೂ ಆನು ಎನಗಾಗಿ ಬದುಕುತ್ತೆ, ನಿಂಗಾರೂ ಅಡ್ಡಿ ಮಾಡೆಡಿ" ಹೇಳಿಯಪ್ಪಗ ಎಂತ ಬೇಕಾರೂ ಮಾಡಿಗೋ ಹೇಳಿದವು. ಅಂತೂ ಆರು ಇಲ್ಲದ್ದೆ ದೇವಸ್ಥಾನಲ್ಲಿ ಶ್ಯಾಮರಾಯರು ಮತ್ತು ನಿರ್ಮಲಾ ದಂಪತಿಗ ಆದವು. ಒಬ್ಬಂಗೊಬ್ಬ ಅರ್ಥ ಮಾಡಿಗೊಂಡು ಸಂಸಾರ ನಡೆಸುವಗ ಇಷ್ಟರವರೆಗೆ ಆನು ಕಳಕ್ಕೊಂಡದೆಂತರ ಹೇಳಿ ನಿರ್ಮಲಂಗೆ ಅರ್ಥ ಆತು. ಬದುಕಿನ ಕೊನೆಗಾಲಲ್ಲಾದರೂ ಜೀವನಕ್ಕೊಂದು ನೆಲೆಯಾತನ್ನೆ ಹೇಳಿ ನಿರ್ಮಲಾ ನೆಮ್ಮದಿಯ ನಿಟ್ಟುಸಿರು ಬಿಟ್ಟತ್ತು. ಧಾರಾಳ ಸಿರಿ ಸಂಪತ್ತು ಇದ್ದರೂ ಒಬ್ಬಂಟಿತನದ ಕಾರಣಂದ ಅಸುಖಿಯಾಗಿದ್ದ ಶ್ಯಾಮರಾಯರು ಈಗ ಸುಖಿ.
-ಗಾಯತ್ರಿ ಪಳ್ಳತ್ತಡ್ಕ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق