ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹವ್ಯಕ ಕಥೆ: ಮಾನವೀಯತೆ

ಹವ್ಯಕ ಕಥೆ: ಮಾನವೀಯತೆ


ಶಾರದಕ್ಕಂಗೆ ಎರಡುಜನ ಗಂಡುಮಕ್ಕೊ ಎರಡು ಕೂಸುಗೊ. ಗಂಡ ಗೋವಿಂದ ಭಟ್ಟಂಗೆ ನಾಲ್ಕು ಎಕ್ರೆ ತೋಟ, ಬಾಳೆ, ಗೆಣಮೆಣಸು ಕೃಷಿ ಕೃಷಿ ಭೂಮಿ. ಅಂಬಗಾಣ ಕಾಲಕ್ಕೆ ಒಳ್ಳೆ  ಅನುಕೂಲ ಇದ್ದವೇ.


ಸಹವಾಸ ದೋಷವೋ ಎಂತದೋ. ಕುಡಿತದ ಚಟಕ್ಕೆ ಬಲಿಯಾದ ಗೋವಿಂದ ಭಟ್ಟ. ಊರಿಲಿ ಯಾವುದೋ ವಿಷಯಕ್ಕೆ ಲಡಾಯಿ ಮಾಡಿಗೊಂಡು ಅವಮಾನ ತಡೆಯದ್ದೆ ಆತ್ಮಹತ್ಯೆ ಮಾಡಿಗೊಂಡಪ್ಪಗ ಶಾರದೆ ನಾಲ್ಕು ಮಕ್ಕಳ ಕಟ್ಟಿಗೊಂಡು ನಿಜವಾಗಿಯೂ ಅನಾಥೆ ಆತು.


ಅಪ್ಪನ ಮನೆಕಡೆಯೂ ಅಪ್ಪ ಅಮ್ಮ ಇಬ್ರೂ ಎರಡು ವರ್ಷದ ಹಿಂದೆಯೇ ಒಬ್ಬನ ಹಿಂದೆ ಒಬ್ಬನಾಂಗೆ ಒಂದು ವರ್ಷದ ಅಂತರಲ್ಲಿ ಇಬ್ರೂ ತೀರಿಗೊಂಡ ಮೇಲೆ ಅವರವರ ಸಂಸಾರಲ್ಲಿ ಮುಳುಗಿದ ಅಣ್ಣಂದ್ರು ದೂರವಾದವು. ಹಾಂಗಾಗಿ ಅವರ ಸಕಾಯ ಸಿಕ್ಕುಗು ಹೇಳುವ ಆಶೆಯೂ ಇಲ್ಲೆ.


ಒಂದೆಡೆಲಿ ಗೆಂಡ ಮಾಡಿದ ಸಾಲ ತೀರುಸುವ ಹೊಣೆ. ಇನ್ನೊಂದೆಡೆಲಿ ಮಕ್ಕಳ ಜವಾಬ್ದಾರಿ. ಶಾರದೆ ಗಟ್ಟಿ ಮನಸು ಮಾಡಿತ್ತು. ಧೈರ್ಯಂದ ಎಲ್ಲವನ್ನೂ ಎದುರಿಸಿ ತೋಟಲ್ಲಿ ಆಳಾಗಿ ಮನೆಗೆ ಯಜಮಾನಿಯಾಗಿ ಕೆಲಸ ಮಾಡಿ ಮಕ್ಕಳ ಬೆಳೆಶಿತ್ತು. ಮಾಣಿಯಂಗೊ ಇಬ್ರೂ ಇಂಜಿನಿಯರಿಂಗ್ ‌ಮುಗುಶಿ ಬೆಂಗ್ಳೂರಿಲಿ ಕೆಲಸಕ್ಕೆ ಸೇರಿಗೊಂಡವು. ಕೂಸುಗಳ ತಕ್ಕಮಟ್ಟಿಂಗೆ ಕಲಿಶಿ ಒಳ್ಳೊಳ್ಳೆ ಸಂಬಂಧ ನೋಡಿ ಮದುವೆ ಮಾಡಿ ಕಳಿಸಿತ್ತು. ಮಾಣಿಯಂಗೊ ಒಳ್ಳೆ ಕಂಪೆನಿಲಿ ಕೆಲಸಲ್ಲಿದ್ದವು ಹೇಳಿಯಪ್ಪಗ ಕೂಸು ಕೊಡುವವೆಂತ ಕಡಮ್ಮೆಯ. ಒಳ್ಳೆ ಕಡೆಂದಲೇ ಹುಡ್ಕಿ ಕೂಸುಗಳ ತಂದು ಆಡಂಬರಲ್ಲಿಯೇ ಮದುವೆ ಮಾಡಿತ್ತು.


ಎಲ್ಲರೂ ಶಾರದೆಯ ಹೊಗಳುವವೇ. ಅಂದು ಸಸಾರ ಮಾಡಿಗೊಂದಿದ್ದವೆಲ್ಲಾ  ಈಗ ದಿನಿಗೇಳಿ ಮಾತಾಡ್ಸುವಾಂಗಾತು. ಮನೆಯೂ ಹಬ್ಬ ಹರಿದಿನಂಗೊ ಬಂದಪ್ಪಗ ಸಡಗರಂದ ತುಂಬಿ ತುಳುಕುವಾಂಗಾತು. ಮಕ್ಕಳ ಸಂಸಾರವೂ ಬೆಳೆದು ಕುಟುಂಬ ದೊಡ್ಡಾತು. ಊರಿಂಗೆ ಬಂದಿಪ್ಪಗ ಅತ್ತೆ ಅತ್ತೆ ಹೇಳಿ ಹಿಂದೆ ಹಿಂದೆಯೇ ಬಪ್ಪ ಸೊಸೆಯಕ್ಕೊ ಅಜ್ಜಿ ಅಜ್ಜಿ ಹೇಳಿಗೊಂಡು ಬೇಕಾದ್ದರ ಹೇಳಿ ಮಾಡ್ಸಿಗೊಂಡು ಒಟ್ಟಿಂಗೆ ಸೇರುವ ಕುಟುಂಬವ ಕಂಡಪ್ಪಗ ಶಾರದೆಗೆ ಸಂತೋಷಂದ ಹೃದಯ ತುಂಬಿದಾಂಗಾತು.


ಅಂಬಗಂಬಗ ಬಂದೊಡಿದ್ದ ಮಕ್ಕೊ ಈಗೀಗ ಬಪ್ಪದು ಕಮ್ಮಿ ಆತು. ತಾನೇ ಕೆಲಸ ಮಾಡಿಗೊಂಡು ಕೆಲಸದವರತ್ರೆ ಮಾಡ್ಸಿಗೊಂಡು ತೋಟವ ನೋಡಿಗೊಂಡಿದ್ದ ಶಾರದೆಗೆ ಈಗೀಗ ಮೊದಲಾಣಾಂಗೆ ಆರೋಗ್ಯವೂ ಇಲ್ಲದ್ದೆ ಒಂಟಿತನಂದ ಮನಸ್ಸೂ ಗಟ್ಟಿತನ ಕಳಕ್ಕೊಂಡು ಮಕ್ಕಳೊಟ್ಟಿಂಗೆ‌ ಇರೆಕ್ಕು ಹೇಳಿ ಅಪ್ಪಲೆ ಶುರುವಾತು. 'ಹೇಂಗೂ ಮಕ್ಕೋ ಇಬ್ರೂ ಬೆಂಗ್ಳೂರಿಲಿ ಇಪ್ಪದು. ಒಂದೆರಡು ತಿಂಗಳು ಹೋಗಿ ಇದ್ದಿಕ್ಕಿ ಬರೆಕ್ಕು ಹೇಳಿ ನಿರ್ಧಾರ ಮಾಡಿದ ಶಾರದೆ ಮನೆಗೆ ಆರನ್ನಾದರೂ ನಿಲ್ಲಿಸಿ ಹೋಪದು ಹೇಳಿ ತೀರ್ಮಾನ ಮಾಡಿತ್ತು.


ಯಾವಾಗಲೂ ಅಡಿಗೆಗೆ ಬಪ್ಪ ಶೀಪತಿ ಒಳ್ಳೆ ಜನ. ಅವನ ಅಪ್ಪ ಸಣ್ಣದಿಪ್ಪಗಲೇ ಅವನನ್ನೂ ಅವನ ಅಮ್ಮನನ್ನೂ ಬಿಟ್ಟು ದೇಶಾಂತರ ಹೋದವ ಬಯ್ಂದನೇ ಇಲ್ಲೆ. ಅವನ ಅಮ್ಮ ಅಲ್ಲಿಲ್ಲಿ ಅಡಿಗೆ ಮಾಡಿ ಮಗನ ಸಾಂಕಿತ್ತು. ವಿದ್ಯೆ ತಲೆಗೆ ಹತ್ತದ್ರೂ ಅಡಿಗೆ ಲಾಯಕಲ್ಲಿ ಮಾಡ್ಲೆ ಕಲ್ತುಗೊಂಡು ಸಂಪಾದನೆಯ ದಾರಿ ಕಂಡುಗೊಂಡವ.ಅಮ್ಮ ತೀರಿಹೋದ ಮೇಲೆ ಹಳ್ಳಿಲಿದ್ದ ಸಣ್ಣ ಮನೆಯ ಮಾರಿ ಇಲ್ಲಿ ಬಂದು ಬಾಡಿಗೆ ಮನೆ ಹಿಡುದು ಅನಾಥ ಕೂಸು ರತ್ನನ ಮದುವೆ ಆಗಿ ಸಂಸಾರ ಮಾಡಿಗೊಂಡಿಪ್ಪವ.


ಶಾರದೆ ಬೆಂಗ್ಳೂರಿಂಗೆ ಹೋಪದು ಹೇಳಿ ತೀರ್ಮಾನ ಅಪ್ಪಗ ಶ್ರೀಪತಿಯನ್ನೂ ಅವನ ಹೆಂಡತಿಯನ್ನೂ ಮನೆಲಿ ಕೂರ್ಸುವದು ಹೇಳಿ‌ ತೀರ್ಮಾನ ಮಾಡಿತ್ತು. ದೊಡ್ಡ ಮಗಂಗೆ ಪೋನ್ ಮಾಡಿ "ಬಂದು ಎನ್ನ ಕರಕ್ಕೊಂಡು ಹೋಗು" ಹೇಳಿತ್ತು.


ಅಂತೂ ಶಾರದೆ ಬೆಂಗಳೂರಿಂಗೆ ಬಂತು. ಸೊಸೆ ಮೊಮ್ಮಕ್ಕ ಪ್ರೀತಿಲಿಯೇ ಸ್ವಾಗತಿಸಿದವು. ಸುರುವಿಂಗೆ ಎಲ್ಲವೂ ಚೆಂದ ಹೇಳಿ ಕಂಡತ್ತು. ನಾಲ್ಕು ದಿನ ಕಳುದಪ್ಪಗ ಸೊಸೆ ಕಿಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲ ತಪ್ಪು ಹುಡ್ಕುಲೆ ಸುರುಮಾಡಿಯಪ್ಪಗ ಶಾರದೆಗೆ ಬೇಜಾರಾತು. ಮೊಮ್ಮಕ್ಕಳ ಹತ್ರ ಮಾತಾಡುವ ಹಾಂಗೇ ಇಲ್ಲೆ. "ಮಾತಡದ್ದೆ ಕೂರಿ. ಅವಕ್ಕೆ ಓದುಲೆ ತೊಂದರೆ ಆವುತ್ತು". ಮಗನ ತಾಕೀತು.


ಆನು ಇಲ್ಲಿಪ್ಪದು ಇವಕ್ಕೆ ಇಷ್ಟ ಇಲ್ಲೆ ಹೇಳಿ ಶಾರದೆಗೆ ಅನುಸುಲೆ ಶುರುವಾತು. ಎರಡ್ನೆ ಮಗ ನಿರಂಜನನಲ್ಲಿಗೆ ಹೋಪದು ಹೇಳಿ ಅವಂಗೆ ಫೋನ್ ಮಾಡಿಯಪ್ಪಗ "ಇಲ್ಲಿಗೆ ಬಪ್ಪದು ಬೇಡ ಎಂಗೋ ಗೋವಾ ಟೂರ್ ಹೆರಟಿದೆಯ. ಮಕ್ಕೊಗೆ ನಾಲ್ಕು ದಿನ ರಜೆ ಇದ್ದು. ನೀನು ಊರಿಂಗೆ ಹೋಗು. ಎಂಗೊ ಊರಿಂಗೆ ಬತ್ತೆಯಾ." ಹೇಳಿಯಪ್ಪಗ ಅವನ ಮನಸ್ಸು ಅರ್ಥಾತು. "ಹೆಂಡತಿಯ ಅಬ್ಬೆಪ್ಪ ಕಳುದ ತಿಂಗಳು ಎರಡುವಾರ ಇದ್ದಿಕ್ಕಿ ಹೋಯ್ದವು" ಹೇಳಿ ಅವ ಫೋನ್ ಲಿ ಹೇಳಿದ್ದು ನೆಂಪಾತು.


ಎಲ್ಲ ಅವರವರ ಹಣೆಲಿಬರದ್ದು ಹೇಳಿ ಗ್ರೇಶಿಗೊಂಡು ಎರಡು ತಿಂಗಳಿಂಗೆ ಬಂದೋಳು ನಾಲ್ಕೇ ದಿನಲ್ಲಿ ಊರಿಂಗೆ ವಾಪಸ್ಸಾತು.


ಶ್ರೀಪತಿಯ ಬಾಡಿಗೆಮನೆಂದ ಬಿಡಿಸಿ‌ ಮನೆಲಿಯೇ ಅವಕ್ಕಿಬ್ರಿಂಗೂ ಕೂಪಲೆ ವ್ಯವಸ್ಥೆ ಮಾಡಿಕೊಟ್ಟತ್ತು. ಎಷ್ತಾದರೂ ಕೂಸುಗಳಲ್ಲಿಗೆ ಹೆಚ್ಚು ದಿನಕ್ಕೆ ಹೋಪಲಾಗ ಹೇಳಿ ಮಗಳಕ್ಕಳಲ್ಲಿ ಒಂದೊಂದು ದಿನಕ್ಕೆ ಹೋಗಿ ಬಂತು.


ಅವರವರ ಸಂಸಾರಲ್ಲಿ ಮುಳುಗಿ ಹೋದ ಮಕ್ಕೊಗೆ ಈಗ ಊರಿಂಗೆ ಬಪ್ಪಲೂ ಪುರುಸೊತ್ತಿಲ್ಲೆ. ಯವಾಗಾದರೂ ಒಂದೊಂದರಿ ಫೋನ್ ಮಾಡಿರೂ ಮಾತಾಡ್ಲೆ ವಿಷಯವೇ ಇಲ್ಲೆ. ಹಬ್ಬ ಹರಿದಿನಂಗೊಕ್ಕಂತೂ ಸುದ್ದಿಯೇ ಇಲ್ಲೆ.


ಶ್ರೀಪತಿಗೂ ಒಬ್ಬ ಮಗ ಹುಟ್ಟಿದ ನಂತ್ರ ಅವನ ಆಟ ಪಾಟ ನೋಡಿಗೊಂಡು ಸಂತೋಷ ಪಟ್ಟುಗೊಂಡಿತ್ತು. ಅವನೂ ಅಷ್ಟೇ ಶಾರದೆಯ ಅಬ್ಬೆ ಹೇಳಿ‌ ಗ್ರೇಶಿಗೊಂಡು ತೋಟವನ್ನೂ ಮನೆಯನ್ನೂ ಲಾಯ್ಕಲ್ಲಿ ನೋಡಿಗೊಂಡಿತ್ತ. ಶಾರದೆ ಜ್ವರ ಬಂದು ಹಾಸಿಗೆ ಹಿಡುದಪ್ಪಗ ಮಕ್ಕೊಗೆ ಫೋನ್ ಮಾಡಿದರೂ ಆರೂ ಬಯ್ಂದವಿಲ್ಲೆ. ಮಗಳಕ್ಕೊ ಒಂದೊಂದು ದಿನಕ್ಕೆ ಬಂದು ಹೋದವು. ದೊಡ್ಡ ಮಗ ಅಲ್ಲಿಂದಲೇ‌ ಫೋನ್ ಮಾಡಿ "ರೆಸ್ಟ್ ಮಾಡು. ಪೈಸೆ ಬೇಕಾದರೆ ಹೇಳು" ಹೇಳಿ ಅವನ ಕರ್ತವ್ಯ ಮುಗುಶಿದ. ಎರಡ್ನೆಯವ "ಎನಗೀಗ ಬಪ್ಪಲಾವುತ್ತಿಲ್ಲೆ." ಹೇಳಿದ. ಶ್ರೀಪತಿಯೂ ಅವನ ಹೆಂಡತಿಯೂ ಲಾಯಕಲ್ಲಿ ಚಾಕ್ರಿ ಮಾಡಿ ಶಾರದೆ ಉಶಾರಪ್ಪಾಂಗೆ ನೋಡಿಗೊಂಡವು.


ಇದ್ದಕ್ಕಿದ್ದಾಂಗೆ "ಪ್ರಪಂಚಕ್ಕೆಲ್ಲ ಕೊರೋನಾ ವೈರಸ್ ಹಬ್ಬುತ್ತಾ ಇದ್ದು". ಟಿವಿ ನ್ಯೂಸ್ ನೋಡಿ ಶಾರದೆಗೆ ಮನಸ್ಸಿಲೇ ತಳಮಳ. "ಆನು ಸಾಯೆಕ್ಕಾರೆ ಮಕ್ಕಳ ನೋಡ್ತನಾ ಇಲ್ಲೆಯೋ ಎಂತೋ" ಹೇಳಿ ಗ್ರೇಶಿಗೊಂಡಿತ್ತು.


"ಬೆಂಗ್ಳೂರಿಲಿ ಇಪ್ಪವು ಎಲ್ಲರೂ ಊರಿಂಗೆ ಬತ್ತವಡ. ಅಲ್ಲಿ ರೋಗ ಕಂಡಾಬಟ್ಟೆ ಹಬ್ಬುತ್ತಾ ಇದ್ದಡ. "ಶ್ರೀಪತಿ ಹೇಳಿಯಪ್ಪಗ ಶಾರದೆಗೆ ಮಕ್ಕಳ ನಂಪಾತು. ಎಲ್ಲರೂ ಸೌಖ್ಯಲ್ಲಿ ಇರಲಿ ಹೇಳಿ ಮನಸ್ಸಿಲಿಯೇ ಹಾರೈಸಿತ್ತು. ಎಷ್ಟಾದರೂ ಹೆತ್ತಕರುಳನ್ನೆ.


ಮನೆಯ ಮುಂದೆ ಎರಡೆರಡು ಕಾರು ಒಟ್ಟಿಂಗೆ ಬಂದು ನಿಂದಪ್ಪಗ ಶಾರದೆಗೆ ಅಚ್ಚರಿ. ಆರೂ ನೋಡಿಯಪ್ಪಗ ಬಂದವು ಮಕ್ಕಳೇ. ಇಬ್ರುದೆ ಸಂಸಾರ ಸಮೇತ ಗಂಟುಮೂಟೆ ಕಟ್ಟಿಗೊಂಡು ಕಾರಿಂದ ಇಳಿವದು ಕಂಡತ್ತು.


ಶಾರದೆಗೆ‌ ಅಂದು ಬೆಂಗ್ಳೂರಿಲಿ ಅವು ನಡಕ್ಕೊಂಡ ರೀತಿ ನೆಂಪಾತು. ಆದರೆ ಆನು ಹಾಂಗೆ ಮಾಡುದು ಮಾನವೀಯತೆ ಅಲ್ಲ ಹೇಳಿ ಗ್ರೇಶಿಗೊಂಡು ಅವರೆಲ್ಲರ ಪ್ರೀತಿಲೇ ಸ್ವಾಗತಿಸಿತ್ತು. ಶ್ರೀಪತಿಯತ್ರ ಹೇಳಿ ಅವಕ್ಕೆಲ್ಲ ಊಟದ ವ್ಯವಸ್ಥೆ ಮಾಡ್ಸಿತ್ತು.


ಅಮ್ಮನ ಪ್ರೀತಿ ಕಂಡಪ್ಪಗ‌ ಮಗಂದ್ರು ಸೊಸೆಯಕ್ಕೊಗೆ 'ಎಂಗೊ ಇಷ್ಟು ದಿನ ಕಳಕ್ಕೊಂಡದು ಎಂತರ "ಹೇಳಿ ಅರ್ಥ ಆತು. ಇಬ್ರೂ ಪಶ್ಚಾತ್ತಾಪಂದ ಶಾರದೆಯ ಕಾಲಿಂಗೆ ಬಿದ್ದು ಕಣ್ಣೀರು ಹಾಕಿದವು.


"ಅಮ್ಮ ಇಷ್ಟು ದಿನ ಕುಟುಂಬ ಅದರ ಮಾನವೀಯ ಮೌಲ್ಯಗಳ ಮರತ್ತು ಸ್ವಾರ್ಥಿಗೊ‌ ಆಗಿತ್ತೆಯ.ಈ ಕೊರೋನಾ ಬಂದು ಎಲ್ಲವನ್ನೂ ಕಲಿಸಿತ್ತು. ಮನೆ‌ ಬಂದು ಬಳಗಗಳ ಮೌಲ್ಯ ಗೊಂತಾತು. ಇನ್ನು ಎಂಗೊಗೆ ಮನೆಂದಲೇ ಕೆಲಸ ಎಂಗೊ ಇಲ್ಲಿಯೇ ಇರ್ತೆಯಾ. "ಹೇಳಿದವು.ಅವರ ತಲೆಸವರಿದ ಶಾರದೆ "ಒಳ್ಳೆದು ಆಗಲಿ" ಹೇಳಿತ್ತು.


"ಕಾಲಾಯ ತಸ್ಮೈ ನಮಃ"ಹೇಳಿಗೊಂಡು ಶಾರದೆ ಊಟದ ತಯಾರಿಗೆ ಅಡಿಗೆ ಕೋಣೆಗೆ ಹೋತು. ಅಲ್ಲಿ ಶ್ರೀಪತಿ ಅವನ ಹೆಂಡತಿಯತ್ರ" ನಾಳಂಗೆ ನಾವಿಲ್ಲಿಂದ ಹೆರಡೆಕ್ಕು" ಹೇಳುದು ಕೇಳಿಯಪ್ಪಗ ಶಾರದೆ "ಎಲ್ಲಿಗೆ ಹೆರಟದು ಕೇಳಿತ್ತು."ನಿಂಗಳ ಮಕ್ಕೊ ಇದ್ದವನ್ನೆ‌ ಇನ್ನು ಎಂಗೊ ಇಲ್ಲಿಪ್ಪದು ಸರಿಯಲ್ಲ. ಬೇರೆ ಎಲ್ಲಿಯಾದರೂ ಕೆಲಸ ಸಿಕ್ಕುತ್ತಾ ನೋಡೆಕ್ಕು" ಹೇಳಿ ಕಣ್ಣು ಉದ್ದಿಗೊಂಡ. ಅವನ ಕಣ್ಣೀರು ಒರೆಸಿ ಶಾರದೆ "ನೀನು ಎಲ್ಲಿಗೂ ಹೋಪದು ಬೇಡ. ನೀನೂ ಎನ್ನ ಮಗನೇ. ಅವಕ್ಕೆ ಒಟ್ಟಿಂಗೆ ಸರಿಯಾಗದ್ರೆ ನಿಂಗೊಗೆ ತೋಟದ ಮನೆಲಿ ಕೂಪ ವ್ಯವಸ್ಥೆ ಮಾಡ್ತೆ. ಆನೂ ನಿಂಗಳೊಟ್ಟಿಂಗೆ ಇರ್ತೆ. ಇನ್ನು ಮುಂದೆ ನೀನು ಮನೆ ಬಿಟ್ಟು ಹೋಪ ಮಾತಡ್ಲೆಡಿಯ ಗೊಂತಾತಾ" ಹೇಳಿ ಎಲ್ಲೋರು ಒಟ್ಟಿಂಗೆ ಉಂಬ. ಮೊದಲಾಣ ಸಂತೋಷ ಈಗ ತುಂಬಿದ್ದು ಮನೆಲಿ. ಊಟಕ್ಕೆ ತಯಾರಿ ಮಾಡಿ. ಅವರೆಲ್ಲರ‌ ಬಪ್ಪಲೆ ಹೇಳ್ತೆ ಹೇಳಿ ಶಾರದೆ ಕೊಶಿಲಿ ಹೆರನಡೆದತ್ತು.


-ಗಾಯತ್ರಿ ಪಳ್ಳತ್ತಡ್ಕ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post