ವಾರ್ಡ್ ಸಮಿತಿ ರಚನೆಯಲ್ಲಿ ಕಾನೂನು ಉಲ್ಲಂಘನೆ; ಮಾಜಿ ಶಾಸಕ ಲೋಬೊ ಆರೋಪ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಮಿತಿಗಳಲ್ಲಿ ಬಿಜೆಪಿ ಸದಸ್ಯರಿಗೆ ಮಣೆ ಹಾಕಲಾಗಿದೆ. ಪಾಲಿಕೆ ಆಯುಕ್ತರು ಕಾನೂನು ಪಾಲನೆಯಲ್ಲಿ ವಿಫಲರಾಗಿದ್ದು, ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಅವರು ಐಎಎಸ್ ಅಧಿಕಾರಿಯೇ ಅಥವಾ ಬಿಜೆಪಿ ಅಡಿಯಾಳೆ? ಎಂಬುದು ಸ್ಪಷ್ಟವಾಗಬೇಕಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಕಿಡಿ ಕಾರಿದರು.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 60 ವಾರ್ಡ್‌ಗಳ ಸಮಿತಿಗೆ ಸುಮಾರು 1,278 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 600 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಹಾಗೆ ಆಯ್ಕೆ ಮಾಡಲಾದ ಸದಸ್ಯರ ಪೈಕಿ ಶೇ.90ರಷ್ಟು ಮಂದಿ ಬಿಜೆಪಿ ಸದಸ್ಯರಾಗಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದ್ದು, ತಕ್ಷಣ ಈ ಪಟ್ಟಿಯನ್ನು ರದ್ದುಪಡಿಸಿ ರಾಜಕೀಯೇತರ ವ್ಯಕ್ತಿಗಳನ್ನು ಒಳಗೊಂಡ ವಾರ್ಡ್ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರೂ ಕೂಡ ಅವರನ್ನು ಕೈ ಬಿಡಬೇಕು. ಯಾವ ಕಾರಣಕ್ಕೂ ಆ ಸಮಿತಿಯಲ್ಲಿ ಯಾವುದೇ ಪಕ್ಷದವರು ಇರಬಾರದು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷರಾಗಿರುವ ಸೇವಾಂಜಲಿ ಟ್ರಸ್ಟ್ ಅನ್ನು ಈ ಸಮಿತಿಗೆ ಹೇಗೆ ಸೇರ್ಪಡೆ ಮಾಡಲಾಗಿದೆ ಎಂದು ಲೋಬೊ ಪ್ರಶ್ನಿಸಿದರು.
ಮಾಜಿ ಶಾಸಕ ಮೊಯ್ದಿನ್ ಬಾವಾ, ಪಕ್ಷದ ಮುಖಂಡರಾದ ಜೆ.ಅಬ್ದುಲ್ ಸಲೀಂ, ಶುಭೋದಯ ಆಳ್ವ, ಮುಹಮ್ಮದ್ ಕುಂಜತ್ತಬೈಲ್, ಮಹಾಬಲ ಮಾರ್ಲ, ಸದಾಶಿವ ಶೆಟ್ಟಿ, ವಿಶ್ವಾಸ ಕುಮಾರ್ ದಾಸ್, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ರಮಾನಂದ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment