ಉಜಿರೆ: “ನೀವು ಶ್ರೀಮಂತರಾಗಬೇಕೆಂಬ ಧ್ಯೇಯ ಹೊಂದಿದ್ದರೆ ಬೇರೆಯವರಿಗಾಗಿ ದುಡಿಯಬೇಡಿ. ನಿಮ್ಮ ಅಭಿವೃದ್ಧಿಗಾಗಿಯಷ್ಟೇ ಶ್ರಮ ಪಡಿ. ನಿಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಬೇಕಾದರೆ ಉದ್ಯೋಗಕ್ಕಾಗಿ ನಿರೀಕ್ಷೆ ಮಾಡಬೇಡಿ. ಬದಲಾಗಿ ನೀವೇ ಇತರರಿಗೆ ಉದ್ಯೋಗ ಸೃಷ್ಟಿಸಿಕೊಡುವಷ್ಟು ಪ್ರಬಲವಾಗಿ ಬೆಳೆಯಲು ನಿರ್ಧರಿಸಿ, ಅದರಂತೆಯೇ ಮುನ್ನಡೆದು ಯಶಸ್ಸು ಪಡೆಯಿರಿ” ಎಂದು ಅಬುಧಾಬಿ ಸರ್ಕಾರದ ಸೈಬರ್ ಫೌಂಡೇಶನ್ ಹಿರಿಯ ಆರ್ಥಿಕ ನಿಯಂತ್ರಣ ಅಧಿಕಾರಿಯಾದ ಸಿ. ಎ. ಅಬ್ದುಲ್ಲಾ ಮಡುಮೂಲೆ ತಿಳಿಸಿದರು.
ಅವರು ಇತ್ತೀಚೆಗೆ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ನೇಮಕಾತಿ ಕೋಶ ಹಾಗೂ ‘ಎಸ್.ಡಿ.ಎಂ- ಜಾಗತಿಕ ಮಟ್ಟದ ವಿದ್ಯಾರ್ಥಿ ಸಂಘ’ (ಗ್ಲೋಬಲ್ ಅಲ್ಯುಮ್ನಿ ಅಸೋಸಿಯೇಷನ್) ಆಯೋಜಿಸಿದ್ದ ಜಾಗತಿಕ ಮಟ್ಟದ ವಿದ್ಯಾರ್ಥಿ ಸಂಘದ ವೆಬಿನಾರ್ ಸರಣಿಯ ಪ್ರಥಮ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
‘ಶ್ರೀಮಂತರಾಗಬೇಕೆ? ಕೆಲಸ ಮಾಡಬೇಡಿ!’ ಎಂಬ ವಿಷಯಾಧರಿಸಿ ಮಾತನಾಡಿದ ಅವರು, ಇತರರಿಗಾಗಿ ದುಡಿಯುವುದರಿಂದ ನೀವು ಸೇವಕರಷ್ಟೇ ಆಗುತ್ತೀರಿ. ಆದರೆ ನಿಮಗಾಗಿ ದುಡಿದಾಗ ನೀವು ಧನಿಕರಾಗುತ್ತೀರಿ. ನಾವು ಸ್ವಾವಲಂಬಿಗಳಾಗಬೇಕು ಮತ್ತು ನಮ್ಮ ಅಭಿವೃದ್ಧಿಯನ್ನು ಕೌಶಲ್ಯಗಳ ಮೂಲಕ ಸಾಧಿಸಬೇಕು. ಆಗ ಮಾತ್ರ ಒಬ್ಬ ವ್ಯಕ್ತಿಯ ಅಭಿವೃದ್ಧಿ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಜೀವನದಲ್ಲಿ ಯಶಸ್ಸು ಸಾಧಿಸಲು ನೀವು ಇತರರಿಗಿಂತ ಭಿನ್ನವಾದ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿರಬೇಕು. ಅದಕ್ಕಾಗಿ ನೀವು ಮಿತಿಗಳನ್ನು ಮೀರಿ ಯೋಚಿಸಿ. ಅವಕಾಶಗಳನ್ನು ಸಕಾರಾತ್ಮಕವಾಗಿ ನೋಡಿ. ಅವಕಾಶಗಳಿಗಾಗಿ ನಿಮ್ಮ ಸುತ್ತಮುತ್ತ ಹುಡುಕಬೇಕೆ ವಿನಾ ಅದಕ್ಕಾಗಿ ಗೂಗಲ್ ಹುಡುಕಿ ಪ್ರಯೋಜನವಿಲ್ಲ. ಅಲ್ಲದೆ ನೀವು ಹೊಸತನ್ನು ಸಾಧಿಸಲು ಮುಂದಾದಾಗ ಕೆಲವು ಜನರು ನಿಮ್ಮನ್ನು ಮೂದಲಿಸಬಹುದು. ಅಂಥವರಿಂದ ದೂರವಿದ್ದು, ನಿಮ್ಮ ಗುರಿಯೆಡೆಗೆ ಗಮನ ನೀಡಿದಾಗ ಯಶಸ್ಸು ನಿಮ್ಮದಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮಾತು ಮುಂದುವರೆಸಿದ ಅವರು, ಸಾಧ್ಯತೆಗಳು ಬಹಳಷ್ಟಿವೆ. ಒಂದು ವೇಳೆ ಅವಕಾಶದ ಹಿಂದೆ ಬಿದ್ದು ಸೋತರೂ ಎದೆಗುಂದಬೇಡಿ. ಯಾಕೆಂದರೆ ಆ ಸೋಲು ನಿಮ್ಮನ್ನು ಗಟ್ಟಿಗೊಳಿಸುತ್ತದೆ. ನೀವು ಗೆದ್ದ ಮೇಲೆ ನಡೆದು ಬಂದ ದಾರಿಯನ್ನು ಮರೆಯಬೇಡಿ. ನೀವು ಬೆಳೆದುಬಂದ ಸಮಾಜ ಸಬಲತೆಯನ್ನು ಸಾಧಿಸಲು ಸಹಕರಿಸಿ. ಇದು ನಿಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ಓದುವುದನ್ನು ಎಲ್ಲೂ ನಿಲ್ಲಿಸಬೇಡಿ ಮತ್ತು ಕೆಲಸದವರನ್ನು ಗೌರವದಿಂದ ಕಾಣಿರಿ ಎಂದರು.
ಇದೇ ವೇಳೆ ತಮ್ಮ ಕಾಲೇಜು ಜೀವನವನ್ನು ಸ್ಮರಿಸಿದ ಅವರು, ಜೀವನಕ್ಕೆ ಅಗತ್ಯ ಸಂಸ್ಕಾರ ಕಲಿಸಿದ ಎಸ್‌ಡಿಎಂ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಎನಿಸಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು. ಈ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಸೇರಿ ಮಾಡುವ ಸೇವೆ ನಾವು ಗುರುಗಳಿಗೆ ಮತ್ತು ಸಂಸ್ಥೆಗೆ ನೀಡುವ ಗುರುದಕ್ಷಿಣೆ ಎಂದು ಅಭಿಪ್ರಾಯ ಪಟ್ಟರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗ, ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿಯ ಮಾಹಿತಿ ನೀಡುವ ಉದ್ದೇಶದಿಂದ ಹಳೆ ವಿದ್ಯಾರ್ಥಿಗಳೊಂದಿಗೆ ಈ ರೀತಿಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆನ್‍ಲೈನ್‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ, ಹಿರಿಯ ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Post a Comment