ಉಜಿರೆ: ಧರ್ಮಸ್ಥಳದಲ್ಲಿ ರಜತಾದ್ರಿ ವಸತಿ ಛತ್ರದಲ್ಲಿ ಸಿಯೋನ್ ಆಶ್ರಮದ 240 ಮಂದಿ ಕೊರೊನಾ ಸೋಂಕಿತರಿಗೆ ಸುಮಾರು ಒಂದೂವರೆ ತಿಂಗಳ ಕಾಲ ಊಟ, ವಸತಿಯೊಂದಿಗೆ ಶುಶ್ರೂಷೆ ಪಡೆಯಲು ಉಚಿತ ಸೌಲಭ್ಯ ಕಲ್ಪಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸೋಮವಾರ ಅವರ ನಿವಾಸದಲ್ಲಿ ನೆರಿಯಾ ಗ್ರಾಮದ ಸಿಯೋನ್ ಆಶ್ರಮದ ಸಂಚಾಲಕ ಯು.ಸಿ. ಪೌಲೋಸ್ ಮತ್ತು ಬಳಗದವರು ಭೇಟಿಯಾಗಿ ಧನ್ಯತಾಭಾವದಿಂದ ಕೃತಜ್ಞತೆ ಸಲ್ಲಿಸಿ ಗೌರವಾರ್ಪಣೆ ಮಾಡಿದರು.
ಧರ್ಮಸ್ಥಳದಲ್ಲಿ ಪ್ರಶಾಂತ ಹಾಗೂ ಸ್ವಚ್ಛ ಪರಿಸರದಲ್ಲಿ ಸಿಬ್ಬಂದಿಯ ಸೌಜನ್ಯ ಪೂರ್ಣ ಸೇವೆಯನ್ನು ಅವರು ಶ್ಲಾಘಿಸಿದರು. ಇಲ್ಲಿ ಶುಶ್ರೂಷೆ ಪಡೆದ ಎಲ್ಲರೂ ಸಂಪೂರ್ಣ ಗುಣಮುಖರಾಗಿ ಪೂರ್ಣ ಆರೋಗ್ಯ ಭಾಗ್ಯ ಹೊಂದಿರುವುದಾಗಿ ಅವರು ತಿಳಿಸಿದರು.
ಸಿಯೋನ್ ಆಶ್ರಮಕ್ಕೆ 2 ಕೋಟಿ ರೂ. ಗೂ ಮಿಕ್ಕಿ ಆರ್ಥಿಕ ನೆರವು ನೀಡಿರುವುದಲ್ಲದೆ, ಆಗಾಗ ಅಕ್ಕಿ, ತರಕಾರಿ ಹಾಗೂ ದಿನಬಳಕೆಯ ಪರಿಕರಗಳನ್ನು ನೀಡಿ ನಿರಂತರ ಸಹಕರಿಸುತ್ತಿರುವುದರ ಬಗ್ಯೆ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಅಂಗವಿಕಲರು, ಮಾನಸಿಕ ರೋಗಿಗಳು ಹಾಗೂ ದೀನ-ದಲಿತರಿಗೆ ಸಿಯೋನ್ ಆಶ್ರಮದ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಹೇಮಾವತಿ ವೀ. ಹೆಗ್ಗಡೆಯವರು ಆಶ್ರಮದ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.
ಸಿಯೋನ್ ಆಶ್ರಮದ ಮೇರಿ, ಯು.ಪಿ., ಶೋಭಾ, ಯು.ಪಿ., ಸುಭಾಶ್, ಯು.ಪಿ., ಸೌಮ್ಯ ಯು.ಪಿ., ಮ್ಯಾಥ್ಯು ಸಿ.ಎ., ಮತ್ತು ಲಿಡ್ವಿನ್ ಆಂಟೊನಿ ಉಪಸ್ಥಿತರಿದ್ದರು.
ಪ್ರಸ್ತುತ ಸಿಯೋನ್ ಆಶ್ರಮದಲ್ಲಿ 400ಕ್ಕೂ ಮಿಕ್ಕಿ ಅಂಗವಿಕಲರು, ಮಾನಸಿಕ ಅಸ್ವಸ್ಥರು ಹಾಗೂ ನಿರ್ಗತಿಕರಿದ್ದು ಮೂರು ಮಂದಿ ವೈದ್ಯರು, ಹತ್ತು ಮಂದಿ ದಾದಿಯರು ಹಾಗೂ 33 ಮಂದಿ ಇತರ ಸಿಬ್ಬಂದಿ ಅವರ ಸೇವೆ, ಶುಶ್ರೂಷೆಯಲ್ಲಿ ನಿರತರಾಗಿದ್ದಾರೆ ಎಂದು ಆಶ್ರಮದ ಸಂಚಾಲಕ ಯು.ಪಿ. ಪೌಲೋಸ್ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment