ಮಂಗಳೂರು: ನಗರದ ಹಿರಿಯ ಹ್ಯಾಮ್ ರೇಡಿಯೋ ನಿರ್ವಾಹಕ ಮಹಾಬಲ ಹೆಗ್ಡೆ (83) ಅವರು ಗುರುವಾರ ರಾತ್ರಿ ನಿಧನರಾದರು.
ಸುರತ್ಕಲ್ ನಿವಾಸಿಯಾಗಿದ್ದ ಅವರು, ಹಲವು ಮಂದಿ ಆಸಕ್ತರಿಗೆ ಹ್ಯಾಮ್ ರೇಡಿಯೋ ನಿರ್ವಹಣೆಯ ಬಗ್ಗೆ ಮಾಹಿತಿ- ಮಾರ್ಗದರ್ಶನ ಮಾಡಿದ್ದರು. ಮಂಗಳೂರು ಅಮೆಚೂರ್ ರೇಡಿಯೊ ಕ್ಲಬ್ ನ್ನು 1976ರಲ್ಲಿ ಹುಟ್ಟುಹಾಕಿ ಸ್ಥಾಪಕ ಅಧ್ಯಕ್ಷರಾಗಿ ಹಲವು ಹ್ಯಾಮ್ ರೇಡಿಯೊ ಹವ್ಯಾಸಿಗಳನ್ನು ಮಂಗಳೂರು ಪರಿಸರದಲ್ಲಿ ಬೆಳೆಸಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹ್ಯಾಮ್ ರೇಡಿಯೋ ನಿರ್ವಾಹಕರಾಗಿ ಅವರು ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಹಲವು ಮಂದಿ ಯುವ ಆಸಕ್ತರನ್ನು ಹ್ಯಾಮ್ ರೇಡಿಯೋ ಬಳಗಕ್ಕೆ ತಂದ ಕೀರ್ತಿ ಅವರದ್ದಾಗಿದೆ. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.
ವೃತ್ತಿಯಲ್ಲಿ ವಿಜಯಾ ಬ್ಯಾಂಕ್‌ನ ಹಿರಿಯ ಮ್ಯಾನೇಜರ್ ಆಗಿದ್ದ ಅವರು ಶಿಸ್ತಿಗೆ ಮತ್ತೊಂದು ಹೆಸರು ಎಂಬಂತಿದ್ದರು. ಅದಕ್ಕೂ ಮೊದಲು ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿದ್ದರು. ಅನಂತರ ಸ್ವಲ್ಪ ಕಾಲ ಸುರತ್ಕಲ್‌ನ ಕೆಆರ್‌ಇಸಿ/ ಎನ್‌ಐಟಿಕೆ ಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.
ಅವರ ನಿಧನಕ್ಕೆ ಮಂಗಳೂರು ಅಮೆಚೂರ್ ರೇಡಿಯೋ ಕ್ಲಬ್ (ಹವ್ಯಾಸಿ ರೇಡಿಯೋ ಬಳಗ) ಅಧ್ಯಕ್ಷ ವಿಷ್ಣುಮೂರ್ತಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Post a Comment