ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರ ಸಂಘದ (ಮಾನುಷಾ) ಸಹಯೋಗದೊಂದಿಗೆ ʼಭಾರತದಲ್ಲಿ ಪ್ರವಾಸೋದ್ಯಮʼ ಎಂಬ ಕುರಿತಾಗಿ ಇತ್ತೀಚೆಗೆ ಎರಡು ದಿನಗಳ ಆನ್‌ಲೈನ್ ಎಫ್‌ಡಿಪಿ (Faculty development program) ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜಯರಾಮ ಶೆಟ್ಟಿಗಾರ್, ʼಆಧುನಿಕತೆಯ ಪಥದಲ್ಲಿ ಪ್ರವಾಸೋದ್ಯಮʼ ಮತ್ತು ʼಪ್ರವಾಸೋದ್ಯಮದ ಸುಸ್ಥಿರ ಅಭಿವೃದ್ಧಿಯಲ್ಲಿ ವಸ್ತುಸಂಗ್ರಹಾಲಯಗಳ ಬದಲಾಗುತ್ತಿರುವ ಪಾತ್ರʼ ಎಂಬ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಸಂವಾದದಲ್ಲಿ ಪಾಲ್ಗೊಂಡ ಅವರು, “ಈಗ ನಾವು ವಿವಿಧ ಕಾರಣಗಳಿಗಾಗಿ ಸಾಂಸ್ಕೃತಿಕ ಕುರುಹುಗಳನ್ನು ನಾಶಪಡಿಸುತ್ತಿದ್ದೇವೆ. ಇದರಿಂದ ನಾವು ಆರ್ಥಿಕವಾಗಿ ಬಲಿಷ್ಠರಾಗಬಹುದು, ಆದರೆ ಸಾಂಸ್ಕೃತಿಕವಾಗಿ ಕುಗ್ಗಿಹೋಗುತ್ತೇವೆ,” ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ಪ್ರವಾಸೋದ್ಯಮ ಭಾರತದಲ್ಲಿ ಎರಡನೇ ಅತೀದೊಡ್ಡ ವಿದೇಶೀ ವಿನಿಮಯ ಗಳಿಸುವ ಕ್ಷೇತ್ರ. ಇದರಿಂದ ರಾಷ್ಟ್ರೀಯ ಏಕೀಕರಣದ ಜೊತೆಗೆ ಅಂತಾರಾಷ್ಟ್ರೀಯ ಸಂಬಂಧ ವೃದ್ಧಿ ಸಾಧ್ಯ, ಎಂದರು.
ಹಿರಿಯ ಪ್ರಾಧ್ಯಾಪಕ ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಡೆಸಿಕೊಟ್ಟರೆ, ವಿಭಾಗ ಮುಖ್ಯಸ್ಥೆ ಸಿ ರಾಜೇಶ್ವರಿ, ಡಾ. ಎನ್ ಜಯರಾಜ್, ಡಾ. ಮೀನಾಕ್ಷಿ, ಐಕ್ಯೂಎಸಿ ಸಂಯೋಜಕ ಡಾ. ಸುರೇಶ್ ಮೊದಲಾದವರು ಸಹಕರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment