ಪಾಣಾಜೆ: ನೆಟ್ಟಣಿಗೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಪವಿತ್ರ ಸ್ಥಳವಾದ ಜಾಂಬ್ರಿ ಗುಹೆಯ ಸುಂದರ ಪರಿಸರ ಇತ್ತೀಚೆಗೆ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳಿಂದ ತುಂಬಿರುವ ಹಿನ್ನೆಲೆಯಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ವತಿಯಿಂದ ಊರ ಸಹೃದಯಿ ಗ್ರಾಮಸ್ಥರ ನೆರವಿನೊಂದಿಗೆ ಆಗಸ್ಟ್ 1ರಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಬೆಳಗ್ಗೆ 7:30ರಿಂದ ಜಾಂಬ್ರಿ ಗುಹೆಯ ಸುತ್ತಮುತ್ತಲಿನ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವು ಬಾರಿ ಜಾಂಬ್ರಿ ಪರಿಸರವನ್ನು ಸ್ವಚ್ಛಗೊಳಿಸಿದ್ದು, ಊರಿನ ಪ್ರಜ್ಞಾವಂತ ಬಾಂಧವರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆದಿರುತ್ತದೆ.
ಅದರಂತೆ ಈ ಬಾರಿಯೂ ಕೂಡ ಈ ಒಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಹಾಗೂ ಪ್ರೀತಿಯಿಂದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮೂರಿನ ಎಲ್ಲ ನಾಗರೀಕರ ಅಚ್ಚುಮೆಚ್ಚಿನ ಸುಂದರ ತಾಣವಾದ ಜಾಂಬ್ರಿ ಗುಹೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವಲ್ಲಿ ನಮ್ಮೊಂದಿಗೆ ಕೈಜೋಡಿಸಿ ಈ ಕೆಲಸ ಯಶಸ್ವಿಯಾಗಲು ಸಹಕರಿಸಬೇಕಾಗಿ ಊರ ಸಮಸ್ತ ಸಹೃದಯಿ ನಾಗರೀಕರಲ್ಲಿ ಪ್ರೀತಿಪೂರ್ವಕವಾಗಿ ವಿನಂತಿಸುವುದಾಗಿ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪವಿತ್ರ ಜಾಂಬ್ರಿ ಗುಹೆಯ ಪರಿಸರ ಕುಡುಕರ ತಾಣವಾಗಿದ್ದು ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯಗಳಿಂದ ತುಂಬಿ ಹೋಗಿದೆ ಎಂದು ಊರಿನ ಹಿರಿಯರು ಹಾಗೂ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿರುವ ಗಿಳಿಯಾಲು ಮಹಾಬಲೇಶ್ವರ ಭಟ್ ಅವರು ಇತ್ತೀಚೆಗೆ ಮಾಧ್ಯಮಗಳ ಮೂಲಕ ಸಾರ್ವಜನಿಕರು ಹಾಗೂ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment