ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 95ರ ಹರಯದಲ್ಲೂ ಉಕ್ಕುವ ಜೀವನೋತ್ಸಾಹ: ಹೆಸರು- ಅಬ್ದುಲ್‌ ಕರೀಂ ಕಾಕ, ಮಾಡ್ತಿರೋದು ಅಂಬಿಗನ ಕಾಯಕ

95ರ ಹರಯದಲ್ಲೂ ಉಕ್ಕುವ ಜೀವನೋತ್ಸಾಹ: ಹೆಸರು- ಅಬ್ದುಲ್‌ ಕರೀಂ ಕಾಕ, ಮಾಡ್ತಿರೋದು ಅಂಬಿಗನ ಕಾಯಕ


ಇವರಿಗೆ 95 ಹರೆಯ. ಅಡ್ಡೂರಿನ ಫಲ್ಗುಣಿ ನದಿಯಲ್ಲಿ ಅಂಬಿಗನ ಕಾಯಕ. ಏಳು ವರ್ಷದ ಬಾಲಕನಾಗಿದ್ದ ಸಂದರ್ಭ ದೋಣಿಗೆ ಹುಟ್ಟು ಹಾಕಲು ಆರಂಭಿಸಿದ ಅಬ್ದುಲ್ ಕರೀಂ- ಈಗ 95ರ ಇಳಿ ವಯಸ್ಸಿನಲ್ಲೂ ಹರಿವ ನದಿಯಲ್ಲಿ ದೋಣಿ ಚಲಾಯಿಸುವ ಕಾಯಕ ಜೀವಿಯ ಸ್ಪೂರ್ತಿದಾಯಕ ಕಥೆಯಿದು.


ಇಳಿವಯಸ್ಸಿನಲ್ಲೂ ಕಾಯಕ ಬಿಡದ ಹಿರಿಯ ಜೀವ, ಜನರು ಈಗ ಪ್ರಯಾಣಕ್ಕಾಗಿ ದೋಣಿ ಬಳಸದಿದ್ದರೂ ಈ ನಿತ್ಯ ನಾವಿಕನಿಂದ ದೋಣಿ ವಿಹಾರ ತಪ್ಪದೇ ನಡೆಯುತ್ತದೆ...!


ಹಿಡಿದ ಕೆಲಸವನ್ನು ಬಿಡದೆ ತಪಸ್ಸಿನಂತೆ ಮಾಡುವ ಅಡ್ಡೂರಿನ ಅಬ್ದುಲ್ ಕರೀಂ ಅವರ ಈ ಕಾಯಕ ನಿಷ್ಠೆ ಯುವ ಪೀಳಿಗೆಗೆ ಮಾದರಿ.


ಹೌದು, ಹಿಂದೆ ಒಂದೂರಿನಿಂದ ಇನ್ನೊಂದು ಊರಿಗೆ ತೆರಳಲು, ನದಿ ದಾಟಲು,  ಸಂಪರ್ಕಕ್ಕೆ ಜನರು ನಾಡದೋಣಿ, ತೆಪ್ಪ, ಹೀಗೆ ಬೇರೆ ಬೇರೆ ವಿಧಾನಗಳನ್ನು ಬಳಸುತ್ತಿದ್ದರು. ಅದರಂತೆ ಅಡ್ಡೂರಿನ ಮೊಯಿದ್ದೀನಾಕ ಅವರ ಎರಡನೇ ಪುತ್ರ ಅಬ್ದುಲ್ ಕರೀಂ ತಮ್ಮ 7ನೇ ವಯಸ್ಸಿನಲ್ಲಿ ಹೊಟ್ಟೆಪಾಡಿಗಾಗಿ ನಾವಿಕ ವೃತ್ತಿ ಆರಂಭಿಸಿದರು. ಅದರ  ಮೂಲಕ ತಮ್ಮ ಜೀವನ ನಡೆಸ್ತಾ ಬಂದ ಅವರು, ಇಂದು ಹೊಟ್ಟೆಪಾಡಿಗೆ ಇದರ ಅಗತ್ಯವಿಲ್ಲದಿದ್ದರೂ ನಾವಿಕನ ಕಾಯಕವನ್ನು ಮಾತ್ರ ಮುಂದುವರಿಸಿದ್ದಾರೆ. ದಿನಕ್ಕೊಂದು ಬಾರಿ ಖಾಲಿ ದೋಣಿಯಾದರೂ ಸೈ, ನದಿಯಲ್ಲಿ ವಿಹರಿಸದೆ ಇರುವುದಿಲ್ಲ.




ಹಿಂದೆ ಅಡ್ಡೂರಿನಿಂದ ಮಂಗಳೂರು ಬಂದರು ಪ್ರದೇಶಕ್ಕೆ ದೋಣಿಗಳ ಮೂಲಕ ಸರಕು ಸಾಗಾಟ ಮಾಡಿ 6 ಆಣೆಗೆ ನಿತ್ಯ ದುಡಿದು ಜೀವನ ನಡೆಸುತ್ತಾ ಬಂದವರು ಅಬ್ದುಲ್ ಕರೀಂ. ಅಂದು ತಮ್ಮ ಕುಟುಂಬದ ಕೈ ಹಿಡಿದ ಕಾಯಕವನ್ನು ಬಿಡಬಾರದು ಎಂಬ ನಿಟ್ಟಿನಲ್ಲಿ ಇಂದಿಗೂ ಈ ಹಿರಿಯ ಜೀವ ನಾವಿಕ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಒಂದು ದಿನ ನದಿ ತಟಕ್ಜೆ ಹೋಗಿ ದೋಣಿ ಮೂಲಕ ಸಂಚಾರ ಮಾಡದಿದ್ದರೆ ನಿದ್ದೆ ಬರಲ್ಲ ಅಂತಾರೆ ಅಬ್ದುಲ್ ಕರೀಂ...


ಈ ಹಿಂದೆ ವೃತ್ತಿಗಾಗಿ ದೋಣಿ ಮೂಲಕ ತಮ್ಮ ಕಿರಿಯ ವಯಸ್ಸಿನಲ್ಲಿ ಸರಕು ಸಾಗಾಟ ಮಾಡಿದರೆ, ಮುಂದೆ ತಮ್ಮ ಊರು ಅಡ್ಡೂರು ಹೊಳೆ ಬದಿಯಿಂದ ಪಾಲ್ಗುಣಿ ನದಿ ಮೂಲಕ ಪಕ್ಕದ ಊರಾದ ಉದ್ದಬೆಟ್ಟಿಗೆ ಜನರ ಪ್ರಯಾಣಕ್ಕೆ ದೋಣಿ ಚಲಾವಣೆ ಮಾಡುತ್ತಾ ಬಂದರು. ಆ ಸಮಯದಲ್ಲಿ ಯಾರಾದರೂ ಹಣವಿಲ್ಲದೆ ಬಂದರೆ ಅವರನ್ನು ಸುರಕ್ಷಿತವಾಗಿ ಮತ್ತು ಉಚಿತವಾಗಿ ದಡ ಸೇರಿಸುವ ಕಾರ್ಯ ಮಾಡುತ್ತಿದ್ದರು ಈ ಹಿರಿಯಜ್ಜ. ಇವರಿಂದ ಸಹಾಯ ಪಡೆದ ಅದೆಷ್ಟೋ ಮಂದಿ ದೂರದ ಊರಿನಲ್ಲಿ ವೃತ್ತಿಯಲ್ಲಿದ್ದರೂ ಇಂದಿಗೂ ಇವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಹೋಗುತ್ತಾರೆ. ನಿತ್ಯ ಮುಂಜಾನೆ 7 ಗಂಟೆ ಕರೀಂ ಅವರು ನದಿ ತಟಕ್ಕೆ ಬಂದು ದೋಣಿಯನ್ನು ಸ್ವಚ್ಚಗೊಳಿಸಿ ಸಂಜೆ ವರೆಗೂ ಜನರು ಬಂದರೆ ದೋಣಿ ಸೇವೆ ಕೊಡುತ್ತಾರೆ.


ಇಳಿ ವಯಸ್ಸಿನ ಜೀವನೋತ್ಸಾಹ, ಕಾಯಕ ಪ್ರೀತಿಯ ಮೂಲಕ ಕರೀಂ ಕಾಕ ಇಂದಿನ ಯುವ ಸಮುದಾಯಕ್ಕೆ ಒಂದು ಪಾಠವಾಗಿದ್ದಾರೆ.


Key Words: Abdul Kareem, Boating, Palguni river, ಫಲ್ಗುಣಿ ನದಿ, ಜೀವನೋತ್ಸಾಹ, ಅಬ್ದುಲ್ ಕರೀಂ ಕಾಕ, ಅಂಬಿಗನ ಕಾಯಕ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post