ಗಿಡದ ಬುಡದಲ್ಲಿ ಮಣ್ಣಿನ ಮಡಕೆಯನ್ನು ಕಂಠಮಟ್ಟಕ್ಕೆ ಹುಗಿದು ಅದಕ್ಕೆ ನೀರು ತುಂಬುವ ಮೂಲಕ ಮಣ್ಣಿನಲ್ಲಿ ತೇವಾಂಶ ಕಾಯ್ದುಕೊಳ್ಳುವ ಕ್ರಮ ಹಿಂದೆ ಬಳಕೆಯಲ್ಲಿತ್ತು.
ತೋಟಗಾರಿಕಾ ಬೆಳೆಗಳಿಗೆ ಇದು ಸೂಕ್ತ. ಒಂದೆರಡು ವರ್ಷ ಬೇಸಿಗೆಯಲ್ಲಿ ಎರಡು ವಾರಕ್ಕೊಮ್ಮೆ ಹೀಗೆ ನೀರುಣಿಸಿದರೆ ಗಿಡ ಚೆನ್ನಾಗಿ ಬೇರಿಳಿಸಿ ಬೆಳೆಯಲು ಅನುಕೂಲ. ಸಣ್ಣ ಹಿಡುವಳಿ ಹಾಗೂ ನೀರಿನ ಲಭ್ಯತೆ ತುಂಬ ಕಡಿಮೆ ಇರುವಲ್ಲಿಗೆ ಈ ವಿಧಾನ ಸೂಕ್ತ. ಇದೊಂದು ಸುಲಭ ವೆಚ್ಚದ ಪರಿಸರಸ್ನೇಹಿ ಸರಳ ತಂತ್ರಗಾರಿಕೆ.
ಮಡಕೆ ನೀರಾವರಿ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಒಲವು ವ್ಯಕ್ತವಾಗುತ್ತಿದೆ. ನೀರಿನ ಮರು ಬಳಕೆ/ಮಿತ ಬಳಕೆಗೆ ಒತ್ತುನೀಡುವವರು ಹಾಗೂ ಸಾವಯವ ಕೃಷಿ ಮಾಡುತ್ತಿರುವವರು ಅಲ್ಲಲ್ಲಿ ಈ ಪದ್ಧತಿ ಅಳವಡಿಸಿದ್ದಾರೆ.
ಮಡಕೆ ನೀರಾವರಿಯಲ್ಲೂ ವಿಭಿನ್ನ ವಿಧಾನಗಳಿವೆ. ಕೆಲವರು ಈ ಉದ್ದೇಶಕ್ಕಾಗಿಯೇ ಸಿದ್ಧಪಡಿಸಿದ ಮಡಕೆಯನ್ನು (ಕುಜಿಲಿ) ಅದರ ಕತ್ತಿನ ವರೆಗೆ ಗಿಡದ ಬುಡದಲ್ಲಿ ಹೂತಿಡುತ್ತಾರೆ. ಇಂತಹ ಮಡಕೆಗಳ ಮೇಲ್ಮೈಯಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ ನೀರಿನ ಪಸೆ (ತೇವಾಂಶ) ಸುತ್ತಲಿನ ಮಣ್ಣಿಗೆ ಒಸರುತ್ತದೆ. ಇನ್ನು ಕೆಲವರು ಸಾದಾ ಮಡಕೆಯ ತಳ ಭಾಗದಲ್ಲಿ ಸಣ್ಣ ತೂತು ಕೊರೆದು ಸೆಣಬಿನ ಅಥವಾ ತೆಂಗಿನ ನಾರಿನ ದಾರವನ್ನು ಮಡಕೆಯೊಳಗೆ ತೂರಿಸಿ ಗಂಟುಹಾಕಿ, ದಾರದ ಇನ್ನೊಂದು ಬದಿಯನ್ನು ಗಿಡದ ಬುಡದಲ್ಲಿ ಸುತ್ತಲೂ ಹರಡುತ್ತಾರೆ. ಮಡಕೆಯೊಳಗಿನ ನೀರು ಈ ದಾರದ ಮೂಲಕ ನಿಧಾನವಾಗಿ ಮಣ್ಣಿಗೆ ಸೇರುತ್ತದೆ. ಮಡಕೆಗೆ ಸಾಸರ್ ನಂತಿರುವ ಮಣ್ಣಿನ ಮುಚ್ಚಳ ಅಳವಡಿಸಿ ಅದರಲ್ಲಿಯೂ ನೀರು ತುಂಬಿ ಆ ಪ್ರದೇಶದ ಇತರ ಜೀವಚರಗಳಿಗೂ ನೀರಾಶ್ರಯ ಕಲ್ಪಿಸುವವರೂ ಇದ್ದಾರೆ. ಈ ಮುಚ್ಚಳದಿಂದ ನೀರು ಕುಡಿಯುವ ಹಕ್ಕಿ ಅಲ್ಲೇ ಹಿಕ್ಕೆ ಹಾಕುತ್ತದೆ ಮತ್ತು ಅದು ಗಿಡಕ್ಕೆ ಪೋಷಕಾಂಶ ಒದಗಿಸುತ್ತದೆ ಎಂಬುದು ಪ್ಲಸ್ ಪಾಯಿಂಟ್.
ಹಣ್ಣಿನ ಗಿಡಗಳು ಒಮ್ಮೆ ಮೇಲಕ್ಕೆದ್ದರೆ ನಂತರ ಅವಕ್ಕೆ ಮಡಕೆಯ ಅಗತ್ಯ ಇರುವುದಿಲ್ಲ. ಹೀಗಾಗಿ ಆ ಮಡಕೆಗಳನ್ನು ತೆಗೆದು ಹೊಸದಾಗಿ ನೆಡುವ ಗಿಡಗಳಿಗೆ ಉಪಯೋಗಿಸಬಹುದು. ಮಣ್ಣಿನ ಮಡಕೆಗಳಾದ್ದರಿಂದ ಅವನ್ನು ಅಲ್ಲೇ ಬಿಟ್ಟರೂ ಮಣ್ಣಿಗೆ ಬಾಧಕವೇನಿಲ್ಲ. ಈ ಕಾರಣಕ್ಕೆ ಪರಿಸರದ ಹಿತದೃಷ್ಟಿಯಿಂದಲೂ ಈ ವಿಧಾನ ಹೆಚ್ಚು ಮಹತ್ವದ್ದು.
ಮಡಕೆ ನೀರಾವರಿ ಮಾಡುತ್ತಿರುವವರ ಅನುಭವಗಳನ್ನು ಕಲೆಹಾಕಿ ಸಣ್ಣ ಪುಸ್ತಕ ರೂಪದಲ್ಲಿ ಹೊರತರುವ ಯೋಚನೆಯಿದೆ. ದಯವಿಟ್ಟು ಇದನ್ನು ಅಳವಡಿಸಿರುವವರು ಅಥವಾ ಅಂಥವರ ಬಗ್ಗೆ ತಿಳಿದಿರುವವರು ನನಗೊಂದು ಸಂದೇಶ (ಎಸೆಮ್ಮೆಸ್/ವಾಟ್ಸಪ್ ಅಥವಾ ಇಮೇಲ್) ಕಳಿಸಿದರೆ ಅವರನ್ನು ಸಂಪರ್ಕಿಸಿ ವಿವರ ಪಡೆಯಲು ಅನುಕೂಲವಾಗುತ್ತದೆ. ಈ ವಿಧಾನವನ್ನು ಪ್ರಚುರಪಡಿಸುತ್ತಿರುವ ಸಂಘಸಂಸ್ಥೆಗಳಿದ್ದರೆ ಆ ಬಗ್ಗೆ ಕೂಡ ತಿಳಿಸುವಂತೆ ಕೋರಿಕೆ.
-ಶಿವರಾಂ ಪೈಲೂರು, ಬೆಂಗಳೂರು
SMS/WhatsApp - 9483757707
Email - shivarampailoor@gmail.com
*****
Seeking information on pitcher irrigation practices
I am compiling the experiences of farmers who have adopted pitcher irrigation method in their farms. This is a simple, cost-effective, eco-friendly practice best-suited for small holdings where water availability is scarce. There has been a renewed interest in pitcher irrigation in recent years. Those who stress on water reuse and judicious use and those who are into organic farming have been trying this method. I request individuals and organisations who have been practicing pitcher irrigation or those with the knowledge of this method to message me.
Shivaram Pailoor, Bengaluru
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment