ಚಾಮರಾಜನಗರ: ಇಲ್ಲಿನ ನಂಜನಗೂಡು ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಗೆ ಜಲ್ಲಿ ತುಂಬಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮದಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಸೋಮವಾರ ಬೆಳಿಗ್ಗೆ ನಡೆದಿದೆ.
ಚಾಲಕ, ಹನೂರು ತಾಲ್ಲೂಕಿನ ಚಿಂಚಹಳ್ಳಿ ಗ್ರಾಮದ ಸುದೇಶ್ (30) ವರ್ಷ ಹಾಗೂ ಟಿಪ್ಪರ್ ಮಾಲೀಕ ಹನೂರಿನ ಆರ್.ಎಸ್.ದೊಡ್ಡಿಯ ಮಹದೇವಪ್ಪ ಅವರ ಮಗ ಲೋಕೇಶ್ (23) ವರ್ಷ ಮೃತಪಟ್ಟವರು.
ರಸ್ತೆ ನಿರ್ಮಾಣಕ್ಕಾಗಿ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಜಲ್ಲಿ ತುಂಬಿಕೊಂಡಿದ್ದ ಟಿಪ್ಪರ್, ನಗರದ ಮೂಡ್ಲುಪುರ ಬಡಾವಣೆಯಿಂದ ಆರಂಭವಾಗುವ ಬೈಪಾಸ್ ರಸ್ತೆ ಮೂಲಕ ನಂಜನಗೂಡು ಮುಖ್ಯರಸ್ತೆ ಮಾರ್ಗದಲ್ಲಿ ಹನೂರಿಗೆ ತೆರಳುತ್ತಿತ್ತು.
ಈ ವೇಳೆಯಲ್ಲಿ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು, ಮೇಲ್ಸೇತುವೆ ಗೋಡೆಗೆ ಡಿಕ್ಕಿ ಹೊಡೆಯಿತು. ಇದರಿಂದಾಗಿ ಟಿಪ್ಪರ್ ನ ಮುಂಭಾಗ ನಜ್ಜು ಗುಜ್ಜಾಗಿದ್ದು, ಅದರಲ್ಲಿದ್ದ ಸುದೇಶ್ ಹಾಗೂ ಲೋಕೇಶ್ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಸಂಚಾರ ಠಾಣೆ ಸಬ್ ಇನ್ ಸ್ಪೆಕ್ಟರ್ ನಂದೀಶ್ ಕುಮಾರ್, ಪಟ್ಟಣ ಠಾಣೆ ಇನ್ ಸ್ಪೆಕ್ಟರ್ ಮಹೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಈ ಬಗ್ಗೆ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment