ಉತ್ತಮ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸದಿಂದ “ಸಿರಿ” ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ
ಉಜಿರೆ: ಮಹಿಳೆಯರು, ಮಹಿಳೆಯರಿಂದ ಹಾಗೂ ಮಹಿಳೆಯರಿಗಾಗಿ ವ್ಯವಹಾರ ನಡೆಸುವ ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆ ಲಾಭ ರಹಿತ ಸಂಸ್ಥೆಯಾಗಿದ್ದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಕಾಯಕಲ್ಪ ನೀಡುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಶ್ರೀ ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆಗೆ ಸಿರಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೊಡುಗೆಯಾಗಿ “ಮಾರುತಿ ಇಕೊ” ವಾಹನ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸದ ಸಿರಿ ಉತ್ಪನ್ನಗಳಿಗೆ ರಾಜ್ಯದೆಲ್ಲೆಡೆ ಹೆಚ್ಚಿನ ಬೇಡಿಕೆ ಇದೆ. “ಸಿರಿ” ಆಶ್ರಯದಲ್ಲಿ ರಾಜ್ಯದಲ್ಲಿ ನಾಲ್ಕು ಸಾವಿರ ಮಹಿಳೆಯರು ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಂದೂವರೆ ಸಾವಿರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಸಿರಿ ಉತ್ಪನ್ನಗಳ ಮಾರಾಟಕ್ಕೆ ಸಾಕಷ್ಟು ಸವಾಲುಗಳು, ಸಮಸ್ಯೆಗಳು ಹಾಗೂ ತೀವ್ರ ಪೈಪೋಟಿ ಇದ್ದರೂ ಉತ್ತಮ ಗುಣಮಟ್ಟದಿಂದಾಗಿ ಗ್ರಾಹಕರಿಂದ ಸಿರಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಮಾಜದಿಂದ ಉತ್ತಮ ಪ್ರೋತ್ಸಾಹ ಮತ್ತು ಸಹಕಾರದಿಂದ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಬ್ಯಾಂಕ್ ಆಫ್ ಬರೋಡಾದ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು.
ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕರಾದ ಗಾಯತ್ರಿ ಮಾತನಾಡಿ ಆರಂಭದ ಹಂತದಲ್ಲಿ ವಿಜಯಾ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರಾಗಿ ಹಾಗೂ ಬ್ಯಾಂಕಿನ ಪ್ರಗತಿಯಲ್ಲಿ ಹೆಗ್ಗಡೆಯವರ ಪ್ರೋತ್ಸಾಹ, ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಬ್ಯಾಂಕ್ ಆಫ್ ಬರೋಡಾದ ಡಿ.ಜಿ.ಎಂ. ಗೋಪಾಲಕೃಷ್ಣ ಮಾತನಾಡಿ, ಬ್ಯಾಂಕಿನ ವತಿಯಿಂದ ವಾಹನ ಕೊಡುಗೆ ಧರ್ಮಸ್ಥಳದ ಸೇವಾ ಕಾರ್ಯಕ್ಕೆ ಅಳಿಲ ಸೇವೆಯಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಸಿರಿ ಸಂಸ್ಥೆಯು ಪ್ರತೀ ವರ್ಷ ಮೂವತ್ತು ಕೋಟಿ ರೂ. ಗೂ ಮಿಕ್ಕಿದ ವ್ಯವಹಾರ ನಡೆಸುತ್ತಿದೆ. ಮಹಿಳಾ ಸಬಲೀಕರಣಕ್ಕೆ ಪ್ರೇರಕ ಶಕ್ತಿಯಾಗಿದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಮಹಿಳೆಯರು ಅವಕಾಶದ ಸದುಪಯೋಗ ಮಾಡಿ ಉನ್ನತ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದೆಲ್ಲೆಡೆ ಮೂರು ತಿಂಗಳು ಸಿರಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಹಿರಿಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಬ್ಯಾಂಕ್ ಆಫ್ ಬರೋಡಾದ ಧರ್ಮಸ್ಥಳ ಶಾಖೆಯ ಪ್ರಬಂಧಕ ವಿಜಯ ಪಾಟೀಲ್ ಸ್ವಾಗತಿಸಿದರು. ವಸಂತಿ ಧನ್ಯವಾದವಿತ್ತರು. ಮಾರುಕಟ್ಟೆ ಪ್ರಬಂಧಕ ಜೀವನ್ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment