ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮರಳಿ ಮಣ್ಣಿಗೆ: 'ಕೃಷಿ ಸಂಸ್ಕೃತಿ' ಪುನರುಜ್ಜೀವನ ಉಪಕ್ರಮ

ಮರಳಿ ಮಣ್ಣಿಗೆ: 'ಕೃಷಿ ಸಂಸ್ಕೃತಿ' ಪುನರುಜ್ಜೀವನ ಉಪಕ್ರಮ



"ಬನ್ನಿ.. ಸಮೃದ್ಧಿ, ಸೌಮಾಂಗಲ್ಯಕಾರಕ ಕೃಷಿಯಲ್ಲಿ ತೊಡಗೋಣ" ಎನ್ನುತ್ತಾ ಹಡೀಲು ಭೂಮಿ ಬೇಸಾಯದ ಅಭಿಯಾನ ಹಲವು ವರ್ಷಗಳಿಂದ ಅಲ್ಲಿ- ಇಲ್ಲಿ ಎಂಬಂತೆ ನಡೆಯುತ್ತಿತ್ತು. ಆದರೆ ಈ ವರ್ಷವಂತೂ ಉಭಯ ಜಿಲ್ಲೆಗಳ ಎಲ್ಲೆಡೆ ಪರಿಣಾಮಕಾರಿಯಾಗಿ ಬಹಳ ಉತ್ಸಾಹದಿಂದ ನೆರವೇರುತ್ತಿದೆ. ಬಹುತೇಕ ಹಡೀಲು ಗದ್ದೆಗಳು ಹಸಿರಿನಿಂದ ತುಂಬುತ್ತಿವೆ; ಕಳೆಗಿಡಗಳಿಂದಲ್ಲ ನೇಜಿ (ಭತ್ತದ ಸಸಿ) ನಾಟಿಯಿಂದ.  


ಮಳೆಗಾಲ ಆರಂಭವಾಗುತ್ತಿರುವಂತೆ ಎಲ್ಲೆಡೆ ಹಸಿರು ಚಿಗುರುತ್ತವೆ, ಕೃಷಿ ಭೂಮಿಯಲ್ಲೂ ಒಂದಷ್ಟು ಹುಲ್ಲು ಬೆಳೆಯುತ್ತದೆ. ರೈತ ಗದ್ದೆಗಿಳಿದು ಬೇಸಾಯಕ್ಕೆ ತೊಡಗದಿದ್ದರೆ ಕಳೆಗಿಡಗಳು, ಗಿಡಗಂಟಿಗಳು ಬೆಳೆಯುತ್ತವೆ. ವರ್ಷಗಟ್ಟಲೆ ಗದ್ದೆಗಿಳಿಯದಿದ್ದರೆ ಆ ಭೂಮಿ ಹಡೀಲು ಭೂಮಿಯಾಗುತ್ತದೆ. ಇಂತಹ ಗದ್ದೆಗಳಲ್ಲಿ‌ ಮತ್ತೆ ಬೇಸಾಯ ಆರಂಭಿಸುವುದಕ್ಕೆ ಮನಸ್ಸು ಬೇಕು, ಪ್ರಯತ್ನಬೇಕು, ಇಚ್ಛಾಶಕ್ತಿ ಬೇಕು. ಈ ಪ್ರಾಮಾಣಿಕ ಸಾಹಸ ಈಗ ನಡೆಯುತ್ತಿವೆ. ಹೇಗೆ ನಡೆಯುತ್ತಿದೆ, ಯಾರೆಲ್ಲ ಭಾಗವಹಿಸುತ್ತಿದ್ದಾರೆ ಎಂಬುದು ಮುಖ್ಯ. ಇದರಿಂದ ಅಭಿಯಾನದ ಭವಿಷ್ಯವನ್ನು ಕಲ್ಪಿಸಬಹುದು.  


'ಹಡೀಲು ಭೂಮಿ ಬೇಸಾಯ' ಈ ಅಭಿಯಾನದ ಸಂಘಟಕರು ಯಾರು, ಯಾರ ನೇತೃತ್ವದಲ್ಲಿ ಈ ಅಭಿಯಾನ ಹಳ್ಳಿಹಳ್ಳಿಗಳಲ್ಲೂ ನಡಯುತ್ತಿವೆ ಎನ್ನುವಷ್ಟೇ ಗದ್ದೆಗಳಲ್ಲಿ ಯಾರು ಸಕ್ರಿಯರಾಗಿದ್ದಾರೆ ಎಂಬುದನ್ನು ಗಮನಿಸಿದರೆ ಈ ಅಭಿಯಾನದ ಭವಿಷ್ಯವನ್ನು ಸಹಜವಾಗಿ ತರ್ಕಿಸಬಹುದು.


ಯುವಕರು, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಹೈಸ್ಕೂಲ್ ವಿದ್ಯಾರ್ಥಿಗಳು, ಎನ್‌ಸಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಸಕ್ರಿಯ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಮಣ್ಣಿನೊಂದಿಗೆ ಹೊಂದಿಕೊಳ್ಳುತ್ತಿದ್ದಾರೆ. ಆಟಿಯಲ್ಲಿ ಒಂದು ದಿನ, ಕೆಸರಿನಲ್ಲಿ ಒಂದು ದಿನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳಿಂದ ಮಣ್ಣಿನ ಗಂಧವನ್ನು ಗ್ರಹಿಸಿದ್ದ ಬಾಲಕರು, ವಿದ್ಯಾರ್ಥಿಗಳು, ಯುವಕರು ಆಟ ಆಡಲು ಗದ್ದೆಗಿಳಿದಿದ್ದರೆ ಈಗ ಕ್ರಮೇಣ ಗದ್ದೆಗೆ ಕೃಷಿ ಕಾಯಕಕ್ಕಾಗಿ ಇಳಿಯುತ್ತಿದ್ದಾರೆ. ಈ ಬದಲಾದ ಮನೋಧರ್ಮಗಳು ಗದ್ದೆಗಳಲ್ಲಿ ಓಡಾವುದನ್ನು ಕಂಡರೆ ನಿರೀಕ್ಷೆಗಳು ಬಲವಾಗುತ್ತವೆ. ಬೇಸಾಯ ಮತ್ತೆ ಸಂಭ್ರಮಿಸುತ್ತದೆ ಎಂದನ್ನಿಸುತ್ತದೆ. ಅಭಿಯಾನ ಯಶಸ್ವಿಯಾಗುವುದು ಯುವ ಸಮುದಾಯದ ಪ್ರಾಮಾಣಿಕ ಉತ್ಸಾಹದಿಂದ ತಾನೆ? ಸಂಘಟನೆಗಳ ಕೆಲಸವೂ ಮುಖ್ಯವೇ. ಆದರೆ ಯುವಕರು, ವಿದ್ಯಾರ್ಥಿಗಳು, ಬಾಲಕರು ಮುನ್ನೆಲೆಗೆ ಬರಬೇಕು.


ಕೊರೊನ ಕಾರಣವಾಗಿ ಪರವೂರಿನಲ್ಲಿ, ಪರದೇಶಗಳಲ್ಲಿ ಬೇರೆಬೇರೆ ಉದ್ಯೋಗಗಳಲ್ಲಿ ದುಡಿಯುತ್ತಿದ್ದವರು ಹುಟ್ಟೂರಿಗೆ ಹಿಂದಿರುಗಿದ್ದರು. ತಮ್ಮ ಗದ್ದೆಗಳು ಹಡೀಲು ಬಿದ್ದ ಬಗ್ಗೆ ಮನಗಂಡಿದ್ದಾರೆ. ಸ್ವಲ್ಪ ಮಟ್ಟಿಗೆ ಕೃಷಿಗೆ ತೊಡಗಿದ್ದೂ ಇದೆ, ಗದ್ದೆಗೂ ಇಳಿದದ್ದೂ ಇದೆ. ಪ್ರಸ್ತುತ ಮರಳಿ ಉದ್ಯೋಗದತ್ತ ಹಿಂದಿರುಗಿದರೂ ನಿವೃತ್ತಿಯ ಬಳಿಕ ಮತ್ತೆ ಹುಟ್ಟೂರಿಗೆ ಬಂದು ಬೇಸಾಯದ ಭೂಮಿಗಳಲ್ಲಿ ಕೃಷಿಗೆ ಪ್ರವೃತ್ತರಾಗಬೇಕೆಂಬ ಆಲೋಚನೆ ಇದೆ, ಇಲ್ಲ ನಿಶ್ಚಯಿಸಿದ್ದೇವೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗಾದರೆ 'ಕೃಷಿ ಸಂಸ್ಕೃತಿ' ಮರಳಿ ಒದಗಿಬರುತ್ತದೆ?   

ಕೃಷಿ ಎಂದರೆ ಸುಭಿಕ್ಷೆ:

ಭಾರತ ಹಳ್ಳಿಗಳ ದೇಶ, ಕೃಷಿಯೇ ಜೀವನಾಧಾರವಾಗಿ ಅಭಿವೃದ್ಧಿ ಹೊಂದಿದ ದೇಶ. ನಮ್ಮ ಸಂಪತ್ತಿನ- ಆರ್ಥಿಕ ಸಬಲತೆಯ ಮೂಲವೇ 'ಕೃಷಿ'. 'ಕೃಷಿ ಎಂದರೆ ಸುಭಿಕ್ಷೆ, ಆದುದರಿಂದ ಅತಿಶಯ ಕೃಷಿ ಹುಟ್ಟುವಳಿಯಿಂದ ಖಂಡಿತಾ ದುರ್ಭಿಕ್ಷೆ ಇಲ್ಲ'. ಇದನ್ನು ನಂಬಿ ನಮ್ಮ ಪೂರ್ವಸೂರಿಗಳು ಬದುಕು ಕಟ್ಟಿದರು ಸುಭಗತೆ, ಸಿರಿವಂತಿಕೆಯ ಬಾಳು ಬಾಳಿದರು.


ನದಿ ದಡಗಳಲ್ಲಿ 'ಕೃಷಿ ಸಂಸ್ಕೃತಿ' ಬೆಳೆಯಿತು, ನಾಗರಿಕತೆ ಸಹಜವಾಗಿ ವಿಕಾಸಗೊಂಡಿತು. ಅದ್ಭುತ ಜ್ಞಾನ, ದೇಸಿ ಅನುಭವಗಳಿಗೆ ಕೃಷಿಯಾಧರಿತ ಬದುಕು ಆಧಾರವಾಯಿತು. ಬಹುತೇಕ ಭಾರತೀಯ ಉತ್ಕೃಷ್ಟ ದರ್ಶನಗಳು ಅರಣ್ಯದಿಂದ ಬಂದುವು, ಕೃಷಿ ಬದುಕಿನೊಂದಿಗೆ ಸಮ್ಮಿಳಿತಗೊಂಡು ಉದಾತ್ತ ಆದರ್ಶ- ಮೌಲ್ಯ'ಗಳಾದುವು. ನಮ್ಮದೇಶ ವಿಶ್ವಕ್ಕೆ "ಉಪದೇಶಕ" ಸ್ಥಾನಕ್ಕೆ ಏರಲು ಕೃಷಿಯಿಂದ ಪ್ರಾಪ್ತಿಯಾದ ಸೌಭಾಗ್ಯ- ಸುಭಿಕ್ಷೆ ಕಾರಣ, ಆ ಹಂತದಲ್ಲಿ ಜೀವನ ಧರ್ಮಕ್ಕೆ ಶಿಷ್ಟ- ಜನಪದ ವ್ಯಾಖ್ಯಾನ ದೊರೆಯಿತು, ಈ ಜ್ಞಾನ ಕೃಷಿಯ ಮಹೋನ್ನತ ಕೊಡುಗೆ. 'ಸುಭಿಕ್ಷಂ ಕೃಷಕೇ ನಿತ್ಯಂ... - ವ್ಯವಸಾಯಗಾರನಿಗೆ ನಿತ್ಯವೂ ಸುಭಿಕ್ಷವೇ' ಎಂಬ ಮಾತು ಜನಜನಿತವಾಗಿತ್ತು. 


-ಕೆ.ಎಲ್.ಕುಂಡಂತಾಯ 

(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post