ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಹುಮುಖ ಪ್ರತಿಭೆ ಅಧಿತಿ .ಆರ್.ರೈ.

ಬಹುಮುಖ ಪ್ರತಿಭೆ ಅಧಿತಿ .ಆರ್.ರೈ.

 


Adithi

ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲಿ ಕಠಿಣತೆಯನ್ನು ಹುಡುಕಿದರೆ ಆಶಾವಾದಿ ಪ್ರತಿಯೊಂದು ಕಠಿಣತೆಯಲ್ಲಿ ಅವಕಾಶವನ್ನು ಹುಡುಕುತ್ತಾನೆ.ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ.ಆದರೆ ಪ್ರಯತ್ನಗಳನ್ನೇ ಮಾಡದಿರುವುದು ಜೀವನದ ಅತೀ ದೊಡ್ಡ ಸೋಲು.


           ಮನಸ್ಸು ಹಾಗೂ ದೇಹದ ಐಕ್ಯತೆಯೇ ಯೋಗ.ನಿರಂತರ ಯೋಗಾಭ್ಯಾಸದಿಂದ ಜ್ಞಾನದೀಪ್ತಿಯು ಪರಿಶುದ್ಧತೆಯನ್ನು ಪಡೆಯುತ್ತದೆ.'ಯೋಗದಿಂದ ರೋಗ ದೂರ' ,'ಯೋಗದಿಂದಲೇ ಯೋಗ್ಯ ವಿದ್ಯಾರ್ಥಿ'ಎನ್ನುವ ಮಾತಿನಂತೆ ಯೋಗವನ್ನು ಸವಾಲಾಗಿ ಸ್ವೀಕರಿಸದೆ ಭಾವನಾತ್ಮಕವಾಗಿ ಯೋಗದತ್ತ ಚಿತ್ತ ಹರಿಸಿದರೆ ಸ್ವಸ್ಥ ಆರೋಗ್ಯ,ಪರಿಶುದ್ಧ ಮನಸ್ಸು ನಮ್ಮದಾಗುತ್ತದೆ. 


ತನ್ನ ಕಠಿಣ ಗುರಿ ಹಾಗೂ ನಿರಂತರ ಪರಿಶ್ರಮದಿಂದ  ಯೋಗ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿರುವ ಉಪ್ಪಿನಂಗಡಿಯ  ಬಾಲ ಪ್ರತಿಭೆ ಅಧಿತಿ .ಆರ್ ರೈಯವವರ  ಪ್ರತಿಭಾ ಪರಿಚಯ ಹೀಗಿದೆ


            ೧೦.೦೭.೨೦೦೮ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಜನಿಸಿದ ಅಧಿತಿ ಪ್ರಸ್ತುತ  ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಉಪ್ಪಿನಂಗಡಿಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದು ,ಮಂಗಳೂರಿನ ತಾಲೂಕು ಕಛೇರಿಯಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ರಾಮಣ್ಣ ರೈ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯಾಗಿ ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಮಾವತಿ.ಕೆ ದಂಪತಿಯ ಪುತ್ರಿ.


  


     ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಸಾಬೀತುಪಡಿಸಿರುವ ಅಧಿತಿ ಒಂದನೇ ತರಗತಿಯಿಂದಲೇ ಭರತನಾಟ್ಯ ತರಬೇತಿಯನ್ನು ಗುರುಗಳಾದ ವಿದುಷಿ ಶಾಲಿನಿ ಆತ್ಮಭೂಷನ್ ಇವರಿಂದ ಪಡೆಯುತ್ತಿದ್ದು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ೯೩.೭೫% ಪಡೆದುಕೊಂಡಿರುತ್ತಾರೆ. 


ಇದುವರೆಗೂ ಹತ್ತಾರು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನವನ್ನಿತ್ತು ಶಹಬ್ಬಾಸ್ ಎನಿಸಿಕೊಂಡು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಸತೀಶ್ ಎ ನಾಯಕ್ ರವರ ಮಾರ್ಗದರ್ಶನದಲ್ಲಿ ಯೋಗ ಪಿರಮಿಡ್ ಗಳ ಪ್ರದರ್ಶನ ನೀಡಿ ಇದೇ ಅವಕಾಶ ಇವರನ್ನು ಯೋಗ ಕ್ಷೇತ್ರಕ್ಕೆ ಮುನ್ನುಡಿ ಬರೆಯುವಂತೆ ಮಾಡಿತು. 


ಯೋಗ ಕಲಿಯಬೇಕೆಂಬ ಹಂಬಲವನ್ನು ಪ್ರತಿಜ್ಞೆಯಾಗಿ ಸ್ವೀಕರಿಸಿಕೊಂಡು ಕಳೆದ ವರ್ಷದ ಲಾಕ್ ಡೌನ್  ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ  ಹಲವಾರು ಯೋಗ ಪ್ರದರ್ಶನಗಳ ವಿಡಿಯೋಗಳನ್ನು ವೀಕ್ಷಿಸಿ,ಅಭ್ಯಸಿಸಿ ತನಗೆ ತಾನೇ ಗುರುವಾದರು. 


ಪ್ರತಿದಿನವೂ ಎರಡು ಗಂಟೆ ಯೋಗಾಭ್ಯಾಸದಲ್ಲಿ ನಿರತರಾಗುವ ಅಧಿತಿ ನಂತರದ ದಿನಗಳಲ್ಲಿ  ಹೆಚ್ಚಿನ ಮಾರ್ಗದರ್ಶನಕ್ಕಾಗಿ ಸುಳ್ಯದ ರಾಷ್ಟ್ರ ಮಟ್ಟದ ಯೋಗ ಪಟು,ಯೋಗ ಗುರುಗಳಾಗಿರುವ ಸಂತೋಷ್ ಮುಂಡಕಜೆಯವರಿಂದ ಯೋಗೇನ ಚಿತ್ತಸ್ಯ ಎಂಬ ಯೋಗ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. 


ಅಧಿತಿಯವರ ಸಾಧನೆಯ ಕಿಚ್ಚಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಲಾಕ್ ಡೌನ್ ಅವಧಿಯ ನಂತರ ಒಂದು ವೇದಿಕೆಯಲ್ಲಿ ತಮ್ಮ ಯೋಗ ಪ್ರದರ್ಶನವನ್ನು ನೀಡಿರುತ್ತಾರೆ. ಹಲವಾರು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಇಷ್ಟೇ ಅಲ್ಲದೆ ಲಾಕ್ ಡೌನ್ ಅವಧಿಯನ್ನು ಚಿತ್ರಕಲೆಗೂ  ವಿನಿಯೋಗಿಸಿಕೊಂಡಿದ್ದಾರೆ.


           "ಯೋಗದೆಡೆಗೆ  ನನಗಿದ್ದ ಆಸಕ್ತಿ,ಅದರ ಬಗ್ಗೆ ತಿಳಿಯುವ ಕುತೂಹಲವನ್ನು ಇನ್ನೂ ಹೆಚ್ಚಿಸಿತು.ಕಲಿತಷ್ಟು ಮತ್ತೆ ಹೆಚ್ಚು ಕಲಿಯುವ ಹಂಬಲ ತೀವ್ರವಾಯಿತು.ನನ್ನ ಈ ಎಲ್ಲಾ ಸಾಧನೆಗೆ ದೊರಕುತ್ತಿರುವ ಶ್ಲಾಘನೆಗಳು ಹೆತ್ತವರಿಗೆ ಹಾಗೂ ಗುರುಗಳಿಗೆ ಸಲ್ಲಬೇಕು"ಎನ್ನುತ್ತಾರೆ ಅಧಿತಿ.ಸಾವಿರಾರು ಅವಕಾಶಗಳು ಎದುರು ನಿಂತರೂ ಕೈ ಚೆಲ್ಲುವವರಿಗೆ  ಅಧಿತಿಯವರ ಸಾಧನೆಯ ಹಾದಿ ನಿಜಕ್ಕೂ ಸಮರ್ಥ ಉದಾಹರಣೆ.


        ಮುಂದೆ ಯೋಗ ಕ್ಷೇತ್ರದಲ್ಲಿ ವಿಶ್ವ ದಾಖಲೆ ಮಾಡಬೇಕೆಂಬ ಗುರಿಯನ್ನಿಟ್ಟುಕೊಂಡಿರುವ ಈ ಬಹುಮುಖ ಪ್ರತಿಭೆಯ ಕನಸುಗಳೆಲ್ಲವೂ ಸಾಕಾರಗೊಳ್ಳಲಿ. ಇವರ ಸಾಧನೆಯ ಹಾದಿಗೆ ಇನ್ನಷ್ಟು  ಅವಕಾಶಗಳು,ಪ್ರಶಸ್ತಿಗಳು ಅರಸಿ ಬರಲಿ. ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲೆಂದು ಶುಭ ಹಾರೈಸೋಣ...


✍️ಅಖಿಲಾ  ಶೆಟ್ಟಿ

     ಕೆಯ್ಯೂರು

0 تعليقات

إرسال تعليق

Post a Comment (0)

أحدث أقدم