ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಯೋಗದಿನಾಚರಣೆ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಯೋಗದಿನಾಚರಣೆ

 



ದೇಸೀ ಸಂಸ್ಕೃತಿ, ಆಚರಣೆಗಳ ಬಗೆಗೆ ತಾತ್ಸಾರ ಬೇಡ : ಆದರ್ಶ ಗೋಖಲೆ

ಪುತ್ತೂರು: ನಮ್ಮ ದೇಸೀಯವಾದ ಸಂಸ್ಕೃತಿ, ಆಚರಣೆಗಳನ್ನು ಪ್ರಶ್ನಿಸುವ, ಅನುಮಾನಿಸುವ ಮತ್ತು ಅವಮಾನಿಸುವ ಕಾರ್ಯ ಆಧುನಿಕ ಶಿಕ್ಷಣದ ಪ್ರಭಾವದಿಂದಲಾಗಿ ಜಾರಿಗೆ ಬರುತ್ತಿದೆ. ಆದರೆ ನಾವಿಲ್ಲಿ ತಾತ್ಸಾರದಿಂದ ಕಾಣುವ ನಮ್ಮ ಆಚಾರ ವಿಚಾರಗಳು ವಿದೇಶಗಳಲ್ಲಿ ಸದ್ದಿಲ್ಲದೆ ಬಳಕೆಗೆ ಬರುತ್ತಿವೆ. ಇದನ್ನು ಗುರುತಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.


ಅವರು ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಯೋಗದಿನಾಚರಣೆ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ಸೋಮವಾರ ವಿಶೇಷ ಉಪನ್ಯಾಸ ನೀಡಿದರು.



ದೇಹದಾಢ್ರ್ಯತೆ ಕಾಪಾಡಿಕೊಳ್ಳುವುದು ಮಾತ್ರ ಯೋಗದ ಉದ್ದೇಶವಲ್ಲ. ಶರೀರ ಮತ್ತು ಮನಸ್ಸನ್ನು ಏಕೀಕೃತಗೊಳಿಸುವ ಬಹುದೊಡ್ಡ ಉದ್ದೇಶಕ್ಕಾಗಿ ಯೋಗ ಆಚರಿಸಲ್ಪಡುತ್ತದೆ.  ದೇಹ ಮತ್ತು ಮನಸ್ಸುಗಳ ಒಂದಾಗುವಿಕೆಯಿಂದ ಸಾಧನೆಯ ಹಿಮಾಲಯವನ್ನು ಏರುವುದಕ್ಕೆ ಸಾಧ್ಯ. ಮನೋದೈಹಿಕ ಶುದ್ಧತೆಯ ಕಾಪಾಡಿಕೊಳ್ಳುವಿಕೆಗೂ ಯೋಗ ಅತ್ಯಂತ ಸಹಕಾರಿ.  ಆದ್ದರಿಂದ ಯೋಗದಿನಾಚರಣೆಯೆಂದರೆ ಮೂರ್ನಾಲ್ಕು ಆಸನಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಷ್ಟೇ ಸೀಮಿತವಾಗಬಾರದು. ಬದಲಾಗಿ ನಮ್ಮ ಬದುಕಿನಲ್ಲಿ ಮುಂದೆ ಪ್ರತಿನಿತ್ಯವೂ ಆಚರಿಸುವ ಯೋಗಾಭ್ಯಾಸದ ಆರಂಭದ ದಿನವಾಗಬೇಕು. ಆಗ ಮಾತ್ರ ಯೋಗದ ಮಹತ್ವ ಅರಿವಾಗುವುದಕ್ಕೆ ಸಾಧ್ಯ ಎಂದರು.



ಪ್ರಾಚೀನ ಕಾಲದಲ್ಲಿ ಯೋಗವೂ ಶಿಕ್ಷಣದ ಅವಿಭಾಜ್ಯ ಅಂಗವಾಗಿತ್ತು. ಯಾಕೆಂದರೆ ಶಿಕ್ಷಣಾರ್ಥಿಯ ಯಶಸ್ಸಿನ ಹಿಂದೆ ಯೋಗ ಅತೀವವಾದ ಸತ್ಪರಿಣಾಮವನ್ನು ಮಾಡಬಲ್ಲುದು. ಆದರೆ ನಾವಿಂದು ಯೋಗದಿಂದ ದೂರಸರಿಯುತ್ತಿದ್ದೇವೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ  ಒಡಮೂಡುತ್ತಿಲ್ಲ. ಮಾನಸಿಕ ಕ್ಷಮತೆ ಕಂಡುಬರುತ್ತಿಲ್ಲ. ಪ್ರಾಣಾಯಾಮದಂತಹ ಯೋಗದ ಸಣ್ಣ ಸಣ್ಣ ಆಚರಣೆಗಳನ್ನು ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ಅಗಾಧವಾದ ಬದಲಾವಣೆಗಳನ್ನು ಕಾಣಲು ಸಾಧ್ಯ ಎಂದು ಹೇಳಿದರು.



ಪ್ರತಿಯೊಂದಕ್ಕೂ ಮನಸ್ಸೇ ಕಾರಣ ಎಂಬ ಮಾತನ್ನು ಭಗವಾನ್ ಶ್ರೀಕೃಷ್ಣ ಉಪದೇಶಿಸಿದ್ದಾನೆ. ಎಲ್ಲ ರೋಗಗಳ ಮೂಲ ಮನಸ್ಸೇ ಆಗಿದೆ. ಹಾಗಾಗಿ ಮನಸ್ಸಿನ ಮೇಲಿನ ಹಿಡಿತ ಎಲ್ಲರಿಗೂ ಅತ್ಯಂತ ಅವಶ್ಯಕ. ತನ್ನನ್ನು ತಾನು ಗೆದ್ದು ಜಗತ್ತನ್ನು ಗೆಲ್ಲುವ ಬಗೆಯನ್ನು ಯೋಗದಿಂದ ಸಾಧಿಸುವುದಕ್ಕೆ ಸಾಧ್ಯ. ನಾವು ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆಯಲ್ಲಿ ಮುಂದುವರಿದರೆ ಸಾಕು, ಉತ್ಕ್ರುಷ್ಟ ಜೀವನ ನಮ್ಮದಾಗುತ್ತದೆ. ಪ್ರತಿನಿತ್ಯ ಯೋಗ ಮಾಡುವುದರ ಮೂಲಕ ಇತರರಿಗೆ ಅಪಕಾರ ಮಾಡುವ ಭಾವನೆಯಿಂದ ಮುಕ್ತಿ ಹೊಂದಿದರೆ ಅದೇ ಯೋಗದಿನದ ಸಾರ್ಥಕ್ಯ ಎಂದು ಅಭಿಪ್ರಾಯಪಟ್ಟರು.



ನಮ್ಮ ಪೂರ್ವಜರು ಬಹಿರಂಗ ಸುಖವನ್ನು ತ್ಯಜಿಸಿ, ಆಂತರಂಗಿಕ ಸುಖಕ್ಕಾಗಿ ಮನಮಾಡಿದ್ದಾರೆ. ನಮ್ಮ ಹಿಂದಿನವರ ಪ್ರತಿಯೊಂದು ಆಚರಣೆಗಳಲ್ಲೂ ವೈಜ್ಞಾನಿಕ ಸತ್ಯಗಳು ಅಡಗಿರುವುದನ್ನು ಗುರುತಿಸುವುದಕ್ಕೆ ಸಾಧ್ಯ. ಭೋಪಾಲ್ ಅನಿಲ ದುರಂತದ ಸಂದರ್ಭದಲ್ಲೂ ಅಗ್ನಿಹೋತ್ರ ಹವನದ ಆಚರಣೆ ಮಾಡುತ್ತಿದ್ದ ಕುಟುಂಬಕ್ಕೆ ಯಾವುದೇ ಹಾನಿಯಾಗದೆ ಉಳಿದದ್ದು ನಮ್ಮ ಆಚರಣೆಗಳಲ್ಲಿರುವ ವೈಜ್ಞಾನಿಕ ಶಕ್ತಿಯನ್ನು ಅನಾವರಣಗೊಳಿಸಿದೆ. ಭಾರತದಲ್ಲಿನ ಪ್ರತಿಯೊಂದು ಸಂಶೋಧನೆಗಳೂ ಮನುಕುಲಕ್ಕೆ ಸಹಕಾರಿಯಾಗುವಂತಹದ್ದೆಂಬುದು ಹೆಮ್ಮೆ ಪಡಬೇಕಾದ ವಿಷಯ ಎಂದು ತಿಳಿಸಿದರು.


ಭಾರತ ಈ ಹಿಂದೆಯೇ ವಿಶ್ವಗುರು : ಅಧ್ಯಕ್ಷತೆ ವಹಿಸಿದ್ದ ನಟ್ಟೋಜ ಫೌಂಡೇಶನ್ ಟ್ರಸ್ಟ್ ನಉತ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಭಾರತ ವಿಶ್ವಗುರುವಾಗುವ ಬಗೆಗೆ ನಾವಿಂದು ಚರ್ಚಿಸುತ್ತಿದ್ದೇವೆ. ಆದರೆ ಭಾರತ ಈ ಹಿಂದೆಯೇ ವಿಶ್ವಗುರುವೆನಿಸಿದೆ. ಬ್ರಿಟಿಷ್ ಸಂಸತ್ತಿನಲ್ಲಿ ಮೆಕಾಲೆ ಭಾರತದ ಉತ್ಕ್ರುಷ್ಟತೆಯನ್ನು ವಿವರಿಸಿ ತಿಳಿಸಿದ್ದರ ಬಗೆಗೆ ದಾಖಲೆಗಳಲ್ಲಿ ವ್ಯಕ್ತವಾಗುತ್ತದೆ. ಹಾಗಾಗಿ ನಾವು ನಮ್ಮ ಹಿರಿತನವನ್ನು ಅರ್ಥಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಾವು ದೇಶದ, ವಿದೇಶದ ನಾನಾ ಭಾಗಗಳಿಗೆ ಹೋಗುವ ಸಂದರ್ಭವಿದ್ದರೆ ಅಲ್ಲೆಲ್ಲಾ ಭಾರತದ ಶ್ರೇಷ್ಟತೆಯನ್ನು ವ್ಯಕ್ತಪಡಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.


ಯೋಗ ರೋಗನಿವಾರಣೆಯ ದಾರಿ: ಅಂಬಿಕಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ವಿನಾಯಕ ಭಟ್ಟ ಗಾಳಿಮನೆ ಕಾರ್ಯಕ್ರಮ ನಿರ್ವಹಿಸಿ ಯೋಗ ರೋಗನಿವಾರಣೆಯ ದಾರಿ. ಆದರೆ ಇಂದು ಅದು ಮೂಲ ಉದ್ದೇಶಕ್ಕಿಂತ ಭಿನ್ನವಾಗಿ ವ್ಯಾವಹಾರಿಕ ನೆಲೆಯಲ್ಲಿ ಬಳಕೆಯಾಗುತ್ತಿದೆ. ಅದನ್ನು ಮೀರಿ ಸದುದ್ದೇಶದ ಬಳಕೆ ಜಾರಿಗೆ ಬರಬೇಕಿದೆ. ಯೋಗ ಮತ್ತು ತತ್ವಶಾಸ್ತ್ರಕ್ಕೆ ಅವಿನಾಭಾವ ಸಂಬಂಧವಿದೆ. ಹಾಗಾಗಿಯೇ ಅಂಬಿಕಾ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಬೋಧಿಸಲಾಗುತ್ತಿದೆ. ಬಿಎಸ್ಸಿ ವಿಭಾಗದಲ್ಲಿ ತತ್ವಶಾಸ್ತ್ರ ಬೋಧಿಸುತ್ತಿರುವ ದೇಶದ ಏಕೈಕ ಕಾಲೇಜೆಂಬ ಹೆಮ್ಮೆ ಅಂಬಿಕಾ ಕಾಲೇಜಿನದ್ದು ಎಂದು ಹೇಳಿದರು.

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم