ಉಜಿರೆ: ಆರ್ಥಿಕತೆಯ ನವಯುಗದಲ್ಲಿ ಭಾರತೀಯ ಆರ್ಥಿಕತೆಯ ವೇಗವರ್ಧಕಗಳಾಗಿ ಹೊರಹೊಮ್ಮಿರುವ ಎಂಎಸ್‌ಎಂಇ ಗಳ ಪಾತ್ರವನ್ನು ಹಾಗೂ ಸವಾಲುಗಳನ್ನು ಗುರುತಿಸಿ ಪೂರಕ ವಾತಾವರಣ ಕಂಡುಕೊಳ್ಳುವ ಅಗತ್ಯ ಇದೆ. ಇದರೊಂದಿಗೆ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗುವತ್ತ ಗಮನ ಹರಿಸಬೇಕಾಗಿದೆ ಎಂದು ದ.ಕ.ಜಿಲ್ಲೆಯ ಎಂಎಸ್‍ಎಂಇ ಘಟಕದ ನಿರ್ದೇಶಕರಾದ ಅಭಿಪ್ರಾಯಪಟ್ಟರು.
ದೇವರಾಜ್ ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅರ್ಥಶಾಸ್ತ್ರ ವಿಭಾಗವು ಇತ್ತೀಚೆಗೆ ಉಜಿರೆಯ ರುಡ್ಸೆಟಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ 'ಆರ್ಥಿಕ ಬೆಳವಣಿಗೆಯಲ್ಲಿ MSME ಗಳ ಪಾತ್ರ: ಸವಾಲುಗಳು ಮತ್ತು ನಿರೀಕ್ಷೆಗಳು' ಎಂಬ ವಿಷಯದ ಬಗ್ಗೆ ನಡೆದ ವೆಬಿನಾರನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇವರಾಜ್ ಅವರು ಅವರು ಮಾತನಾಡುತ್ತಾ, ಪ್ರಮಾಣದ ಆರ್ಥಿಕತೆಯ ಲಾಭ ಪಡೆಯಲು ಒಂದೇ ರೀತಿಯ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುವ ಕಿರು ಸಂಸ್ಥೆಗಳ ಗುಂಪುಗಳನ್ನು ಉತ್ತೇಜಿಸುವ ಪ್ರಕ್ರಿಯೆ ದೀರ್ಘಾವಧಿಯಲ್ಲಿ ಉತ್ತಮ ಫಲವನ್ನು ನೀಡುತ್ತದೆ. ಈ ವ್ಯವಸ್ಥೆಯ ಬೆಳವಣಿಗೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಲಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ತಾಲೂಕಿನ ಪ್ರಗತಿಪರ ಉದ್ಯಮಿ ವಿನಾಯಕ ರೈಸ್ ಇಂಡಸ್ಟ್ರೀಸ್ ನ ರೊ.ಶ್ರೀಕಾಂತ ಕಾಮತ್ ಮಾತನಾಡುತ್ತಾ ಸೇರ್ಪಡೆಯುಳ್ಳ ಅಭಿವೃದ್ಧಿಗೆ ಒತ್ತು ನೀಡುವ ಸೂಕ್ಷ ಘಟಕಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಒದಗಿಸಿದಾಗ ಸಹಜವಾಗಿ ನಿಜವಾದ ಅರ್ಥದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯ ಕುಮಾರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಂದು ಗಾಂಧೀಜಿಯವರ ಸ್ವಾವಲಂಬಿ ಗ್ರಾಮದ ಪರಿಕಲ್ಪನೆ ಹಾಗೂ ಅವರಿಂದ ಪ್ರೇರಿತರಾದ ಶುಮೇಕರ್ ಅವರ “ಸಣ್ಣದು ಸುಂದರ” ಪರಿಕಲ್ಪನೆ ಬಹಳ ಆಪ್ಯಾಮಾನವಾಗಿ ಕಾಣುತ್ತದೆ. ಪುಟ್ಟ ಪುಟ್ಟ ವ್ಯವಹಾರಗಳು ಇಂದು ರಾಷ್ಟ್ರದ “ಆರ್ಥಿಕ ಇಂಜಿನ್” ಗಳಾಗಿ ನಮಗೆ ಗೋಚರಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪಡದಯ್ಯ ಹಿರೇಮಠ ಅವರು ಮಾತನಾಡುತ್ತಾ, ಸಣ್ಣದು ಸುಂದರ ಹಾಗೂ ಅಸಹಾಯಕ. ಆದುದರಿಂದ ಕೌಶಲ್ಯವರ್ಧನೆ ಮೂಲಕ ಸಣ್ಣ ಉದ್ಯಮಗಳಿಗೆ ಕಾಯಕಲ್ಪ ನೀಡಬೇಕಾಗಿದೆ ಎಂದು ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆರ್ಥಿಕತೆಗೆ ನೀಡುವ ಕೊಡುಗೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು MSME ದಿನ (ಜೂನ್ 27) ಎಂದು ವಿಶ್ವಸಂಸ್ಥೆಯು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ರುಡ್ಸೆಟಿ ಟ್ರೈನಿ ದಿವ್ಯಶ್ರೀ ಪ್ರಾರ್ಥಿಸಿ, ರುಡ್ಸೆಟಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಜೇಮ್ಸ್ ಅಬ್ರಹಾಂ ಸ್ವಾಗತಿಸಿ, ಅರ್ಥಶಾಸ್ತ್ರ ಉಪನ್ಯಾಸಕ ಡಾ ಗಣರಾಜ್ ನಿರ್ವಹಿಸಿದರು. ರುಡ್ಸೆಟಿ ಸಂಸ್ಥೆಯ ಹಿರಿಯ ಉಪನ್ಯಾಸಕಿ ಅನಸೂಯ ರೈ ವಂದಿಸಿದರು. ಸುಮಾರು 100 ಜನ ಉದ್ಯಮಿಗಳು, ಪ್ರಾದ್ಯಾಪಕರು, ವಿದ್ಯಾರ್ಥಿಗಳು ಈ ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق