ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಭಿಮತ: ಕಾಸರಗೋಡಿನ ಮಲಯಾಳೀಕರಣ, ಕಾರವಾರದ ಕನ್ನಡೀಕರಣ- ಎರಡೂ ಸರಿಯಲ್ಲ

ಅಭಿಮತ: ಕಾಸರಗೋಡಿನ ಮಲಯಾಳೀಕರಣ, ಕಾರವಾರದ ಕನ್ನಡೀಕರಣ- ಎರಡೂ ಸರಿಯಲ್ಲ


ಕಾಸರಗೋಡಿನ ಕನ್ನಡದ ಊರುಗಳ ಹೆಸರುಗಳನ್ನು ಮಲಯಾಳೀಕರಿಸಲು ಕೇರಳ ಸರಕಾರ ಹೊರಟಿದ್ದು ಅನ್ಯಾಯ ಹೌದು.‌ ಕಾಸರಗೋಡಿನಲ್ಲಿ ಆಗುತ್ತಿರುವುದು ethnic cleansing. ಕಳೆದ 45-50 ವರ್ಷಗಳಲ್ಲಿ ಅಲ್ಲಿಂದ ಬಂದು ಕರ್ನಾಟಕದಲ್ಲಿ ನೆಲದಲ್ಲಿ ಬದುಕುತ್ತಿರುವ ತುಳು, ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷಿಕರ ಸಂಖ್ಯೆ ಊಹಿಸಲೂ ಆಗದಷ್ಟು ಅಗಾಧ. ಕಾಸರಗೋಡಿನ ಪ್ರತಿ ಮಲಯಾಳೇತರ ಕುಟುಂಬದ ಕನಸೆಂದರೆ ಮಂಗಳೂರು, ಪುತ್ತೂರು, ಸುಳ್ಯ, ವಿಟ್ಲ (ಈಗ ಬೆಂಗಳೂರು ಮತ್ತು ಮೈಸೂರು) ಇಲ್ಲಿ ಎಲ್ಲಾದರೂ ಒಂದು ಮನೆ ಅಥವಾ ನಿವೇಶನ ಖರೀದಿಸುವುದು!!


ಆದರೆ ಅದನ್ನು ವಿರೋಧಿಸುವ ಕನ್ನಡ ಭಾಷಿಕರು ನಮ್ಮ ಕರ್ನಾಟಕ ಸರಕಾರ ಮತ್ತು ಅದರ ಅಂಗ ಸಂಸ್ಥೆಗಳು ಕಾರವಾರ ಮತ್ತು ಜೋಯಿಡಾದ ಅಣಶಿ ಪ್ರಾಂತದಲ್ಲಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಏನಾದರೂ ಆಕ್ಷೇಪ ಎತ್ತಿದ್ದುಂಟೆ? ಕೇರಳದವರಷ್ಟು ಅಮಾನುಷವಾಗಿ ನಾವು ಮಾಡುತ್ತಿಲ್ಲ. ಆದರೆ ಅದು ನಡೆಯುತ್ತಿದೆ.  


ತಮಗೆ ತಿಳಿದಿರಬಹುದು. ಬೈತಕೋಲ ದಾಟಿ ಕಾರವಾರಕ್ಕೆ ಇಳಿದಿರೋ ಅಲ್ಲಿನ ಎಲ್ಲಾ ಜನವರ್ಗದವರ ಮಾತೃಭಾಷೆ ಕೊಂಕಣಿ. ಕಾಳೀನದಿ ಕಣಿವೆಯ ನೂರಾರು ಹಳ್ಳಿಗರು ಕೊಂಕಣಿಗರು. (ಅದು ಘಟ್ಟ ದಾಟಿದಾಗ ಸ್ವಲ್ಪ ಬದಲಾಗುತ್ತದೆ.) ಅಣಶಿ ಕೂಡಾ ಹಾಗೆಯೇ. ಅಲ್ಲಿ ಸರಕಾರಿ, ಅರೆ ಸರಕಾರಿ... ಎಲ್ಲ ಕಡೆ ಕೆಲಸ ಮಾಡುವವರು ಕನ್ನಡ ಮಾತನಾಡುವ ಹೊರಗಿನವರು. ಕೊಂಕಣಿ ಮಾತೃಭಾಷೆಯವರಿಗೆ ಸಿಗುವ ಕೆಲಸವೆಂದರೆ ಕಸಗುಡಿಸುವುದು, ತರಕಾರಿ ಮಾರುವುದು... ಅಷ್ಟೇ!  ಹೊರಗಿನಿಂದ ಬಂದ ಕನ್ನಡಿಗರು "ಕರ್ನಾಟಕದಲ್ಲಿದ್ದೂ ಇವುಗಳಿಗೆ ಕನ್ನಡ ಗೊತ್ತಿಲ್ಲ ಮಾರಾಯರೇ!" ಎಂದು ತಮಾಷೆ ಮಾಡುವುದು! ಕಾರವಾರದವರು ಸರಕಾರಿ ಕಚೇರಿಗಳಿಗೆ ಬರುವಾಗ ಅದೆಷ್ಟು ಮುಜುಗರದಿಂದ ಬರುತ್ತಾರೆ ಗೊತ್ತಿದೆಯಾ?? ಕಾರವಾರದವರ ಕನಸೆಂದರೆ ಗೋವಾ, ಸಾಂಗ್ಲಿ ಅಥವಾ ಪುಣೆಯಲ್ಲಿ ಒಂದು ಮನೆ ಮಾಡಬೇಕು ಅಥವಾ ನಿವೇಶನ ಖರೀದಿಸಬೇಕು!


 ಅಣಶಿಯ ಕಾಡನ್ನು ಕಾಯಲು ಕನ್ನಡ ಗೊತ್ತಿರುವ, ಹುಟ್ಟಿದ ಮೇಲೆ ಕಾಡನ್ನು ನೋಡದ ರಾಯಚೂರಿನವನು ಬರುತ್ತಾನೆ ವಿನಃ ಅಣಶಿಯ ಕಾಡಲ್ಲಿ ಹುಟ್ಟಿ ಬದುಕಿದ ಗಾವಡಾ, ವೇಳಿಪ್ ಮೊದಲಾದವರು ಬರುವುದಿಲ್ಲ. ಏಕೆಂದರೆ ಅವನಿಗೆ ಕನ್ನಡ ಗೊತ್ತಿಲ್ಲ! ಕಾರವಾರ, ಜೋಯಿಡಾದ ಹಳ್ಳಿಗಳಲ್ಲಿ ನಮ್ಮ ಗಡಿನಾಡ ಉತ್ಸವಗಳ ಅಧ್ವಾನ ನೋಡಬೇಕು! ಆಹಾ!!


ಅದು ಕರ್ನಾಟಕವಿರಲಿ, ಕೇರಳವಿರಲಿ,  ಭಾಷೆಯೇ ಬಂಡವಾಳ ಮಾಡಿಕೊಂಡು ಬದುಕುವ ಕವಿಗಳು, ವಿಮರ್ಶಕರು, ಮಾಧ್ಯಮದವರು ಎಂದಾದರೂ ಈ ವಿಕಲ್ಪದ ಬಗ್ಗೆ ಮಾತನಾಡಿದ್ದುಂಟೇ!? ಬಾಯಿ ತೆರೆದರೆ ವಿಶ್ವಮಾನವ, "ಮನುಜ ಕುಲ ತಾನೊಂದೆ ವಲಂ" ಎಂದು ರೈಲು ಬಿಡುವ ಈ ಅಕ್ಷರವಂತರಿಗೆ ಇನ್ನೊಂದು ಭಾಷೆಯನ್ನಾಡುವ ಮನುಷ್ಯನನ್ನು ಸಹಿಸಿಕೊಳ್ಳುವ ಹೃದಯವಿಲ್ಲ.  


ಅದು ಎಲ್ಲ ವಿಸ್ತರಣಾವಾದಿಗಳು ತೋರುವ ದುರ್ಬುದ್ಧಿ. ಅದು ಪ್ರಜಾಪ್ರಭುತ್ವಕ್ಕೂ ಅಂಟಿಕೊಂಡದ್ದು ಒಂದು ದೊಡ್ಡ ದುರಂತ. ನಮ್ಮ ತೋನ್ಸೆಪಾರ್ ದ್ವೀಪವು "ಸೈಂಟ್ ಮೇರಿ ದ್ವೀಪ"ವಾಯಿತು, ರಾಮಸೇತುವು "ಆಡಂ ಬ್ರಿಜ್" ಆಯಿತು! ಇಡೀ ಜಗತ್ತಿನಲ್ಲಿ  ಕ್ರೈಸ್ತ ಮತ್ತು ಇಸ್ಲಾಂ ಮತಗಳು ಬದಲಿಸಿದ ಹೆಸರುಗಳು ನೂರಾರು, ಸಾವಿರಾರು, ಲಕ್ಷಾಂತರ! ಉಡುಪಿ ನಗರಸಭೆ ವ್ಯಾಪ್ತಿಯ ಎಲ್ಲಾ ಬಡಾವಣೆಗಳು ಮಾಧ್ವಮಠಗಳ ಅಳಿದ ಸ್ವಾಮಿಗಳ ಹೆಸರುಗಳನ್ನು ಮಾತ್ರ ಹೊರುತ್ತವೆ!! ಅಲ್ಲಲ್ಲಿನ ಸುಂದರ ಗ್ರಾಮ್ಯ ಹೆಸರುಗಳು ಮಾಯ!  


ಬೆಂಗಳೂರು ಮೈಸೂರು ನಗರಗಳು ನುಂಗಿಹಾಕಿದ ಸುಂದರ ಹೆಸರುಗಳು ಅದೆಷ್ಟು!! ಕತ್ರಿಗುಪ್ಪೆ ಬನಶಂಕರಿ ಆಯಿತು, ರಾಗಿಗುಡ್ಡ ಜೆ.ಪಿ.ನಗರವಾಯಿತು! 


ಆಧುನಿಕತೆ, ಪ್ರಜಾಪ್ರಭುತ್ವ  ಎಂದು ಎಷ್ಟು ಬೀಗಿದರೇನು ಮನುಷ್ಯನ ದುಷ್ಟ ಗುಣ ಹೋಗುವುದಿಲ್ಲ!!


-ದೇವು ಹನೆಹಳ್ಳಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post