ಮಂಗಳೂರು : ನಗರದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಅದ್ದೂರಿಯಾಗಿ ವಿವಾಹ ನಡೆಯುತ್ತಿದ್ದು, ಸ್ಥಳಕ್ಕೆ ಆಗಮಿಸಿದ ಮಂಗಳೂರು ಮಹಾನಗರ ಪಾಲಿಕೆ (ಮನಪಾ) ಸಹಾಯಕ ಆಯುಕ್ತ ಮತ್ತು ಕಂದಾಯ ಇಲಾಖೆಯ ಉಪ ಆಯುಕ್ತ ಜಂಟಿ ದಾಳಿ ಮಾಡಿ ನಡೆಯುತ್ತಿದ್ದ ಮದುವೆಯನ್ನು ನಿಲ್ಲಿಸಿದ್ದಾರೆ.
ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆಯನ್ನು ಆಯೋಜನೆ ಮಾಡಲಾಗಿತ್ತು.
ಮದುವೆ ಹಿನ್ನೆಲೆ ದೇವಸ್ಥಾನದ ಮುಂಭಾಗದಲ್ಲಿ 40ಕ್ಕೂ ಹೆಚ್ಚು ಕಾರು ನಿಂತಿದ್ದು, ಇದರಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಬೆಳಗ್ಗಿನ ಹತ್ತೂವರೆ ಸುಮಾರಿಗೆ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಮದನ್ ಮೋಹನ್ ಮತ್ತು ಕಂದಾಯ ಇಲಾಖೆಯ ಉಪ ಆಯುಕ್ತ ಬಿನೋಯ್ ಸೇರಿದಂತೆ ಇತರ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲಾಕ್‌ಡೌನ್ ಕಾರಣ ಮನೆಯಲ್ಲಿಯೇ ಮದುವೆ ಮಾಡಲು ಅನುಮತಿಯಿದ್ದರೂ, 25 ಜನರು ಮೀರದಂತೆ ಸರಳ ಸಮಾರಂಭ ನಡೆಸಬೇಕು.
ಆದರೆ, ಕಾನೂನು ಮಿತಿ ಮೀರಿ ದೇವಸ್ಥಾನದಲ್ಲಿ ಅದ್ದೂರಿ ವಿವಾಹ ನಡೆಯುತ್ತಿದ್ದು, ಹಾಗಾಗಿ, ದಾಳಿ ನಡೆಸಿದ ಅಧಿಕಾರಿಗಳು ಸಮಾರಂಭದ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿಗೆ ಬಂದ ಮಾಹಿತಿ ಮೇರೆಗೆ, ಮಹಾನಗರ ಪಾಲಿಕೆ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿತ್ತು.
ಸಮಾರಂಭದ ಆಯೋಜಕರು ಮತ್ತು ಮದುವೆಗೆ ಅವಕಾಶ ಕೊಟ್ಟಿದ್ದ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿರುವುದು.
Post a Comment